Firecracker Injuries: ದೀಪಾವಳಿ ಪಟಾಕಿ ಅವಘಡ: ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳೆಷ್ಟು?
ಬೆಳಕಿನ ಹಬ್ಬ ದೀಪಾವಳಿಯು ಹಲವರ ಬದುಕಲ್ಲಿ ಕಗ್ಗತ್ತಲು ಆವರಿಸುವಂತೆ ಮಾಡಿದೆ. ಪ್ರತಿ ವರ್ಷವೂ ದೀಪಾವಳಿ ವೇಳೆ ಪಟಾಕಿಯಿಂದ ಅವಘಡಗಳು ವರದಿಯಾಗುತ್ತಿವೆ. ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೂ ದುರಂತಗಳು ತಪ್ಪುತ್ತಿಲ್ಲ. ಇನ್ನು ಈ ದೀಪಾವಳಿ ವೇಳೆಯೂ ಪಟಾಕಿ ಅವಘಡದಿಂದಾಗಿ ಹಲವು ಗಂಭೀರ ಗಾಯಗೊಂಡಿರುವ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ದೀಪಾವಳಿ ವೇಳೆ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಪಟಾಕಿ ಅವಘಡಗಳು ವರದಿಯಾಗುವ ಹಿನ್ನೆಲೆ ಪ್ರತಿ ವರ್ಷ ಬೆಂಗಳೂರಿನ ಮಿಂಟೋ ಆಸ್ಪತ್ರೆ ಸೇರಿದಂತೆ ಹಲವೆಡೆ ಕಣ್ಣಿನ ತುರ್ತು ಚಿಕಿತ್ಸೆಗೆಂದು ಪ್ರತ್ಯೇಕ ಘಟಕಗಳನ್ನು ತೆರೆದಿರಲಾಗುತ್ತದೆ. ಈ ವರ್ಷವೂ ದೀಪಾವಳಿಯ ಬೆಳಕು ಬೆಂಗಳೂರಿನ ನಿವಾಸಿಗಳಿಗೆ ದುರಂತವಾಗಿ ಪರಿಣಮಿಸಿದೆ. ಹತ್ತಾರು ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪಟಾಕಿಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಹಬ್ಬದ ಸಮಯದಲ್ಲಿ ನಗರದ ಆಸ್ಪತ್ರೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಈ ಪೈಕಿ ಕನಿಷ್ಠ ಆರು ರೋಗಿಗಳು ಭಾಗಶಃ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ 17 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಆರು ಜನರಿಗೆ ಆಪರೇಷನ್‌ನ ಅಗತ್ಯವಿದೆ. ಮಂಗಳವಾರ ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಪಟಾಕಿಗಳಿಂದ ಇಬ್ಬರು ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರು ಮಕ್ಕಳನ್ನು ದಾಖಲಿಸಲಾಗಿದೆ. ಆರು ರೋಗಿಗಳು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
18 ವರ್ಷದೊಳಗಿನವರೇ ಹೆಚ್ಚು
ನಾರಾಯಣ ನೇತ್ರಾಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇವಲ ಎರಡೇ ದಿನಗಳಲ್ಲಿ 51 ಗಾಯಾಳುಗಳು ದಾಖಲಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದಾರೆ. ಪಟಾಕಿ ಹಚ್ಚುವ ಸಂದರ್ಭದಲ್ಲಿ ಸುಮಾರು 38 ಮಂದಿ ಗಾಯಗೊಂಡಿದ್ದಾರೆ. 13 ಮಂದಿ ಬೇರೆಯವರು ಹಚ್ಚಿದ ಪಟಾಕಿಯಿಂದಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು 18 ವರ್ಷದೊಳಗಿನವರು ಎಂದು ತಿಳಿಸಿದ್ದಾರೆ.
10 ವರ್ಷದ ಮಗುವಿಗೆ ಸುಟ್ಟಗಾಯಗಳಾಗಿವೆ. 67 ವರ್ಷದ ವಿದೇಶಿ ಪ್ರಜೆಯೊಬ್ಬರು ರಸ್ತೆಯಲ್ಲಿ ಬರುತ್ತಿದ್ದಾಗ ಕಣ್ಣಿಗೆ ಕಿಡಿ ತಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಆರು ಮಕ್ಕಳು ಸೇರಿ 16 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಒಬ್ಬರಿಗೆ ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು ಯುವ ರೋಗಿಗಳು ಪಟಾಕಿಗಳಿಂದಾಗಿ ಕಣ್ಣಿಗೆ ಸಮಸ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications