ನೈಋತ್ಯ ರೈಲ್ವೆ ವಿಸ್ಟಾಡಾಮ್ ಕೋಚ್‌ಗೆ ಭಾರೀ ಬೇಡಿಕೆ
ಬೆಂಗಳೂರು, ಫೆಬ್ರವರಿ 24: ಗಾಜಿನ ಛಾವಣಿಯನ್ನು ಹೊಂದಿರುವ ಸಂಪೂರ್ಣ ಹವಾನಿಯಂತ್ರಿತವಾದ ರೈಲು ಬೋಗಿ ಬೆಂಗಳೂರು ನಗರಕ್ಕೆ ಆಗಮಿಸಿದೆ. ಮೊದಲ ಬಾರಿಗೆ ನೈಋತ್ಯ ರೈಲ್ವೆಗೆ ವಿಸ್ಟಾಡಾಮ್ ಕೋಚ್‌ನ ಒಂದು ಬೋಗಿ ಲಭಿಸಿದೆ.
ನೈಋತ್ಯ ರೈಲ್ವೆ ಮಂಗಳವಾರ ಈ ರೈಲು ಬೋಗಿಯನ್ನು ಸ್ವೀಕಾರ ಮಾಡಿದೆ. ಯಾವ ರೈಲು ಮಾರ್ಗದಲ್ಲಿ ಈ ಬೋಗಿಯನ್ನು ಬಳಕೆ ಮಾಡಲಾಗುತ್ತದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಹಗಲು ರೈಲಿಗೆ ಈ ಬೋಗಿ ಅಳವಡಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ, ರೈಲ್ವೆ ಇಲಾಖೆ ಈ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ.

ಬೆಂಗಳೂರು-ಕಾರವಾರ ಮಾರ್ಗದಲ್ಲಿ ಸಾಗುವ ರೈಲಿಗೆ ಅಳವಡಿಕೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ದೂದ್ ಸಾಗರ್ ಮಾರ್ಗದಲ್ಲಿ ಸಾಗುವ ರೈಲಿಗೆ ಅಳವಡಿಕೆ ಮಾಡಬೇಕು ಎಂದೂ ಬೇಡಿಕೆ ಇಡಲಾಗಿದೆ.
ರೈಲ್ವೆ ಇಲಾಖೆಯು ಸೂಚಿಸುವ ಮಾರ್ಗದ ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ ಎಂಬ ಸುದ್ದಿಯೂ ಇದೆ. ಈ ಬೋಗಿಯಲ್ಲಿ ಸಂಚಾರ ನಡೆಸುವ ಜನರು ಹೆಚ್ಚಿನ ಪ್ರಯಾಣ ದರವನ್ನು ನೀಡಬೇಕಾಗುತ್ತದೆ ಎಂಬ ಚರ್ಚೆಯೂ ಸಾಗಿದೆ.
ಬೆಂಗಳೂರು-ಮಂಗಳೂರು: ಬೆಂಗಳೂರು-ಮಂಗಳೂರು ನಡುವಿನ ಹಗಲು ರೈಲಿಗೆ ಈ ಬೋಗಿ ಅಳವಡಿಕೆ ಮಾಡಲಾಗುತ್ತದೆ ಎಂಬ ಚರ್ಚೆ ಇದೆ. ಈ ಮಾರ್ಗದಲ್ಲಿ ಸುಬ್ರಮಣ್ಯ ರಸ್ತೆ-ಸಕಲೇಶಪುರ ಘಟ್ಟ ಪ್ರದೇಶದ 55 ಕಿ. ಮೀ. ಮಾರ್ಗದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಈ ಬೋಗಿ ಉತ್ತಮವಾಗಿದೆ.
ಭಾರತೀಯ ರೈಲ್ವೆ ನೈಋತ್ಯ ರೈಲ್ವೆಗೆ ಒಟ್ಟು 4 ವಿಸ್ಟಾಡಾಮ್ ಕೋಚ್ ರೈಲು ಬೋಗಿಯನ್ನು ಮಂಜೂರು ಮಾಡಿದೆ. ಪ್ರಸ್ತುತ ಒಂದು ಬೋಗಿ ಬೆಂಗಳೂರು ನಗರವನ್ನು ತಲುಪಿದೆ. ಮಾರ್ಚ್ ಅಂತ್ಯಕ್ಕೆ ಉಳಿದ ಮೂರು ಬೋಗಿ ನಗರಕ್ಕೆ ಬಂದು ಸೇರಲಿದೆ.












Click it and Unblock the Notifications