"ಡಿಕೆಶಿ ಸಿಎಂ ಆಗಲು ಟನಲ್ ಯೋಜನೆಯಿಂದ ಹೈಕಮಾಂಡ್‌ಗೆ ಹಣ ಸಂಗ್ರಹ"
ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳವಣಿಗೆ ಕಾಣುತ್ತಿರುವ ನಗರ. ರಾಜ್ಯ ಸರ್ಕಾರ ಕೂಡ ಬೆಂಗಳೂರಿಗಾಗಿ ಸಾವಿರಾರು ಕೋಟಿಯ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದರಲ್ಲಿ ಟನಲ್ ರಸ್ತೆ ಕೂಡ ಒಂದು. ರಾಜ್ಯ ಸರ್ಕಾರ ಟನಲ್ ರಸ್ತೆ ಮಾಡೇ ಮಾಡ್ತೀವಿ ಎನ್ನುತ್ತಿದ್ದರೆ, ಇದು ಬೆಂಗಳೂರಿಗೆ ಬೇಡವೇ ಬೇಡ ಎಂಬ ವಿರೋಧವೂ ಜೋರಾಗಿದೆ. ಇದೀಗ ಡಿ.ಕೆ.ಶಿವಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಕನಸು ಈಡೇರಿಸಿಕೊಳ್ಳಲು ಹೈಕಮಾಂಡ್‌ಗೆ ಸಲ್ಲಿಸಬೇಕಾದ ಕಪ್ಪ ಕಾಣಿಕೆಗಾಗಿ ಮಾಡುತ್ತಿರುವ ಕಲೆಕ್ಷನ್ ಸ್ಕೀಮ್ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಹೌದು, ಜನರ ವಿರೋಧ, ತಜ್ಞರ ಅಭಿಪ್ರಾಯವನ್ನು ಲೆಕ್ಕಿಸದೆ ಪರಿಸರಕ್ಕೆ ಹಾನಿಯುಂಟು ಮಾಡುವ, ಜಲಮೂಲ ಅಂತರ್ಜಲಕ್ಕೆ ಕುತ್ತು ತರುವ ಅವೈಜ್ಞಾನಿಕ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿರುವುದು ಯಾರನ್ನು ಖುಷಿಪಡಿಸುವ ಸಲುವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರೇ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ₹18,500 ಕೋಟಿ ವೆಚ್ಚದ ಸುರಂಗ ರಸ್ತೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಕನಸು ಈಡೇರಿಸಿಕೊಳ್ಳಲು ಹೈಕಮಾಂಡ್‌ಗೆ ಸಲ್ಲಿಸಬೇಕಾದ ಕಪ್ಪ ಕಾಣಿಕೆಗಾಗಿ ಮಾಡುತ್ತಿರುವ ಕಲೆಕ್ಷನ್ ಸ್ಕೀಮು. ಇದರಲ್ಲಿ ಡೌಟೇ ಬೇಡ ಎಂದು ಆರೋಪಿಸಿದ್ದಾರೆ.
ಮುಂದಿನ 40 ವರ್ಷ ಟೋಲ್ ಕಟ್ಟಿ ನರಳಬೇಕು!
ಇನ್ನು ಈ ಟನಲ್ ರಸ್ತೆ ಯೋಜನೆಯಿಂದ ಬೆಂಗಳೂರಿಗರು ಮುಂದಿನ 40 ವರ್ಷ ಟೋಲ್ ಕಟ್ಟಿ ನರಳಬೇಕಿದೆ ಎಂದು ಬಿಜೆಪಿ ಕೂಡ ಎಚ್ಚರಿಸಿದೆ. ಗಂಟೆಗೆ 1,800 ಐಷಾರಾಮಿ ಕಾರುಗಳ ಓಡಾಟಕ್ಕಾಗಿ ₹70,000 ಕೋಟಿ ಜನರ ತೆರಿಗೆ ಹಣ ಸುರಿಯಲು ಡಿ.ಕೆ.ಶಿವಕುಮಾರ್ ಅವರು ಹೊರಟಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಈ ಯೋಜನೆಯಿಂದ ಬೆಂಗಳೂರಿಗರು ಮುಂದಿನ 40 ವರ್ಷ ಟೋಲ್ ಕಟ್ಟಿ ನರಳಬೇಕು. ವಿಜ್ಞಾನಿಗಳು ಹಾಗೂ ತಜ್ಞರು ಬೇಡ ಎನ್ನುತ್ತಿದ್ದರೂ 'ಸುರಂಗ' ಮಾಡಲು ಕಾಂಗ್ರೆಸ್ ಸರ್ಕಾರ ಜಿದ್ದಿಗೆ ಬಿದ್ದಿದೆ. ಇದು ಅಭಿವೃದ್ಧಿಯೋ ಅಥವಾ ಹಗಲು ದರೋಡೆಯೋ? ಜನಸಾಮಾನ್ಯರ ಮೇಲೆ ಬಂಡೆ ಕಲ್ಲು ಎಳೆಯುವ ಈ ಯೋಜನೆಯನ್ನು ಕೂಡಲೇ ಕೈಬಿಡಿ. ಬೆಂಗಳೂರಿನ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಆಗ್ರಹಿಸಿದೆ.
ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಆಡಳಿತವನ್ನು ಸಂಪೂರ್ಣವಾಗಿ ಮರೆತಿದೆ. ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಂತರ ಈಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯನವರೇ ಕೂಡಲೇ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ, ಬಂಧಿಸಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳ ಬಿಡುಗಡೆಗೆ ಸೂಚನೆ ನೀಡಿ ಎಂದು ಒತ್ತಾಯಿಸಿದೆ.












Click it and Unblock the Notifications