ಈ ಜಿಲ್ಲೆಯ ಕೈಗಾರಿಕೆ ಪ್ರದೇಶದ 23 ಗ್ರಾಮಗಳಿಗೆ ನೀರು ಪೂರೈಕೆಗೆ, ಅಭಿವೃದ್ಧಿಗೆ ಕ್ರಮ
ಬೆಂಗಳೂರು, ಸೆಪ್ಟಂಬರ್ 07: ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿವಿಧ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಜೊತೆಗೆ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಇದರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ಬುಧವಾರ ಕರೆದಿದ್ದ ಸಭೆಯಲ್ಲಿ ಸಚಿವರು ಮಾತನಾಡಿದರು. ರಾಮನಗರ ಜಿಲ್ಲೆ ವ್ಯಾಪ್ತಿಯ ಹಾರೋಹಳ್ಳಿ ಹಾಗೂ ಬಿಡದಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 23 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಿದ್ದೇವೆ. ಇಲ್ಲಿ ಮೂರು ಸರ್ಕಾರಿ ಮಾದರಿ ಶಾಲೆ ನಿರ್ಮಾಣಕ್ಕೆ ಸ್ಥಳ (ಜಾಗ) ನೀಡಲಾಗುವುದು ಎಂದು ಅವರು ತಿಳಿಸಿದರು.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗಗಳಾದ ಕುಣಿಗಲ್, ಆನೇಕಲ್‌ನ ಕೈಗಾರಿಕಾ ಪ್ರದೇಶಗಳಲ್ಲಿನ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಈ ಕುರಿತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ, ಕುಣಿಗಲ್ ಶಾಸಕ ಡಿ.ರಂಗನಾಥ್, ಆನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರಿನಿವಾಸಯ್ಯ ಮತ್ತಿತರರು ಚರ್ಚಿಸಿ ಕೆಲವು ವಿಚಾರಗಳನ್ನು ಸಚಿವರ ಗಮನಕ್ಕೆ ತಂದರು.
ಸಂಸದರ ಬೇಡಿಕೆಗೆ ಸಚಿವರ ಸಕಾರಾತ್ಮಕ ಸ್ಪಂದನೆ
ಕೈಗಾರಿಕಾ ಅಭಿವೃದ್ಧಿಗೆ ಜಮೀನು ಕೊಟ್ಟ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ ಎಂಬುದನ್ನು ಸಂಸದ ಡಿಕೆ ಸುರೇಶ್ ಸಭೆ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಎಂಬಿ ಪಾಟೀಲ್ ನೀರು ಪೂರೈಕೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ಕೊಟ್ಟರು.
ಸದ್ಯ ಕಾವೇರಿ ನದಿಯಿಂದ ನೀಡುತ್ತಿರುವ ನೀರಿನ ಪ್ರಮಾಣ ಕಡಿಮೆ ಇದೆ. ಅದನ್ನು ಹೆಚ್ಚಿಸಿಕೊಡುವ ಜವಾಬ್ದಾರಿ ಸಂಸದರದ್ದು ಎಂದು ಸಚಿವರು ಹೇಳಿದರು. ಇದಲ್ಲದೆ ಹಾರೋಹಳ್ಳಿ, ಕೊಳ್ಳಿಗಾನಹಳ್ಳಿ ಹಾಗೂ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರ್ಕಾರದ ವತಿಯಿಂದ ಮಾದರಿ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ತಲಾ ಐದು ಎಕರೆ ಭೂಮಿ ನೀಡಬೇಕೆನ್ನುವ ಬೇಡಿಕೆ ಇತ್ತು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವೇ ಈ ಕುರಿತ ಪ್ರಕ್ರಿಯೆ ನಡೆಯಲಿವೆ.

ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ
ರಾಮನಗರ ಭಾಗದ ಗ್ರಾಮಗಳಾದ ಹಾರೋಹಳ್ಳಿ, ಬಿಡದಿ ಮತ್ತು ಕುಣಿಗಲ್ ಕೈಗಾರಿಕಾ ಪ್ರದೇಶಗಳಲ್ಲಿನ ದ್ರವ ತ್ಯಾಜ್ಯ ಸಂಸ್ಕರಣೆಗಾಗಿ ತ್ಯಾಜ್ಯ ಸಂಸ್ಕರಣಾ ಘಟಕ (STP) ಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ಕುರಿತು ಬೇಡಿಕೆಗಳು ಸಭೆಯಲ್ಲಿ ಒಕ್ಕೋರಲಿನಿಂದ ಕೇಳಿ ಬಂತು. ಇದನ್ನೂ ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಮಹೇಶ್, ಮುಖ್ಯ ಎಂಜಿನಿಯರ್ ವೀರಭದ್ರಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications