ಮಗು ತೆಗೆದು ಟವೆಲ್ ಬಿಟ್ಟ ಮಹಾವೈದ್ಯ!
ಮಂಗಳೂರು, ಸೆ. 16 : ಹೆರಿಗೆಗೆಂದು ಮಹಿಳೆ ಆಸ್ಪತ್ರೆಗೆ ದಾಖಲಾಗುತ್ತಾಳೆ. ಹೆರಿಗೆ ಮಾಡಿಸಿದ ವೈದರು ಟವೆಲ್ ವೊಂದನ್ನು ಮಹಿಳೆಯ ಹೊಟ್ಟೆ ಒಳಗೆ ಬಿಟ್ಟು ಹೊಲಿಗೆ ಹಾಕುತ್ತಾರೆ. ಇದು ಯಾವ ಹಾಸ್ಯ ಕಾರ್ಯಕ್ರಮದ ದೃಶ್ಯಗಳಲ್ಲ. ಇಂಥದ್ದೊಂದು ವಿಲಕ್ಷಣ ಘಟನೆಗೆ ಕುಂದಾಪುರ ಸಾಕ್ಷಿಯಾಗಿದೆ.
ಕುಂದಾಪುರದ ಶ್ರೀದೇವಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆ ಸುಲೋಚನಾ ಇದೀಗ ಮೂರನೇ ಸರ್ಜರಿಗೆ ತುತ್ತಾಗಬೇಕಾಗಿದೆ. ಡಾಕ್ಟರ್ ಮಾಡಿದ ಯಡವಟ್ಟು ಬಾಣಂತಿಯ ಜೀವಕ್ಕೆ ಸಂಚಕಾರ ತಂದಿದೆ.(ಮಂಗಳೂರಿನ 'ಮೃತ್ಯುಂಜಯ' ನವಜಾತ ಶಿಶು ಮರಣ)
ಕೆಲ ತಿಂಗಳ ಹಿಂದೆ ಬೆಂಗಳೂರು ನಿವಾಸಿ ಸುಲೋಚನ ಹೆರಿಗೆ ನಿಮಿತ್ತ ಕುಂದಾಪುರದ ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಲಭವಾಗಿ ಹೆರಿಗೆಯಾದ್ದರಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ 15 ದಿನಗಳ ನಂತರ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದೆ.
ನಂತರ ಸ್ಕ್ಯಾನಿಂಗ್ ನಡೆಸಿದಾಗ ಹೊಟ್ಟೆಯೊಳಗೆ ಟವೇಲ್ ಇರುವುದು ಗೊತ್ತಾಗಿದೆ. ಈಗ ಮತ್ತೊಮ್ಮೆ ಆಪರೇಷನ್ ಮಾಡಿ ಟವೆಲ್ ಹೊರತೆಗೆಯಲಾಗಿದ್ದು ಮಹಿಳೆ ಬೆಂಗಳೂರಿನ ನಿವಾಸದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಆದರೆ ಮಹಿಳೆಯನ್ನು ಸಂಪೂರ್ಣ ಗುಣಮುಖಮಾಡಲು ಇನ್ನೊಂದು ಸರ್ಜರಿ ಮಾಡಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ. ಇತ್ತ ಶ್ರೀದೇವಿ ಆಸ್ಪತ್ರಗೆ ಹಿಳೆಯ ಬಂಧುಗಳು ತೆರಳಿ ಈ ಬಗ್ಗೆ ಪ್ರಶ್ನಿಸಿದರೆ ಅಲ್ಲಿನ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications