ಬೆಂಗಳೂರಿನ ಕಟ್ಟಡ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ಡಿ.ಕೆ.ಶಿವಕುಮಾರ್
ಬೆಂಗಳೂರಿನ ಕಟ್ಟಡ ಮಾಲೀಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಗ್ ಶಾಕ್ ನೀಡಿದ್ದಾರೆ. ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮೊದಲು ಭದ್ರಗೊಳಿಸುವ ಕೆಲಸವಾಗಬೇಕು. ಇಂತಹ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎರಡು, ಮೂರು ಮಹಡಿಗಳನ್ನು ಕಟ್ಟುವ ಸ್ಥಳಗಳಲ್ಲಿ ಎಂಟರಿಂದ ಹತ್ತು ಮಹಡಿಗಳನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲ. ಇಂತಹ ಕಟ್ಟಡಗಳನ್ನು ಹೊಡೆದು ಹಾಕುವುದು ನಂತರದ ವಿಚಾರ, ಆದರೆ ಇದರ ಬಗ್ಗೆ ಮೊದಲು ಸಮೀಕ್ಷೆ ನಡೆಸಲಾಗುವುದು.
ಧರ್ಮರಾಯಸ್ವಾಮಿ ದೇವಾಲಯದ ಬಳಿಯ ನಗರ್ತಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಡಿಸಿಎಂ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಇದು ಒಂದೇ ದಿನಕ್ಕೆ ಮುಗಿಯುವ ಕೆಲಸವಲ್ಲ. ವರ್ಷಗಟ್ಟಲೆ ಸಮಯ ಹಿಡಿಯುತ್ತದೆ. ದೆಹಲಿ, ಮುಂಬೈನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಒಳಗೆ ಬಂದು ನೋಡಿದಾಗ ನನಗೆ ಗಾಬರಿಯಾಯಿತು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಬೆಂಕಿ ಅವಘಡ ನಡೆದರೆ ಜನ ಓಡಿ ಹೋಗುತ್ತಾರೆ, ಆಗ ಕಾಲ್ತುಳಿತ ಉಂಟಾಗಿಯೇ ಜನ ಸಾಯುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಿರ್ಲಕ್ಷ್ಯ ವಹಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಅವಘಡ ನಡೆದ ಕಟ್ಟಡದ ಮಾಲೀಕರನ್ನೂ ಸಹ ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವಘಡದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಗಳ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಲ್ಲ
ದುರ್ಬಲ ಕಟ್ಟಡಗಳನ್ನು ಕೂಡಲೇ ಕೆಡವಲು ಹೋಗುವುದಿಲ್ಲ. ಮಾಲೀಕರು ಕೂಡಲೇ ದುರಸ್ತಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ ದುರ್ಬಲಗೊಂಡಿರುವ ಕಟ್ಟಡಗಳು ಕುಸಿತವಾಗಿ ದೊಡ್ಡ ಸಮಸ್ಯೆ ಎದುರಾಗುವುದು ಬೇಡ. ಭವಿಷ್ಯದಲ್ಲಿ ಈ ರೀತಿಯಾಗಿ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ನಗರದಲ್ಲಿ ಶೇ 70ರಷ್ಟು ಕಟ್ಟಡ ನಿರ್ಮಾಣ ಅಕ್ರಮ. ನೂತನ ಬಿಡಿಎ ಲೇಔಟ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಈಗ ವಾಸಯೋಗ್ಯ ಪ್ರಮಾಪತ್ರವಿಲ್ಲದೇ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ಮಾರ್ಗದರ್ಶನ ನೀಡಿದೆ. ಈ ಕಾರಣಕ್ಕೆ 4 ಲಕ್ಷ ಸಂಪರ್ಕಗಳನ್ನು ನಿಲ್ಲಿಸಲಾಗಿದೆ. 30/40 ಅಳತೆಯ ಎರಡು ಮಹಡಿಯ ಕಟ್ಟಡಗಳಿಗೆ ವಿನಾಯಿತಿ ನೀಡಬೇಕು ಎನ್ನುವ ವಿಚಾರವನ್ನು ಕ್ಯಾಬಿನೆಟ್ ಮುಂದೆ ತರುತ್ತೇವೆ. ಸಂಪುಟ ಸಹೋದ್ಯೋಗಿಗಳು ಏನು ಹೇಳುತ್ತಾರೊ ನೋಡೋಣ ಎಂದಿದ್ದಾರೆ.
ಚಿಕ್ಕಪೇಟೆ, ನಗರ್ತಪೇಟೆ ಇವುಗಳು ಹೆಸರಿಗೆ ವಾಸಸ್ಥಳಗಳು, ಆದರೆ ವ್ಯಾಪಾರಿ ಕೇಂದ್ರಗಳಾಗಿ ಬದಲಾಗಿವೆ. ಜನರ ಬಡತನದ ಬದುಕು ಇದು. ಅಗ್ನಿಶಾಮಕ ನಿಯಮದ ಪ್ರಕಾರ ಹೋದರೆ ಇಲ್ಲಿನ ಎಲ್ಲ ಕಟ್ಟಡಗಳನ್ನು ಒಡೆದು ಹಾಕಬೇಕು. ಅನೇಕ ಕಟ್ಟಡಗಳ ಮೇಲ್ಭಾಗಕ್ಕೆ ಹತ್ತಲು ಕೂಡ ಆಗಲ್ಲ. ಶಾರ್ಟ್ ಸರ್ಕೀಟ್ ಆದ ಕಾರಣಕ್ಕೆ ಬೆಂಕಿ ಹೊತ್ತುಕೊಂಡು ಸಾವನ್ನಪ್ಪಿದ್ದಾರೆ. ಮೃತರೆಲ್ಲ ರಾಜಸ್ಥಾನ ಮೂಲದವರು. ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದರು ಎಂದು ಕಂಬನಿ ಮಿಡಿದಿದ್ದಾರೆ.












Click it and Unblock the Notifications