ಕೊರೊನಾ ವೈರಸ್ ಅಂಟಿಕೊಂಡಿತಾ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ?
ಬೆಂಗಳೂರು, ಫೆಬ್ರವರಿ.19: ಕೊರೊನಾ ವೈರಸ್.. ಚೀನಾದಲ್ಲಿ ಸಾವಿರಾರು ಜೀವಗಳನ್ನು ಬಲಿ ಪಡೆದ ಈ ಸೋಂಕು ಇದೀಗ ಕರ್ನಾಟಕ ರಾಜ್ಯದಲ್ಲೂ ಸದ್ದು ಮಾಡಿದೆ. ರಾಜ್ಯ ರಾಜಕಾರಣದಲ್ಲಿ ಇದೀಗ ಕೊರೊನಾ ವೈರಸ್ ಸೋಂಕಿನ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೊರೊನಾ ವೈರಸ್ ಅಂಟಿಕೊಂಡಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಬಿಜೆಪಿಗೆ ಸೇರ್ಪಡೆಗೊಂಡಿರುವ ಕಾಂಗ್ರೆಸ್ ನ ಅನರ್ಹ ಶಾಸಕರನ್ನು ಕೊರೊನಾ ವೈರಸ್ ಗೆ ಹೋಲಿಸಲಾಗಿದೆ.
ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಾಂಗ್ರೆಸ್, ಬಿಜೆಪಿ ಪಾಲಿಗೆ ಅನರ್ಹ ಶಾಸಕರೆಲ್ಲ ಕೊರೊನಾ ವೈರಸ್ ಇದ್ದಂತೆ ಎಂದು ಹೇಳಿದೆ. ಈ ಸೋಂಕಿನಿಂದ ಸರ್ಕಾರವು ಬಹಳ ದಿನಗಳ ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದೆ.

ಅನರ್ಹ ಶಾಸಕರನ್ನು ಕೊರೊನಾ ವೈರಸ್ ಗೆ ಹೋಲಿಸಿದ ಕಾಂಗ್ರೆಸ್
ಭಾರತೀಯ ಜನತಾ ಪಕ್ಷವು ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ನಲ್ಲಿದ್ದ ಅನರ್ಹ ಶಾಸಕರು ಎಂಬ ಕೊರೊನಾ ವೈರಸ್ ಗಳನ್ನು ತನ್ನ ಪಕ್ಷದೊಳಗೆ ಸೇರಿಸಿಕೊಂಡಿದೆ. ಇದರಿಂದ ಆಪತ್ತು ತಪ್ಪಿದ್ದಲ್ಲ. ಬಿಜೆಪಿಯೊಳಗೆ ಸೇರಿಕೊಂಡಿರುವ ವೈರಸ್ ಗಳು ಒಳಗಿಂದೊಳಗೆ ಪಕ್ಷವನ್ನು ರೋಗಗ್ರಸ್ತ ಮಾಡುತ್ತವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ವಿಧಾನ ಪರಿಷತ್ ನಲ್ಲಿ ಮಾತನಾಡಿದ್ದು, ಕಾಂಗ್ರೆಸ್ ನಲ್ಲಿ ಕೊರೊನಾ ವೈರಸ್ ಗಳಿವೆ ಎಂದು ಹರಿಹಾಯ್ದಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಇದೀಗ ಟ್ವೀಟ್ ಮಾಡಿದೆ. ಶಾಸಕ ಎಸ್.ಟಿ.ಸೋಮಶೇಖರ್ ಆದಿಯಾಗಿ ಕಾಂಗ್ರೆಸ್ ನಿಂದ ಬಿಜೆಪಿಗೆ ತೆರಳಿದ ಅನರ್ಹ ಶಾಸಕರೆಲ್ಲ ಬಿಜೆಪಿ ಪಾಲಿಗೆ ಕೊರೊನಾ ವೈರಸ್ ಗಳಿದ್ದಂತೆ. ಈ ವೈರಸ್ ಗಳು ಬಿಜೆಪಿ ಸರ್ಕಾರವನ್ನು ಬ್ಲಾಕ್ಮೇಲ್ ಮಾಡಿ ಅಲುಗಾಡಿಸುವ ಬೆದರಿಕೆಯೊಡ್ಡಿ ಸರ್ಕಾರವನ್ನೇ ನಿಷ್ಕ್ರಿಯಗೊಳಿಸಿವೆ ಎಂದು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ದೂಷಿಸಿದೆ.

'ಕೈ' ಪಾಳಯದಲ್ಲೇ ಕೊರೊನಾ ವೈರಸ್ ಗಳಿದ್ದಾರೆ ಎಂದ ಶಾಸಕ
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಅನರ್ಹ ಶಾಸಕರನ್ನು ಕೊರೊನಾ ವೈರಸ್ ಗೆ ಹೋಲಿಕೆ ಮಾಡಿದ್ದರು. ಇದರಿಂದ ಕೆರಳಿದ ಶಾಸಕ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಲ್ಲಿಯೇ ದೊಡ್ಡ ದೊಡ್ಡ ಕೊರೊನಾ ವೈರಸ್ ಗಳಿವೆ. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿರುವಾಗ ನಮ್ಮ ತಟ್ಟೆಯಲ್ಲಿನ ನೊಣಗಳ ಬಗ್ಗೆ ಏಕೆ ಮಾತನಾಡುತ್ತೀರಾ. ಕಾಂಗ್ರೆಸ್ ಯೋಗ್ಯತೆ ಏನು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸೋಮಶೇಖರ್ ಕಿಡಿ ಕಾರಿದ್ದರು.

ಅನರ್ಹರು ಎಂಬ ಪದ ಬಳಸಿದ್ದಕ್ಕೆ ಸಿಟ್ಟಿಗೆದ್ದ ಕರುನಾಡ 'ಕೌರವ'
ಇನ್ನು, ರಾಜ್ಯ ಸರ್ಕಾರವು ಅನರ್ಹ ಶಾಸಕರಿಂದ ಅಸ್ತಿತ್ವಕ್ಕೆ ಬಂದಿದೆ ಎಂದು ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ್ ಬಿಜೆಪಿಯನ್ನು ಕಿಚಾಯಿಸಿದರು. ವಿಧಾನ ಪರಿಷತ್ ನಲ್ಲಿ ಇದೊಂದು ಹೇಳಿಕೆ, ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ಮಾತಿನ ಸಮರಕ್ಕೆ ನಾಂದಿಯಾಯಿತು. ಕಾಂಗ್ರೆಸ್ ಸದಸ್ಯರ ಮಾತಿನಿಂದ ಕೆರಳಿದ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಬಿ.ಸಿ.ಪಾಟೀಲ್, ಕಾಂಗ್ರೆಸ್ ನಮ್ಮನ್ನು ಅನರ್ಹಗೊಳಿಸಿದರೆ, ಜನತಾ ನ್ಯಾಯಾಲಯದಲ್ಲಿ ನಾವು ಅರ್ಹರು ಎಂದು ಸಾಬೀತಾಗಿದೆ. ಈ ಪದ ಬಳಕೆ ಮಾಡದಂತೆ ತಾಕೀತು ಮಾಡಿದರು.











Click it and Unblock the Notifications