Bengaluru Dengue: ಡೆಂಗ್ಯೂ ಪ್ರಕರಣಗಳು ಹೆಚ್ಚಳ: ಬೆಂಗಳೂರಿನಲ್ಲಿ ಪ್ಲೇಟ್‌ಲೆಟ್ ಕೊರತೆ
ಬೆಂಗಳೂರು ಸೆಪ್ಟೆಂಬರ್ 12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಬೆಂಗಳೂರು ಪ್ಲೇಟ್‌ಲೆಟ್ ಕೊರತೆಯನ್ನು ಎದುರಿಸುತ್ತಿದೆ. ಕಳೆದ ಹಲವು ದಿನಗಳಿಂದ ನಿತ್ಯ ಡೆಂಗ್ಯೂ ಪ್ರಕರಣಗಳು ಅನಿರೀಕ್ಷಿತವಾಗಿ ಹೆಚ್ಚಾಗುತ್ತಿದ್ದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಡೆಂಗ್ಯೂ ಹೆಚ್ಚಾದಂತೆ ನಗರದಲ್ಲಿ ಪ್ಲೇಟ್‌ಲೆಟ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವು ರಕ್ತನಿಧಿಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ. ಆದರೆ ಪ್ಲೇಟ್‌ಲೆಟ್ ವರ್ಗಾವಣೆಯಿಂದಾಗುವ ಅಪಾಯದ ಬಗ್ಗೆ ಎಚ್ಚರ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ನಗರದಲ್ಲಿ ಏಕ-ದಾನಿ ಹಾಗೂ ಯಾದೃಚ್ಛಿಕ-ದಾನಿ ಪ್ಲೇಟ್‌ಲೆಟ್‌ಗಳ ಬೇಡಿಕೆಯು ತೀವ್ರವಾಗಿ ಹೆಚ್ಚಾಗಿದೆ. ಆದರೆ ಬೇಡಿಕೆಯಂತೆ ಪೂರೈಕೆ ಮಾಡಲು ನಮ್ಮ ಬಳಿ ಅಗತ್ಯ ಪ್ಲೇಟ್‌ಲೆಟ್ ಶೇಖರಣೆ ಇಲ್ಲ. ನಾವು ಪ್ಲೇಟ್‌ಲೆಟ್‌ಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ಗವಿಪುರಂ ಗುಟ್ಟಹಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಸುಮಿತ್ರಾ ಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾವು ದಿನಕ್ಕೆ 15-20 ಏಕ-ದಾನಿ ಪ್ಲೇಟ್‌ಲೆಟ್‌ಗಳು ಮತ್ತು 150 ಯೂನಿಟ್ ಯಾದೃಚ್ಛಿಕ-ದಾನಿ ಪ್ಲೇಟ್‌ಲೆಟ್‌ಗಳಿಗೆ ವಿನಂತಿಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಡಾ ಸುಮಿತ್ರಾ ಹೇಳಿದ್ದಾರೆ. ಆದರೆ ಬೇಡಿಕೆಯಂತೆ ಪ್ಲೇಟ್‌ಲೆಟ್‌ಗಳ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಹಲವಾರು ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
'ಡೆಂಗ್ಯೂ ದೇಹದಲ್ಲಿ ಪ್ಲೇಟ್‌ಲೆಟ್‌ಗಳನ್ನು ಕಡಿಮೆಮಾಡುವುದರೊಂದಿಗೆ ಮೂಗಿನಿಂದ ರಕ್ತಸ್ರಾವ ಸಂಭವಿಸುತ್ತದೆ. ಹೀಗಾಗಿ ಕೇವಲ ಪ್ಲೇಟ್‌ಲೆಟ್‌ಗಳನ್ನು ನೀಡುವುದರಿಂದ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಡೆಂಗ್ಯೂ ಇರುವವರಿಗೆ ರಕ್ತ ಕೂಡ ಅಗತ್ಯವಾಗಿದೆ' ಎಂದು ಸ್ಪರ್ಶ್ ಆಸ್ಪತ್ರೆಯ ಔಷಧ ಮತ್ತು ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ. ಜಾನ್ ಪಾಲ್ ಎಂ ಹೇಳಿದರು.

2023 ಸೆಪ್ಟೆಂಬರ್ 8 ರ ಹೊತ್ತಿಗೆ ಬೆಂಗಳೂರಿನಾದ್ಯಂತ ಒಟ್ಟು 4,979 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಸಾಮಾನ್ಯ ಹೆಚ್ಚಳವನ್ನು ಸೂಚಿಸುತ್ತದೆ. ವಾರದಿಂದ ವಾರಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಾ ಬಂದಿದೆ. ಈ ಸಂಬಂಧ ನಿಮ್ಮ ಮನೆಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಏಕೆಂದರೆ ಡೆಂಗ್ಯೂ ಹರಡುವ ಸೊಳ್ಳೆಗಳು ಇಂತಹ ನಿಂತ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಆದ್ದರಿಂದ ಸದಾ ಜಾಗೃತರಾಗಿರುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಜ್ವರ, ಆಯಾಸದಂತೆ ಲಕ್ಷಣಗಳಿಂದ ಸಾಕಷ್ಟು ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ. ತಪಾಸಣೆ ಬಳಿಕ ಅವರಿಗೆ ಡೆಂಗ್ಯೂ ಬಂದಿರುವುದು ಗೊತ್ತಾಗಿದೆ. ಇಂತಹ ಲಕ್ಷಣಗಳು ಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವಂತೆ ಬಿಬಿಎಂಪಿ ಕೋರಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಕಾಯಿಲೆಗೆ ಹೆಚ್ಚೆಚ್ಚು ಜನ ಒಳಗಾಗುತ್ತಿರುವದರಿಂದ ಪ್ರಕರಣಗಳ ನಿಯಂತ್ರಿಸುವ ಸಲುವಾಗಿ ಎಲ್ಲ 198 ವಾರ್ಡ್ ಗಳಲ್ಲಿಯೂ ಸೊಳ್ಳೆ ನಿಯಂತ್ರಣ, ಜಾಗೃತಿ ಮೂಡಿಸುವ ಹಾಗೂ ಔಷಧಿ ಸಿಂಪಡಣೆ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗಿದೆ. ಇದು ಮುಂದಿನ ಆದೇಶವರೆಗೆ ಮುಂದುವರಿಯಲಿದೆ. ಶಾಲಾ ಕಾಲೇಜುಗಳಿಂದ ಡೆಂಗ್ಯೂ ಬಗ್ಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.












Click it and Unblock the Notifications