ಯಾರನ್ನೂ ರಕ್ಷಿಸುವುದಿಲ್ಲ : ಕಡೆಗೂ ಬಾಯಿಬಿಟ್ಟ ಸಿದ್ದು

ಬೆಂಗಳೂರು, ಮಾ. 21 : ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸಂಗತಿಗಳನ್ನು ಮುಚ್ಚಿಡುವುದಿಲ್ಲ, ಹಾಗೆಯೇ ಈ ಸಾವಿನ ಹಿಂದೆ ಯಾರದಾದರೂ ಕೈವಾಡವಿದ್ದರೆ ಅವರನ್ನೂ ರಕ್ಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸದನದಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸರಕಾರದ ನಿಲುವೇನೆಂಬುದನ್ನು ಸ್ಪಷ್ಟಪಡಿಸುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದರು. ರವಿ ಸಾವಿನ ಪ್ರಕರಣವನ್ನು ಸಿಐಡಿ ಬದಲು ಸಿಬಿಐಗೆ ವಹಿಸಬೇಕೆಂದು ವಿರೋಧ ಪಕ್ಷ ಮತ್ತು ಸಾರ್ವಜನಿಕರಿಂದ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲೇಬೇಕಾಗಿದೆ.

ಮೇಲ್ನೋಟಕ್ಕೆ ರವಿ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದರೂ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕೆಲ ಭ್ರಷ್ಟ ಕಾಂಗ್ರೆಸ್ ರಾಜಕಾರಣಿಗಳೇ ಕಾರಣ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹುಯಿಲೆಬ್ಬಿಸಿದ್ದಾರೆ ಮತ್ತು ಸಿಬಿಐ ತನಿಖೆ ನಡೆಯಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ರಾಜ್ಯಾದ್ಯಂತ ಸಾರ್ವಜನಿಕರಿಂದಲೂ ರಾಜ್ಯ ಸರಕಾರದ ಮೇಲೆ ತೀವ್ರ ಒತ್ತಡ ಬರುತ್ತಿದೆ. [ಡಿಕೆ ರವಿ ಖಾಸಗಿ ವಿಷಯ ಬಹಿರಂಗ]

DK Ravi death : Will not protect anyone, says Siddaramaiah

ಕೋಲಾರದ ಡಿಸಿಯಾಗಿದ್ದಾಗ ಡಿಕೆ ರವಿ ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಕೆಲ ರಾಜಕಾರಣಿಗಳಿಂದ ಡಿಕೆ ರವಿಯವರಿಗೆ ಬೆದರಿಕೆಯ ಕರೆಗಳೂ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೋಲಾರದಿಂದ ಬೆಂಗಳೂರಿಗೆ ಅವರನ್ನು ಟ್ರಾನ್ಸ್‌ಫರ್ ಮಾಡಲಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೂಡ ತೆರಿಗೆಗಳ್ಳರ ವಿರುದ್ಧ ರವಿ ತಿರುಗಿಬಿದ್ದಿದ್ದರು. ಅವರಿಂದ ಕೊಲೆ ಬೆದರಿಕೆ ಕರೆ ಬಂದಿದ್ದರಿಂದ ರವಿಯವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸಂಸತ್ತಿನಲ್ಲಿಯೂ ಈ ಪ್ರಕರಣ ಪ್ರತಿಧ್ವನಿಸಿದ್ದು, ಕೆಲ ಕಾಂಗ್ರೆಸ್ ಸಂಸದರಿಂದಲೂ ಸಿಬಿಐ ತನಿಖೆಗೆ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕೂಡ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ಗೇ ವಹಿಸಬೇಕೆಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಸೋಮವಾರ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

ರಾಜ್ಯದಿಂದ ಸೂಚನೆ ಬಂದರೆ ಸಿಬಿಐ ತನಿಖೆ ನಡೆಸಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿದ್ದರು. ಸದ್ಯಕ್ಕೆ ಸಿಐಡಿ ತನಿಖೆ ಆರಂಭವಾಗಿದ್ದರಿಂದ ಸಿಬಿಐ ತನಿಖೆ ಸಾಧ್ಯವೇ ಇಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿತ್ತು. ಆದರೆ, ಸೋನಿಯಾರಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಮೌಖಿಕವಾಗಿ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ.

ಸೋಮವಾರ ಸದನದಲ್ಲಿ ಸಿಬಿಐ ತನಿಖೆಯ ಬಗ್ಗೆ ಪ್ರಸ್ತಾಪಿಸಿ, ಸಭಾಧ್ಯಕ್ಷರ ಒಪ್ಪಿಗೆ ಪಡೆದ ನಂತರ ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಸಿಬಿಐ ತನಿಖೆಯ ಬಗ್ಗೆ ಲಿಖಿತ ಸೂಚನೆ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಪಾದಯಾತ್ರೆ ಮತ್ತು ಮಾ.28ರಂದು ಕರೆಯಲಾಗಿರುವ ಕರ್ನಾಟಕ ಬಂದ್ ರದ್ದಾಗುವ ಸಾಧ್ಯತೆಗಳೂ ಇವೆ. ಸಿಬಿಐ ತನಿಖೆ ಒಂದು ವಾರದಲ್ಲಿ ಆರಂಭವಾಗಲಿದೆ. [ಮಾ.28 ಕರ್ನಾಟಕ ಬಂದ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+