ರೈತರು ಯಾರೂ ತೆರಿಗೆ ಕಟ್ಟೊಲ್ಲ: ಜಿಂದಾಲ್ ಪರ ಡಿಕೆಶಿ ಬ್ಯಾಟಿಂಗ್
ಬೆಂಗಳೂರು, ಜೂನ್ 14: ಜಿಂದಾಲ್‌ಗೆ ಭೂಮಿ ನೀಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಸಚಿವ ಡಿಕೆ ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಉದ್ಯಮಿಗಳಿಗೆ ಭೂಮಿ ನೀಡುವುದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಜತೆಗೆ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಬಂಡವಾಳ ಹೂಡಿ ತೆರಿಗೆ ಕಟ್ಟುವವರಿಗೆ ಭೂಮಿ ನೀಡುತ್ತಾರೆ ಎಂದರು.
ಹಳ್ಳಿಗರೇನು ತೆರಿಗೆ ಕಟ್ಟುತ್ತಾರೆಯೇ? ಅವರು ಕೃಷಿ ಮಾಡಿಕೊಂಡು ಇರುತ್ತಾರೆ ಅಷ್ಟೇ. ತೆರಿಗೆ ಕಟ್ಟುವುದು ಉದ್ಯಮಿಗಳು ಮಾತ್ರ. ಬಂಡವಾಳ ಹೂಡುವುದು ಕಂಪೆನಿಗಳು ಮತ್ತು ಉದ್ಯಮಿಗಳು. ಇವು ಉದ್ಯೋಗ ಸೃಷ್ಟಿಸುತ್ತವೆ. ತೆರಿಗೆ, ಜಿಎಸ್‌ಟಿ ಕಟ್ಟುತ್ತಾರೆ. ಇತರೆ ನಿಯಮಗಳನ್ನು ಕೂಡ ಪಾಲಿಸುತ್ತಾರೆ. ಹೀಗಾಗಿ ತೆರಿಗೆ ಕಟ್ಟುವವರಿಗೆ ಭೂಮಿ ಕೊಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ಜಿಂದಾಲ್‌ಗೆ ಭೂಮಿ ಕೊಡುವುದನ್ನು ನಾನಂತೂ ಬೆಂಬಲಿಸುತ್ತೇನೆ. ಇಂತಹ ಕಂಪೆನಿಗಳಿಗೆ ಅವಕಾಶ ನೀಡದೆ ಇದ್ದರೆ ಸರ್ಕಾರ ಎಲ್ಲಿಂದ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯ? ನಾನು ಜಿಂದಾಲ್ ಪರ ಇದ್ದೇನೆ ಎಂದರು.

ಆರಂಭಿಸಿದ್ದೇ ಬಿಜೆಪಿಯವರು
ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಅವರೇ ಜಿಂದಾಲ್‌ಗೆ ಭೂಮಿ ಕೊಡುವ ವಿಚಾರಕ್ಕೆ ತಳಹದಿ ಹಾಕಿದವರು. ಬೇಕಾದರೆ ದಾಖಲೆಗಳನ್ನು ತೆಗೆದು ನೋಡಲಿ. ಬಿಜೆಪಿಯವರು ಈ ಪ್ರತಿಭಟನೆಯನ್ನು ಮುಂಚೆಯೇ ಆರಂಭಿಸಬೇಕಿತ್ತು ಎಂದು ವ್ಯಂಗ್ಯವಾಡಿದರು.

ಲಾಭ ಇಲ್ಲದೆ ವ್ಯವಹಾರವಿಲ್ಲ
ಜಿಂದಾಲ್ ಒಳ್ಳೆಯ ಉದ್ಯಮಿ. ಲಾಭ ಇಲ್ಲದೆಯೇ ಯಾರೂ ವ್ಯವಹಾರ ಮಾಡಲು ಮುಂದಾಗುವುದಿಲ್ಲ. ಲಾಭ ಇದ್ದರೂ ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸಾಕಷ್ಟು ನಿರುದ್ಯೋಗಿಗಳಿಗೆ ಕೆಲಸ ಸಿಕ್ಕು ಅನುಕೂಲ ಆಗುತ್ತದೆ ಎಂದರು.

ಉದ್ಯಮಿಗಳು ಹೊರಹೋಗಬಾರದು
ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ವಿಚಾರವನ್ನು ಮರುಪರಿಶೀಲನೆ ಮಾಡುವುದಕ್ಕೆ ಮುಖ್ಯಮಂತ್ರಿ ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮರುಪರಿಶೀಲನೆ ಮಾಡುವುದರಲ್ಲಿ ತಪ್ಪಿಲ್ಲ. ನಮ್ಮ ರಾಜ್ಯದಿಂದ ಉದ್ಯಮಿಗಳು ಹೊರಹೋಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಅವರ ಖುಷಿಗೆ ಹೇಳಿಕೊಳ್ಳಲಿ
ಸರ್ಕಾರ ಬಿದ್ದುಹೋಗುತ್ತದೆ ಎಂಬ ಬಿಜೆಪಿಯವರ ಭವಿಷ್ಯವನ್ನೂ ಕೇಳಿದ್ದೇನೆ, ಕೋಳಿವಾಡ ಅವರ ಭವಿಷ್ಯವನ್ನೂ ಕೇಳಿದ್ದೇನೆ. 20 ಶಾಸಕರು ಕಚ್ಚಾಡಿಕೊಂಡು ಮೈತ್ರಿಯಿಂದ ಹೊರಬರುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಅವರವರ ಖುಷಿಗೆ ಏನಾದರೂ ಹೇಳಿಕೊಳ್ಳಲಿ. ಯಾರು ಏನೇ ಭವಿಷ್ಯ ನುಡಿದರೂ ಸರ್ಕಾರ ಗಟ್ಟಿಯಾಗಿಯೇ ಇರುತ್ತದೆ ಎಂದು ಹೇಳಿದರು.












Click it and Unblock the Notifications