Deal D-Boss: ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿ ಹಾಕಲು 30 ಲಕ್ಷ ಒಪ್ಪಂದ
ಬೆಂಗಳೂರು ಜೂನ್ 19: ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿ ಹಾಕಲು ನಟ ದರ್ಶನ್ 30 ಲಕ್ಷ ಡೀಲ್ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸ್, ಲಾಯರ್, ಶವ ಸಾಗಿಸುವವರಿಗಾಗಿ 30 ಲಕ್ಷ ವೆಚ್ಚ ಮಾಡಿರುವುದಾಗಿ ಡಿ ಬಾಸ್ ಹೇಳಿದ್ದಾರೆ. ಈ ಕೇಸ್‌ನಲ್ಲಿ ತಮ್ಮ ಹೆಸರು ಬಾರದಂತೆ ನೋಡಿಕೊಳ್ಳಲು ಪರಮಾಪ್ತ ಪ್ರದೂಶ್‌ಗೆ ಹಣ ನೀಡಿರುವುದಾಗಿ ದರ್ಶನ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ವಿಚಾರಣೆ ನಡೆಸಲಾಗುತ್ತಿದ್ದು, ನಿತ್ಯ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪ ಆಗಿದ್ದಾರೆ.
ನಟ ದರ್ಶನ್ ಮತ್ತು ಸಹಚರರಿಂದ ಹತ್ಯೆಗೀಡಾಗಿದ್ದಾರೆ ಎಂದು ಹೇಳಲಾಗುತ್ತಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 17 ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ತನಿಖೆ ಹಾದಿ ಸಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಹತ್ಯೆ ದಿನ ನಟ ದರ್ಶನ್ ಧರಿಸಿದ್ದ ಶೂವನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಅವರ ಮನೆಯಲ್ಲಿ ದರ್ಶನ್ ಶೂಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದರು. ಬಳಿಕ ದರ್ಶನ್ ಶೆಡ್‌ನಿಂದ ನೇರವಾಗಿ ರಾಜರಾಜೇಶ್ವರಿನಗರದಲ್ಲಿರುವ ತನ್ನ ಮನೆಗೆ ತೆರಳಿ ಬಟ್ಟೆ ಹಾಗೂ ಶೂಗಳನ್ನು ಬದಲಿಸಿ ಸ್ನಾನ ಮಾಡಿಕೊಂಡು ಮೈಸೂರಿಗೆ ತೆರಳಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಮನೆಯ ಕೆಲಸಗಾರ ಆ ಶೂಗಳನ್ನು ಹೊಸಕೆರೆಯಹಳ್ಳಿಯ ವಿಜಯಲಕ್ಷ್ಮೀ ಅವರ ಮನೆಗೆ ತೆಗೆದುಕೊಂಡು ಹೋಗಿ ಇರಿಸಿದ್ದ. ಪೊಲೀಸರು ಸ್ಥಳ ಮಹಜರು ವೇಳೆ ರಾಜರಾಜೇಶ್ವರಿನಗರದ ದರ್ಶನ್ ಮನೆಯಲ್ಲಿ ಕೊಲೆ ದಿನ ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಜಪ್ತಿ ಮಾಡಿದ್ದರು. ಆದರೇ, ಶೂಗಳು ಮಾತ್ರ ಸಿಕ್ಕಿರಲಿಲ್ಲ.
ಈ ಬಗ್ಗೆ ಆರೋಪಿಗಳನ್ನು ವಿಚಾರಣೆ ಮಾಡಿದಾಗ ದರ್ಶನ್ ಮನೆಯ ಕೆಲಸಗಾರ ಆ ಶೂಗಳನ್ನು ವಿಜಯಲಕ್ಷ್ಮೀ ಮನೆಗೆ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ವಿಜಯಲಕ್ಷ್ಮೀ ಮನೆಗೆ ತೆರಳಿ ಆ ಶೂಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಪ್ರಕರಣ ಗಂಭೀರತೆಯಿಂದ ಕೂಡಿರುವುದರಿಂದ ಎಸಿಪಿಗೆ ತನಿಖಾ ಹೊಣೆ ನೀಡಲಾಗಿದೆ. ಅಗತ್ಯ ಸಿಬ್ಬಂದಿ ಒದಗಿಸಲಾಗಿದೆ. ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಹಲವು ಕಡೆ ತಂಡಗಳಿಂದ ತನಿಖೆ ನಡೆಯುತ್ತಿದೆ. ಇನ್ಸ್ಪೆಕ್ಟರ್ಗಳು ತಂಡದಲ್ಲಿ ತನಿಖೆ ನಡೆಸುತಿದ್ದಾರೆ. ಸಮರ್ಪಕ ಹಾಗೂ ವಿಧಿವಿಜ್ಞಾನ, ತಾಂತ್ರಿಕ, ಕಾನೂನು ಸಲಹೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.












Click it and Unblock the Notifications