ಬೆಚ್ಚಿಬಿದ್ದ ‘ಕನಕಪುರ ಬಂಡೆ’: ಹೆಲಿಕಾಪ್ಟರ್‌ನಲ್ಲಿ ಹೆದರಿದ ಡಿಕೆಶಿ
ಬೆಂಗಳೂರು: ಡಿ.ಕೆ. ಶಿವಕುಮಾರ್ ಯಾವಾಗಲೂ ಖಡಕ್ ಮಾತುಗಳಿಂದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಈ ಸಂದರ್ಭದಲ್ಲಿ 'ನನ್ನ ಯಾರೂ ಹೆದರಿಸಲು ಆಗಲ್ಲ' ಅನ್ನೋ ಮಾತನ್ನ ರಿಪೀಟ್ ರಿಪೀಟ್ ಮಾಡಿ ಅದೆಷ್ಟೋ ಬಾರಿ ಎದುರಾಳಿಗಳಿಗೆ ನಡುಕ ಕೂಡ ತರಿಸಿದ್ದಾರೆ. ಆದರೆ ಇಂದು ನಡೆದ ಘಟನೆಯಲ್ಲಿ, ಹದ್ದು ಬಂದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಾಗ ಒಂದು ಕ್ಷಣ ಡಿಕೆಶಿ ನಡುಗಿ ಹೋದರು.
ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೋಲಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ಗೆ ಇಂದು ಮಧ್ಯಾಹ್ನ ಹದ್ದು ಡಿಕ್ಕಿ ಹೊಡೆದ ಪರಿಣಾಮ ತಕ್ಷಣ ಲ್ಯಾಂಡ್ ಮಾಡ್ಲಾಗಿತ್ತು. ದೇವರ ದಯೆಯಿಂದ ಪಾರಾದೆ ಎಂಬುದನ್ನ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಲಿಲ್ಲ. ಆದರೆ ಘಟನೆ ನಡೆದಾಗ ಡಿ.ಕೆ. ಶಿವಕುಮಾರ್ ಬೆಚ್ಚಿಬಿದ್ದಿರುವ ದೃಶ್ಯ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗುತ್ತಿದೆ. ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆಯುವಾಗ ಡಿ.ಕೆ. ಶಿವಕುಮಾರ್ ಹಿಂಬದಿ ಕೂತಿದ್ದರು. ಆಗ ಏನಾಯ್ತು ಅಂತಾ ಮುಂದೆ ಓದಿ.

ಟಿವಿ9 ಜೊತೆ ಡಿಕೆಶಿ ಚಿಟ್‌ಚಾಟ್
ಎಲೆಕ್ಷನ್ ಓಡಾಟದಲ್ಲಿ ಬ್ಯುಸಿಯಾಗಿರುವ ಡಿ.ಕೆ. ಶಿವಕುಮಾರ್ ಹೆಲಿಕಾಪ್ಟರ್ ಬಳಸಿ ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಹೆಲಿಕಾಪ್ಟರ್‌ನಲ್ಲಿ ಹೋಗುವಾಗಲೇ ಟಿವಿ9 ವರದಿಗಾರನ ಜೊತೆ ಚಿಟ್‌ಚಾಟ್ ಅಂದರೆ ಪುಟ್ಟ ಸಂದರ್ಶನದಲ್ಲಿ ಭಾಗಿಯಾದರು ಡಿ.ಕೆ. ಶಿವಕುಮಾರ್. ಟಿವಿ9 ವರದಿಗಾರ ಕೇಳುವ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಉತ್ತರ ನೀಡುತ್ತಲೇ ಕೂತಿದ್ದರು. ಆಗ ಹೆಲಿಕಾಪ್ಟರ್ ಸಾಮಾನ್ಯವಾಗಿ ಮುಂದೆ ಸಾಗುತ್ತಿತ್ತು, ಇದ್ದಕ್ಕಿದ್ದಂತೆ ನಡೆದೇಬಿಟ್ಟಿತು ನೋಡಿ ಘೋರ ದುರಂತ.
DK Shivakumar helicopter hit by a kite which shattered chopper glass from one side to pieces. Emergency landing of the Helicopter took place safely. DK was giving an interview to TV9 Kannada when the accident took place during election campaigning. https://t.co/qHjlwbu6P9 pic.twitter.com/8s8xKvEvbr
— Aditya Raj Kaul (@AdityaRajKaul) May 2, 2023
ಹೆಲಿಕಾಪ್ಟರ್‌ಗೆ ಢಂ ಅಂತಾ ಹದ್ದು ಡಿಕ್ಕಿ!
ಯೆಸ್, ಡಿ.ಕೆ. ಶಿವಕುಮಾರ್ ಪ್ರಯಾಣ ಮಾಡ್ತಿದ್ದ ಹೆಲಿಕಾಪ್ಟರ್ ಮೇಲೆ ದಿಢೀರ್ ನುಗ್ಗಿದ ಹದ್ದು ಡಿಕ್ಕಿಯಾಗಿದೆ. ಹೀಗೆ ಟಿವಿ9 ವರದಿಗಾರನ ಜೊತೆಗೆ ಸಂದರ್ಶನ ನಡೆಸುವಾಗ ಹದ್ದು ಬಂದು ಹೆಲಿಕಾಪ್ಟರ್ ಮುಂಬದಿಯ ಗ್ಲಾಸ್‌ಗೆ ಡಿಕ್ಕಿಯಾಗಿ ಒಳಗೆ ಬಂದು ಬಿದ್ದು ಬಿಟ್ಟಿತು. ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಬೆಚ್ಚಿಬೀಳುತ್ತಾರೆ. ಕೊನೆಗೆ ಪೈಲಟ್ ಕಡೆಗೂ ಒಮ್ಮೆ ಭಯದಲ್ಲೇ ತಿರುಗಿ ನೋಡಿ, ಸುಮ್ಮನೆ ಕೂತುಬಿಡುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿ, ಸಖತ್ ಸಂಚಲನ ಸೃಷ್ಟಿಸುತ್ತಿದೆ.

ಅಸಲಿಗೆ ಘಟನೆ ನಡೆದಿದ್ದು ಹೇಗೆ?
ಡಿ.ಕೆ. ಶಿವಕುಮಾರ್ ಮುಳಬಾಗಿಲಿನಲ್ಲಿ ಚುನಾವಣೆ ಪ್ರಚಾರ ನಡೆಸಲು ಮಂಗಳವಾರ ಮಧ್ಯಾಹ್ನ 12.10ಕ್ಕೆ ಜಕ್ಕೂರಿನ ವಿಮಾನ ನಿಲ್ದಾಣದ ಮೂಲಕ ಹೊರಟರು. ಹೆಲಿಕಾಪ್ಟರ್‌ನಲ್ಲಿ ಡಿಕೆಶಿ ಪ್ರಯಾಣ ಆರಂಭಿಸಿದ್ದರು. ಆದರೆ ಹೊಸಕೋಟೆ ಸಮೀಪ ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ಗಾಜು ಪುಡಿ ಪುಡಿ ಆಗಿದೆ. ಇನ್ನು ಪೈಲಟ್ ಸಮಯಪ್ರಜ್ಞೆ ಹೇಗಿತ್ತು ಅಂದ್ರೆ, ಆಗ ತಕ್ಷಣ ಎಚ್‌ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂ ಸ್ಪರ್ಶ ಮಾಡಿಸಿದ್ದಾರೆ. ಈ ಮೂಲಕ ಹೆಲಿಕಾಪ್ಟರ್‌ನ ಸೇಫ್ ಆಗಿ ಲ್ಯಾಂಡ್ ಮಾಡಿ ಎಲ್ಲರ ಜೀವ ಉಳಿಸಿದ್ದಾರೆ.
'ದೇವರೇ ನನ್ನ ಕಾಪಾಡಿದ್ದಾರೆ'
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ. ಹೆಲಿಕಾಪ್ಟರ್ ಟೇಕಾಫ್ ಆಗಿ 7 ರಿಂದ 8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿಯಾಗಿದೆ. ಮಾಧ್ಯಮದವರು ಪಕ್ಷದ ಪ್ರಣಾಳಿಕೆಯ ಕುರಿತು ಸಂದರ್ಶನವನ್ನ ಮಾಡುತ್ತಿದ್ದಾಗ ಘಟನೆ ನಡೆದಿದೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದ್ದಾರೆ.

ಒಟ್ನಲ್ಲಿ ಚುನಾವಣೆ ಹೊತ್ತಲ್ಲೇ ಭೀಕರ ದುರಂತ ತಪ್ಪಿದೆ. ಅದೃಷ್ಟವಶಾತ್ ಕೆಪಿಸಿಸಿ ಅಧ್ಯಕ್ಷರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಅವರ ಹೆಲಿಕಾಪ್ಟರ್‌ಗೆ ಹೀಗಾಗಿದೆ ಎಂಬ ಸುದ್ದಿ ಎಲ್ಲೆಲ್ಲೂ ಹರಡಿತ್ತು. ಅದರಲ್ಲೂ ಹೆಲಿಕಾಪ್ಟರ್ ಪರಿಸ್ಥಿತಿ ನೋಡಿ ಡಿ.ಕೆ. ಶಿವಕುಮಾರ್ ಫ್ಯಾನ್ಸ್ ಮತ್ತು ಬೆಂಬಲಿಗರು ಹೆದರಿದ್ದರು. ಆದರೆ ಸ್ವತಃ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.












Click it and Unblock the Notifications