ಬೆಂಗಳೂರಿನ ಈ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಳ!
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಅಮೃತಹಳ್ಳಿ ಮುಖ್ಯ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಬೆಂಗಳೂರು ಉತ್ತರ ನಗರ ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದು, ಇದರಲ್ಲಿ ಬೆಂಗಳೂರಿನಲ್ಲಿ ನಾಯಿಗಳ ಹಾವಳಿ ಹಾಗೂ ಇ ಖಾತಾ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ.
ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಿ ಮತ್ತು ರಸ್ತೆ ದುರಸ್ತಿಗೊಳಿಸಿ: ಫೋನ್-ಇನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಅಹವಾಲುಗಳು ರಸ್ತೆ ಗುಂಡಿಗಳ ಕುರಿತು ಬಂದ ಹಿನ್ನೆಲೆ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ತಕ್ಷಣ ತುಂಬುವಂತೆ ಹಾಗೂ ದುರಸ್ತಿಯ ಅಗತ್ಯವಿರುವ ಮಾರ್ಗಗಳಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ನಾಗರಿಕರ ಸುಗಮ ಸಂಚಾರಕ್ಕೆ ಅನುವಾಗುವಂತೆ ರಸ್ತೆಗಳ ನಿರ್ವಹಣೆಗೆ ಕ್ರಮ ವಹಿಸಲು ಸೂಚಿಸಿದ್ದಾರೆ.

ಆದ್ಯತೆ ಮೇರೆಗೆ ಆಕ್ರಮಣಕಾರಿ ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ: ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳಲ್ಲಿ ಹಲವು ಕಡೆ ಬೀದಿ ನಾಯಿಗಳ ಹಾವಳಿ ಕುರಿತ ಸಮಸ್ಯೆಗಳು ಹೆಚ್ಚಾಗಿ ಕೇಳಿ ಬಂದಿರುವುದನ್ನು ಗಮನಿಸಿದ ಆಯುಕ್ತರು ನಗರ ಪಾಲಿಕೆಯಲ್ಲಿರುವ ಅಕ್ರಮಣಕಾರಿ ಬೀದಿ ನಾಯಿಗಳನ್ನು ತಕ್ಷಣ ಆದ್ಯತೆ ಮೇರೆಗೆ ಗುರುತಿಸಿ, ಸೂಕ್ತ ಚಿಕಿತ್ಸೆಗೆ ಒಳಪಡಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲು ಸ್ಥಳದಲ್ಲಿದ್ದ ಪಶುಪಾಲನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅಹವಾಲುಗಳ ಸಾರಾಂಶ:
ರಸ್ತೆ ನಿರ್ವಹಣೆ, ದುರಸ್ತಿ ಮತ್ತು ರಸ್ತೆ ಗುಂಡಿಗಳು - 20 ದೂರುಗಳು
ತ್ಯಾಜ್ಯ ನಿರ್ವಹಣೆ - 7 ದೂರುಗಳು
ಇ-ಖಾತಾ ಮತ್ತು ಸಂಬಂಧಿತ ಸೇವೆಗಳು - 6 ದೂರುಗಳು
ಆರೋಗ್ಯ ಮತ್ತು ಬೀದಿ ನಾಯಿಗಳ ಸಮಸ್ಯೆ - 6 ದೂರುಗಳು
ಅಪಾಯ ಹಂತದಲ್ಲಿರುವ ಮರಗಳ / ರೆಂಬೆ ಕೊಂಬೆಗಳ ತೆರವು - 3 ದೂರುಗಳು
ಬೀದಿ ದೀಪಗಳ ನಿರ್ವಹಣೆ - 2 ದೂರುಗಳು
ಕಟ್ಟಡ ನಕ್ಷೆ ಸಂಬಂಧಿತ ವಿಷಯಗಳು - 2 ದೂರುಗಳು
ಉದ್ಯಾನವನಗಳ ನಿರ್ವಹಣೆ - 1 ದೂರು
ಟ್ರಾಫಿಕ್ ಸಮಸ್ಯೆ - 1 ದೂರು
ಅಲ್ಲದೆ, ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಒಳಪಡದ ಇತರೆ ನಗರ ಪಾಲಿಕೆಗಳಿಗೆ ಸಂಬಂಧಿಸಿದ 3 ಅಹವಾಲುಗಳು ಮತ್ತು ಟ್ರಾಫಿಕ್ ಮತ್ತು ಜಲ ಮಂಡಳಿಗೆ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿಸಿದ 3 ಅಹವಾಲುಗಳು ಬಂದಿದ್ದು, ಇವುಗಳನ್ನು ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ಹಾಗೂ ಸಂಬಂಧಿಸಿದ ಇತರೆ ಇಲಾಖೆಗಳಿಗೆ ರವಾನಿಸಲಾಗುವುದು ಎಂದು ಹೇಳಲಾಗಿದೆ. ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 39 ಕರೆಗಳನ್ನು ಸ್ವೀಕರಿಸಿದ್ದು ಒಟ್ಟಾರೆಯಾಗಿ 54 ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications