ಎನ್‌ಸಿಬಿ ಅಧಿಕಾರಿ ಮೇಲೆ ಡ್ರಗ್ ಪೆಡ್ಲರ್ ಗಳಿಂದ ಹಲ್ಲೆ !
ಬೆಂಗಳೂರು, ಡಿಸೆಂಬರ್ 22: ವಿದೇಶದಿಂದ ಎಂಡಿಎಂಎ ಮತ್ತು ಕೊಕೇನ್ ತರಿಸಿ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಟೇಬಲ್ ಮೇಲೆ ಹಾಕುವ ಬಟ್ಟೆಯಲ್ಲಿ ವಿದೇಶದಿಂದ ಮಾದಕ ವಸ್ತು ತರಿಸಿದ್ದರು. ಬಂಧನ ಕಾರ್ಯಾಚರಣೆ ವೇಳೆ ಎನ್‌ಸಿಬಿ ಅಧಿಕಾರಿ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ನಕಲಿ ಪಾಸ್‌ಪೋರ್ಟ್ ಮೇಲೆ ಬೆಂಗಳೂರಿಗೆ ಬಂದು ನೆಲೆಸಿ ಡ್ರಗ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳಾದ ರಮ್ಲಾ, ಶೆಡಫಾ ನಾನ್ಸಿ ಹಾಗೂ ಇಮ್ಯಾನುಯಲ್ ಮೈಕಲ್ ಬಂಧಿತ ಆರೋಪಿಗಳು. ಇವರ ಬಳಿಯಿದ್ದ ನಕಲಿ ಪಾಸ್ ಪೋರ್ಟ್ ಗಳನ್ನು ಎನ್‌ಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ ಆರೋಪಿಗಳು ವಿದೇಶದಿಂದ ಕೊರಿಯರ್ ಮೂಲಕ ತರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 300 ಎಂಡಿಎಂಎ ಮಾತ್ರೆ ಹಾಗೂ 240 ಗ್ರಾಂ ಕೊಕೈನ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನ ಕಾರ್ಯಾಚರಣೆ ವೇಳೆ ಎನ್‌ಸಿಬಿ ಅಧಿಕಾರಿ ಸುನೀಲ್ ಪರೆವಾ ಮೇಲೆ ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಅಧಿಕಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ಸಾವಿರ ಎಂಡಿಎಂಎ ಮಾತ್ರೆಗಳು ಬೆಂಗಳೂರಿಗೆ ಬಂದಿರುವ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಪಾರ್ಸಲ್ ಜಾಡು ಹಿಡಿದು ಎನ್‌ಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಟೇಬಲ್ ಮೇಲೆ ಹಾಕುವ ಬಟ್ಟೆಯಲ್ಲಿ ಡ್ರಗ್ ತರಿಸುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಡ್ರಗ್ ಪಾರ್ಸೆಲ್ ಸ್ವೀಕರಿಸಲು ಬಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Recommended Video
ಆರೋಪಿಗಳನ್ನು ವಿಚಾರಣೆ ನಡೆಸಿದಾಗ 235 ಗ್ರಾಂ ಕೊಕೈನ್ ಕೊರಿಯರ್ ಬಂದಿರುವ ಮಾಹಿತಿ ನೀಡಿದ್ದು, ಇಥೋಪಿಯಾದಿಂದ ತರಿಸಿದ್ದ ಕೊಕೇನ್ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ರಮ್ಲಾ, ಶೆಡಫಾ ನಾನ್ಸಿ, ಹಾಗೂ ಇಮ್ಯಾನುಯಲ್ ಮೈಕಲ್ ರನ್ನು ವಿಚಾರಣೆ ನಡೆಸಿದಾಗ ನಕಲಿ ಪಾಸ್‌ಪೋರ್ಟ್ ಮೇಲೆ ಬೆಂಗಳೂರಿಗೆ ಬಂದಿರುವ ಸಂಗತಿ ಗೊತ್ತಾಗಿದೆ. ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಕಾರ್ಯಾಚರಣೆ ನೇತೃತ್ವವನ್ನು ಎನ್‌ಸಿಬಿ ಅಧಿಕಾರಿ ಅಮಿತ್ ಘವಾಟೆ ವಹಿಸಿದ್ದರು.












Click it and Unblock the Notifications