ಬೆಂಗಳೂರಿನ ಜೊತೆ ಇರುವ ನಂಟು; ಅಶ್ವತ್ಥ್ ನಾರಾಯಣಗೆ ಡಿಕೆಶಿ ಉತ್ತರ!
ಬೆಂಗಳೂರು, ಜೂನ್ 27: "ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಕೆಂಪೇಗೌಡರು ಕಟ್ಟಿದ ಪ್ರದೇಶ. ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ" ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ. ಕೆ. ಶಿವಕುಮಾರ್ ಈ ಮೂಲಕ ಮಾಜಿ ಸಚಿವ, ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣಗೆ ತಿರುಗೇಟು ನೀಡಿದರು. "ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅಶ್ವತ್ಥ್ ನಾರಾಯಣಗೆ ಗೊತ್ತಿಲ್ಲ" ಎಂದರು.

"ತಮಿಳುನಾಡಿನ ಗಡಿ ಭಾಗದಲ್ಲಿ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ನಿಜಲಿಂಗಪ್ಪ ಅವರ ಮನೆ ಪಕ್ಕ ವೀರೇಂದ್ರ ಪಾಟೀಲ್ ಅವರ ಮನೆ ಇದೆ. ಅದರ ಪಕ್ಕದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ಮನೆ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧ" ಎಂದು ಡಿ. ಕೆ. ಶಿವಕುಮಾರ ವಿವರಣೆ ನೀಡಿದರು.
ಬೆಂಗಳೂರಿನ ನಂಟು ತಿಳಿದಿಲ್ಲ; ಡಿ. ಕೆ. ಶಿವಕುಮಾರ್ ಮಾತನಾಡಿ, "ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ಥ್ ನಾರಾಯಣ ಅವರಿಗೆ ಗೊತ್ತಿಲ್ಲ. ಅದಕ್ಕೆ ಅವರು ಮಾತನಾಡುತ್ತಾರೆ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ" ಎಂದು ತಿರುಗೇಟು ನೀಡಿದರು.
ಕೆಲವು ದಿನಗಳ ಹಿಂದೆ ಅಶ್ವತ್ಥ್ ನಾರಾಯಣ ಡಿ. ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. "ನಾನು ರಾಮನಗರ ಉಸ್ತುವಾರಿಯಾದಾಗ ನಿನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಡಿ. ಕೆ. ಶಿವಕುಮಾರ್ ಕೇಳಿದ್ದರು. ಈಗ ನಾನು ಕೇಳ್ತಿನಿ ನಿನಗೂ ಬೆಂಗಳೂರಿಗೂ ಏನಪ್ಪ ಸಂಬಂಧ ಶಿವಕುಮಾರ?" ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮ; "ಇಂದು ನಾವು ಕೆಂಪೇಗೌಡ ಜಯಂತಿ ನಾವು ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದಾಗ ಯಾವ ದಿನ ಜಯಂತಿ ಆಚರಿಸಬೇಕು? ಎಂಬುದರ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಆಗ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ, ಇತಿಹಾಸ ತಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಲಾಯಿತು. ಈ ಸಮಿತಿ ಅಧ್ಯಯನ ಮಾಡಿ ಜೂನ್ 27ರಂದು ಕೆಂಪೇಗೌಡ ಜಯಂತಿ ಎಂದು ತೀರ್ಮಾನಿಸಿತು" ಎಂದರು.
"ಅಂದಿನಿಂದ ಸರ್ಕಾರ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದೆ. ಅಶೋಕ್ ಅವರು ಮುಂದಾಳತ್ವದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ಕೆಂಪೇಗೌಡ ಜಯಂತಿ ಆಚರಣೆಯನ್ನು ರಾಜ್ಯಕ್ಕೆ ವಿಸ್ತರಿಸಿ, ರಾಜ್ಯದ ಎಲ್ಲೆಡೆ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದೆವು" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
"ಇಂದು ಬೆಂಗಳೂರಿನಲ್ಲಿ ಹಾಗೂ ಹಾಸನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತಿದೆ.
ಕೆಂಪೇಗೌಡ ಪ್ರಾಧಿಕಾರ ಸಭೆಯಲ್ಲಿ ಶೇ 75 ಕ್ಕಿಂತ ಹೆಚ್ಚು ಒಕ್ಕಲಿಗರು ಇದ್ದಾರೆ. ಇದನ್ನು ನೋಡಿ ನಾಚಿಕೆ ಆಯಿತು. ಕೆಂಪೇಗೌಡ ಯಾವತ್ತೂ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಜಾತಿ ಹಾಗೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ನಾವು ಹುಟ್ಟುವಾಗ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ನಮ್ಮ ತಂದೆ, ತಾಯಿ ಜಾತಿ ಧರ್ಮ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ" ಎಂದರು.
"ಕೆಂಪೇಗೌಡರ ಆಚಾರ, ವಿಚಾರ ಜಾತಿ ಮೇಲೆ ನಿಂತಿರಲಿಲ್ಲ. ಅವರು ಜಾತಿ ಮೇಲೆ ಕೆಲಸ ಮಾಡಿದ್ದಾರೆ ಬೆಂಗಳೂರಿನಲ್ಲಿ 52 ವಿವಿಧ ಸಮುದಾಯಗಳ ಪೇಟೆಗಳು ಆಗುತ್ತಿರಲಿಲ್ಲ. ಸಮಾಜದಲ್ಲಿ ಎಲ್ಲಾ ವರ್ಗದವರಿಗೆ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ. ಇಂದು ನಾವು ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಮೂವರು ಮಹನೀಯರನ್ನು ಸ್ಮರಿಸಬೇಕು ಅದು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್. ಎಂ. ಕೃಷ್ಣ. ಇವರು ಕಟ್ಟಿರುವ ಬೆಂಗಳೂರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕೆಂಪೇಗೌಡರ ಸ್ಥಂಭ ಹೇಗೆ ಸ್ಮಾರಕವಾಗಿದೆಯೋ ಅದೇರೀತಿ ನಾವು ನಮ್ಮ ಕೆಲಸಗಳ ಮೂಲಕ ಸಾಕ್ಷಿ ಗುಡ್ಡೆ ನಿರ್ಮಿಸಬೇಕು" ಎಂದು ಡಿ. ಕೆ. ಶಿವಕುಮಾರ್ ಕರೆ ನೀಡಿದರು.
"ಬೆಂಗಳೂರು ಕೆಲವು ಭಾಗಗಳು ಮಾತ್ರ ಯೋಜಿತ ನಗರವಾಗಿದ್ದು, ಉಳಿದ ಭಾಗಗಳು ಯೋಜನೆ ರಹಿತವಾಗಿ ಬೆಳೆದುಕೊಂಡಿದೆ. ಇಲ್ಲಿನ ಹವಾಮಾನದಲ್ಲಿ ಬದುಕಿದವರು ಇದನ್ನು ಬಿಟ್ಟು ಹೋಗುವುದಿಲ್ಲ. ಈ ಬೆಂಗಳೂರು ನೆಲದಲ್ಲಿ ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮಿ ಹುಟ್ಟಿದ್ದಾರೆ. ಇದು ಈ ನೆಲದ ವೈಶಿಷ್ಟ್ಯತೆ. ಇದನ್ನು ಧರ್ಮವಾಗಿ, ಅಭಿವೃದ್ಧಿ ಹಾಗೂ ಪ್ರಗತಿಯಾಗಿದೆ ಉಳಿಸಿಕೊಂಡು ಹೋಗಬೇಕು. ಹೀಗಾಗಿ ಈ ಬೆಂಗಳೂರು ಅಭಿವೃದ್ಧಿ ಮಾಡಬೇಕು. ನಾನು ಬಹಳ ಉತ್ಸುಕತೆಯಿಂದ ಬೆಂಗಳೂರು ನಗರದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ನಾನು ನಿಮ್ಮೆಲ್ಲರ ಸಲಹೆ ಕೇಳಿದ್ದೇನೆ. ನಿಮ್ಮ ಸಲಹೆ ಅಭಿಪ್ರಾಯ ನೀಡಿ. ನಿಮ್ಮ ಸಹಕಾರ ಆಶೀರ್ವಾದ ನಮ್ಮ ಮೇಲಿರಲಿ" ಎಂದರು.












Click it and Unblock the Notifications