DKS CBI Probe Revoke: 'ಬಿಜೆಪಿ' ಮಾಡಿದ ತಪ್ಪನ್ನು 'ಕಾಂಗ್ರೆಸ್' ಮಾಡಲು ಸಿದ್ಧವಿಲ್ಲ: ಗೃಹ ಸಚಿವ
ಬೆಂಗಳೂರು, ನವೆಂಬರ್ 24: ಈ ಹಿಂದೆ ಬಿಜೆಪಿ ಸರ್ಕಾರವು ರಾಜಕೀಯ ಪ್ರೇರಿತವಾಗಿ ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಈ ಪ್ರಕ್ರಿಯೆಯಲ್ಲಿ ಕಾನೂನು ಪಾಲನೆ ಮಾಡಿಲ್ಲ ಎಂದು ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಶುಕ್ರವಾರ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಕರಣವನ್ನು ಸಿಬಿಐಗೆ ವಹಿಸಲು ವಿಧಾನಸಭಾ ಸ್ಪೀಕರ್ ಅವರ ಅನುಮತಿ ಪಡೆಯಬೇಕಿತ್ತು. ಇದನ್ನು ಹಿಂದಿನ ಸರ್ಕಾರ ಪಾಲಿಸಿಲ್ಲ. ನಾವು ಕಾನೂನಿನಡಿ ಸೂಕ್ತ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣವನ್ನು ಹಿಂಪಡೆಯಲು ಕಾನೂನಿನ ಇತಿಮಿತಿಯಲ್ಲಿ ನಿರ್ಧಾರ ಕೈಗೊಂಡಿದ್ದೇವೆ. ಬಿಜಿಪಿ ಅಥವಾ ಜೆಡಿಎಸ್ ಯಾರು, ಹೇಗೆ ಬೇಕಾದರು ವ್ಯಾಖ್ಯಾನ ಮಾಡಿಕೊಳ್ಳಲಿ. ಅವರು ಟೀಕೆ ಮಾಡಿದಾಕ್ಷಣ ಅವರು ಹಿಂದೆ ಮಾಡಿದ ತಪ್ಪುಗಳೆಲ್ಲ ಸರಿ ಹೋಗುವುದಿಲ್ಲ. ಬಿಜೆಪಿಯವರು ಮಾಡಿದ ತಪ್ಪನ್ನು ನಾವು ಮುಂದುವರಿಸಲು ಸಿದ್ಧರಿಲ್ಲ ಎಂದು ತಿಳಿಸಿದರು.
ಯಾವುದೇ ಪ್ರಕರಣವನ್ನು ತನಿಖೆಗೆ ವಹಿಸುವಾಗ ಸ್ಪೀಕರ್ ಅನುಮತಿ ಪಡೆಯಬೇಕು. ನಿಯಾಮಾವಳಿಯನ್ನು ಗಾಳಿಗೆ ತೂರಲಾಗಿದೆ. ರಾಜಕೀಯ ದುರುದ್ದೇಶಪೂರ್ವಕವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗುತ್ತದೆ. ಈ ಎಲ್ಲ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ ಎಂದರು.
ಪಾರದರ್ಶಕವಾಗಿ ಪಿಎಸ್ಐ ಮರುಪರೀಕ್ಷೆ
PSI ಮರುಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ ಅವರು, ನಾನೇ ಖುದ್ದಾಗಿ ಪೊಲೀಸ್ ಮಹಾನಿರ್ದೇಶಕರು, ಕೆಇಎ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ನಮ್ಮ ಪೊಲೀಸ್ ಇಲಾಖೆ ಹೊರಗಡೆ ಏನೆಲ್ಲ ನಡೆಯುತ್ತದೆ ಎಂದು ರೆಗ್ಯೂಲೇಟ್ ಮಾಡುತ್ತೇವೆ.

ಪರೀಕ್ಷೆ ನಡೆಸೋದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸೋದು ಕೆಇಎ ನೋಡಿಕೊಳ್ಳಲಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಹೆದುಕೊಂಡೇ ಪರೀಕ್ಷೆ ನಡೆಸಲು ಸಿದ್ಧರಾಗಿದ್ದು, ಪಾರದರ್ಶಕವಾಗಿಯೇ ಮರುಪರೀಕ್ಷೆ ನಡೆಯಲಿದೆ. ಯಾವುದೇ ಗೊಂದಲ ಇಲ್ಲದೇ ಅಭ್ಯರ್ಥಿಗಳು ಪರೀಕ್ಷೆ ಬರೆಯಿರಿ ಎಂದು ಅವರು ವಿವರಿಸಿದರು.
1500 PSI ನೇಮಕ ಮಾಡಿಕೊಳ್ಳಲಾಗುವುದು
ಈ ಹಿಂದೆ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಪಿಎಸ್ಐ ಹಗರಣ ಹೇಗೆಲ್ಲ ಆಗಿತ್ತು ಎಂಬುದು ನಮಗೆ ಗೊತ್ತಿದೆ. ಮರು ಪರೀಕ್ಷೆಯನ್ನು ಸ್ವಾಯತ್ತ ಸಂಸ್ಥೆಗೆ ವಹಿಸುವಂತೆ ಕೋರ್ಟ್ ಆದೇಶಿಸಿದೆ. ಈ ಪರೀಕ್ಷೆ ಪ್ರಕ್ರಿಯೆ ಮುಗಿದ ಕೂಡಲೇ 400 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತೇವೆ. ಅದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ತಕ್ಷಣವೇ ಮಾಡುತ್ತೇವೆ. ಇದಾದ ಬಳಿಕ ಇನ್ನೂ 600 ಹುದ್ದೆಗಳ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ಈ ಬಗ್ಗೆ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಮುಂದಿನ 6 ತಿಂಗಳ ಒಳಗಾಗಿ 1,500 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡುತ್ತೇವೆ ಎಂದು ಅವರು ತಿಳಿಸಿದರು.












Click it and Unblock the Notifications