ಸಂತ್ರಸ್ತರ ಪರಿಹಾರಕ್ಕೆ ಕೋಟಿ ಕೊಟ್ಟ ಅನರ್ಹ ಶಾಸಕ ಸುಧಾಕರ್
ಬೆಂಗಳೂರು, ಆಗಸ್ಟ್ 21: ಸಂತ್ರಸ್ತರ ಪರಿಹಾರಕ್ಕೆಂದು ಅನರ್ಹ ಶಾಸಕ ಎಂಟಿಬಿ ನಾಗರಾಜು ಒಂದು ಕೋಟಿ ರೂಪಾಯಿ ಕೊಟ್ಟಿರುವ ಬೆನ್ನಲ್ಲೇ ಈಗ ಮತ್ತೊಬ್ಬ ಅನರ್ಹ ಶಾಸಕ ಸುಧಾಕರ್ ಅವರೂ ಒಂದು ಕೋಟಿ ರೂಪಾಯಿ ನೀಡಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಸುಧಾಕರ್ ಅವರು ಪ್ರವಾಹ ಸಂತ್ರ್ತರ ನೆರವಿಗೆಂದು ಒಂದು ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಲು ಸಹಾಯ ಮಾಡಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅನರ್ಹಗೊಂಡಿರುವ ಅವರು, ಅದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಈ ನಡುವೆ ಸುಧಾಕರ್ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ಯಡಿಯೂರಪ್ಪ ಅವರ ವಿಶ್ವಾಸಗಳಿಸಲೆಂದೇ ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕೊಡಗಿನಲ್ಲಿ ಪ್ರವಾಹ ಬಂದಿದ್ದಾಗ ಸುಧಾಕರ್ ಅವರು ನೆರವಿನ ಹಸ್ತ ಚಾಚಿರಲಿಲ್ಲ. ಈಗ ನೆರವು ನೀಡಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.
ಮೊನ್ನೆಯಷ್ಟೆ ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರು ಯಡಿಯೂರಪ್ಪ ಅವರಿಗೆ ಪ್ರವಾಹ ಸಂತ್ರಸ್ತರ ನೆರವಿಗೆಂದು ಒಂದು ಕೋಟಿ ರೂಪಾಯಿ ನೀಡಿದ್ದರು. ಅವರು ಅಂದು ಹನ್ನೊಂದು ಕೋಟಿಗೂ ಹೆಚ್ಚು ಬೆಲೆಯ ಕಾರಿನಲ್ಲಿ ಬಂದು ಒಂದು ಕೋಟಿ ಹಣ ನೀಡಿ ಹೋಗಿದ್ದರು.












Click it and Unblock the Notifications