Duniya Vijay: ದುನಿಯಾ ವಿಜಯ್ ಜೈಲಿಂದ ಬಿಡಿಸಿದ್ದ ಆರೋಪಿಯಿಂದ ಡಬಲ್ ಮರ್ಡರ್!
ಜೈಲು ಸೇರಿದ್ದ ವ್ಯಕ್ತಿಯೊಬ್ಬನನ್ನು ಕನ್ನಡದ ನಟ ದುನಿಯಾ ವಿಜಯ್ ಅವರು ಜೈಲಿನಿಂದ ಬಿಡಿಸಿ, ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಪ್ರೇರಣೆ ನೀಡಿದ್ದರು. ಆದರೆ, ಆ ಆರೋಪಿ ವಿಜಯ್ ಅವರ ಉದ್ದೇಶವನ್ನೇ ತಲೆಕೆಳಗಾಗಿಸಿದ್ದಾನೆ. ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿ ಬಿಡುಗಡೆಯಾಗಲು ಹಣವಿಲ್ಲದೆ ಪರದಾಡುವತ್ತಿರುವವರಿಗೆ ಆರ್ಥಿಕ ನೆರವು ನೀಡುವ ಮೂಲಕ ದುನಿಯಾ ವಿಜಯ್ ಅವರು ನೆರವಾಗುತ್ತಿದ್ದಾರೆ. ಆದರೆ, ಇಲ್ಲೊಬ್ಬ ಆರೋಪಿ ಅವರ ಆಶಯಕ್ಕೆ ಮಣ್ಣಾಕ್ಕಿದ್ದಾನೆ. ಇನ್ಮುಂದೆ ದುನಿಯಾ ವಿಜಯ್ ಅವರು ಯಾರನ್ನಾದರೂ ಜೈಲಿನಿಂದ ಬಿಡಿಸಬೇಕು ಎಂದಾದರೂ ಪದೇ ಪದೇ ವಿಚಾರ ಮಾಡುವಂತೆ ಆರೋಪಿ ಮಾಡಿದ್ದಾನೆ.
ಬೆಂಗಳೂರಿನ ಹೊರವಲಯದಲ್ಲಿ ಈಚೆಗೆ ಡಬಲ್ ಮರ್ಡರ್ ಆಗಿತ್ತು. ಈ ಮರ್ಡರ್‌ಗೆ ಸಂಬಂಧಿಸಿದಂತೆ ಇದೀಗ ಬಿಗ್ ಅಪ್ಡೇಟ್‌ವೊಂದು ಬಂದಿದೆ. ಈ ಡಬಲ್ ಮರ್ಡರ್ ಮಾಡಿರುವ ವ್ಯಕ್ತಿಯನ್ನೇ ಈ ಹಿಂದೆಯೊಂದು ಪ್ರಕರಣವೊಂದರಲ್ಲಿ ದುನಿಯಾ ವಿಜಯ್ ಅವರು ಬಿಡಿಸಿದ್ದರು ಎಂದು ಹೇಳಲಾಗಿದೆ. ಇದೀಗ ಆರೋಪಿ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದು, ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಜೋಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಲು ಸಾಧ್ಯವಾಗದೆ ಇರುವವರಿಗೆ ದುನಿಯಾ ವಿಜಯ್ ಅವರು ಶ್ಯೂರಿಟಿ ಹಾಗೂ ಆರ್ಥಿಕ ನೆರವು ನೀಡುತ್ತಿದ್ದಾರೆ. ಈಗಾಗಲೇ ಹಲವರಿಗೆ ವಿಜಯ್ ಅವರು ಈ ರೀತಿ ನೆರವು ನೀಡುತ್ತಿದ್ದು, ಹಲವು ಆರೋಪಿಗಳು ಸುಂದರ ಹಾಗೂ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅದಕ್ಕೆ ಅಪವಾದ ಎನ್ನುವಂತೆ ಇಲ್ಲೊಬ್ಬ ಮತ್ತೆ ಎರಡು ಮರ್ಡರ್ ಮಾಡಿ ಬಂದು ನಿಂತಿದ್ದಾನೆ.
ಬಾಗಲೂರಿನಲ್ಲಿ ಡಬಲ್ ಮರ್ಡರ್ ಮಾಡಿದ್ದಾನೆ ಎನ್ನಲಾಗಿರುವ ಆರೋಪಿ ಸುರೇಶ್ ಎನ್ನುವವನಿಗೆ ಈ ಮೊದಲು ಶ್ಯೂರಿಟಿ ಹಣ ನೀಡಿ ವಿಜಯ್ ಅವರು ಬಿಡಿಸಿದ್ದರು ಎಂದು ಹೇಳಲಾಗಿದೆ. ಈ ಆರೋಪಿಯು ಇದಕ್ಕೂ ಮೊದಲು ಸಹ ಜೋಡಿ ಕೊಲೆ ಹಾಗೂ ರೇಪ್‌ಕೇಸ್‌ವೊಂದರಲ್ಲಿ ಜೈಲು ಸೇರಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆತ 10 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದ. ಆದರೆ, ಶ್ಯೂರಿಟಿ ನೀಡಿ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ.
ಆಗ ಸುರೇಶ್ ಸೇರಿದಂತೆ ಕೆಲವು ಅಪರಾಧಿಗಳಿಗೆ ವಿಜಯ್ ಸಹಾಯ ಹಸ್ತ ಚಾಚಿದ್ದರು. ಇದೇ ಸಂದರ್ಭದಲ್ಲಿ ಸುರೇಶ್‌ಗೆ ಸಹ 3 ಲಕ್ಷ ರೂಪಾಯಿ ಶ್ಯೂರಿಟಿ ಹಣ ಕೊಟ್ಟು ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಸಹಾಯ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಕೊತ್ತಂಬರಿ ಸೊಪ್ಪು ಮಾರಾಟ ಮಾಡ್ತಿದ್ದ: ಜೈಲಿನಿಂದ ಬಿಡುಗಡೆಯಾದ ಮೇಲೆ ಆರೋಪಿ ಸುರೇಶ್, ಮಾರ್ಕೆಟ್‌ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿಕೊಂಡು ಒಳ್ಳೆಯ ಜೀವನವನ್ನೇ ಕಟ್ಟಿಕೊಂಡಿದ್ದನಂತೆ. ಅಲ್ಲದೇ ಈಚೆಗೆ ಶೆಡ್‌ವೊಂದರಲ್ಲಿ ಸಂಬಂಧಿಯ ಮೂಲಕ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಆದರೆ, ಇಲ್ಲಿ ಗುಜರಿ ಮಾರಾಟ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಮಾತಿಗೆ ಮಾತು ಬೆಳೆದು ಆರೋಪಿ ಮಂಜುನಾಥ್ ಹಾಗೂ ನಾಗೇಶ್ ಎನ್ನುವವರ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ತಪ್ಪು ಮಾಡಬೇಡಿ ಎಂದು ಉಪದೇಶ: ದುನಿಯಾ ವಿಜಯ್ ಅವರು ಜೈಲಿನಿಂದ ಬಿಡಿಸಿದ ಎಲ್ಲರಿಗೂ ಅವರು ಜೈಲಿನಿಂದ ಹೊರಗೆ ಬಂದಾಗ ಹೇಳುತ್ತಿದ್ದ ಮಾತು, ಮತ್ತೆ ತಪ್ಪು ಮಾಡಬೇಡಿ. ಒಳ್ಳೆಯ ಜೀವನ ಕಟ್ಟಿಕೊಳ್ಳಿ, ಒಳ್ಳೆಯದಾಗಲಿ ಅಂತ ಹೇಳ್ತಿದ್ದರು ಆದರೆ, ಈ ಆರೋಪಿ ಅವರ ಒಳ್ಳೆಯ ಆಲೋಚನೆಗೆ ಕಪ್ಪು ಮಸಿ ಬಳೆದಂತೆ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ಯಾಂಡಲ್‌ವುಡ್ ನಟನ ಒಳ್ಳೆಯ ಉದ್ದೇಶ ತಲೆಕೆಳಗಾಗಿದೆ ಎನ್ನಲಾಗಿದೆ.












Click it and Unblock the Notifications