ರಸ್ತೆ ಗುಂಡಿ ಡೆಡ್‌ಲೈನ್ ಕ್ಲೋಸ್! ರಾತ್ರಿ ಸಿಟಿ ರೌಂಡ್ಸ್ ಮಾಡಲಿದ್ದಾರೆ ಡಿಕೆಶಿ
ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿದ್ದ ರಸ್ತೆಗುಂಡಿಗಳ ಸಮಸ್ಯೆಗೆ ಇತಿಶ್ರೀ ಹಾಡಬೇಕೆಂದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿಗೆ ನೀಡಿದ್ದ ಡೆಡ್‌ಲೈನ್ ಮುಗಿದಿದೆ. ಇದೀಗ ಬೆಂಗಳೂರಿನ ಪ್ರತಿ ರಸ್ತೆಗೂ ಡಿಕೆಶಿ ತೆರಳಿ, ರಸ್ತೆ ಗುಂಡಿಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ವೀಕ್ಷಿಸಲು ರಾತ್ರಿ ವೇಳೆ ಸಿಟಿ ರೌಂಡ್ಸ್ ಮಾಡಲಿದ್ದೇನೆ. ಇನ್ನೆರಡು ದಿನಗಳಲ್ಲಿ ಇದಕ್ಕೆ ದಿನಾಂಕ ನಿಗದಿ ಮಾಡುತ್ತೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟು ರಸ್ತೆಗುಂಡಿಗಳಿವೆ? ಎನ್ನುವ ಮಾಹಿತಿ ನನ್ನ ಬಳಿ ಇದೆ. ಹಾಗಾಗಿ ಇವುಗಳನ್ನು ಮುಚ್ಚಲು ಅಭಿಯಾನದ ರೀತಿಯಲ್ಲಿ ಕೆಲಸ ಮಾಡಿದ್ದೇವೆ, ಇದು ನಮ್ಮ ಜವಾಬ್ದಾರಿ ಕೂಡ ಹೌದು. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ತಕ್ಷಣ ಅಧಿಕಾರಿಗಳು ಈ ರೀತಿ ಕಾರ್ಯಪ್ರವೃತ್ತರಾಗಿರುವುದನ್ನು ನಾನು ನೋಡಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಶ್ಲಾಘಿಸಿದ್ದರು.
ಬಿಬಿಎಂಪಿ ಅಧಿಕಾರಿಗಳು ಹಗಲು ರಾತ್ರಿಯೆನ್ನದೆ ರಸ್ತೆ ಗುಂಡಿ ಮುಚ್ಚುವ ಕೆಲಸದಲ್ಲಿದ್ದಾರೆ. ಈ ವೇಳೆ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿತ್ತು. ಈ ಮಧ್ಯೆ ಮಳೆ ಕೂಡ ಅಡ್ಡಿಯಾಗಿದೆ. ನಾವು ಬದ್ಧತೆಯಿಂದ ಕೆಲಸ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಇನ್ನು 15 ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಕಣ್ಣಿಗೆ ಕಾಣಿಸಬಾರದು.
ಎರಡು ವಾರಗಳ ನಂತರ ನಾನೇ ಖುದ್ದಾಗಿ ಇಡೀ ಬೆಂಗಳೂರು ನಗರವನ್ನು ಸುತ್ತಾಡಲಿದ್ದೇನೆ. ಆಗ ಪ್ರತಿ ರಸ್ತೆಯನ್ನು ಕೂಡ ಪರಿಶೀಲಿಸುತ್ತೇನೆ. ಅಷ್ಟರಲ್ಲಿ ಗುಂಡಿಗಳು ಮಾಯವಾಗಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದರು. ಬಳಿಕ ಡಿಕೆಶಿ ಅವರು ಅಮೇರಿಕಾಗೆ ಪ್ರವಾಸ ತೆರಳಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು 15 ದಿನಗಳೊಳಗೆ ಮುಚ್ಚಿರಬೇಕು. ನಗರದಲ್ಲಿ ರಸ್ತೆಗುಂಡಿಗಳ ಬಗ್ಗೆ ಹಲವು ಕಂಪ್ಲೇಂಟ್‌ಗಳು ಬರುತ್ತಿವೆ. 'ರಸ್ತೆ ಗುಂಡಿ ಗಮನ' ಎಂಬ ಆ್ಯಪ್ ಮೂಲಕವೂ ಜನರು ರಸ್ತೆ ಗುಂಡಿಗಳ ಫೋಟೊ ತೆಗೆದು ಅಪ್‌ಲೋಡ್ ಮಾಡುವ ವ್ಯವಸ್ಥೆ ಇದೆ.
ಆದರೂ ನಗರದ ಹಲವೆಡೆ ರಸ್ತೆ ಹಾಳಾಗಿರುವ ಬಗ್ಗೆ ದೂರು ಬರುತ್ತಿದೆ. ಮಳೆಗಾಲ ಆಗಿರುವುದರಿಂದ ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ. ಇದನ್ನು ಶೀಘ್ರವಾಗಿ ಪರಿಹರಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದ್ದರು.

ಡಿಸಿಎಂ ಆದೇಶದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ರಸ್ತೆಗಳಿಗಿಳಿದು, ಖುದ್ದು ಅಲ್ಲೇ ನಿಂತು ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ, ರಸ್ತೆ ಗುಂಡಿ ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ಪರಿಶೀಲಿಸಿ ಶೀಘ್ರ ಸರಿಪಡಿಸಲು ಸೂಚನೆ ನೀಡಿದ್ದರು.
ಸದ್ಯ ಈಗ ಬೆಂಗಳೂರಿನಲ್ಲಿದ್ದ ರಸ್ತೆಗುಂಡಿಗಳನ್ನು ಬಹುತೇಕ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲೇ ನೀಡಿದ್ದ ಸೂಚನೆಯಂತೆ ಡಿ.ಕೆ.ಶಿವಕುಮಾರ್ ಅವರು ಫೀಲ್ಡಿಗಿಳಿದು ರಸ್ತೆಗುಂಡಿಗಳನ್ನು ಪರಿಶೀಲಿಸಲು ಸಿಟಿ ರೌಂಡ್ಸ್ ಮಾಡಲಿದ್ದಾರೆ.












Click it and Unblock the Notifications