ಬೆಂಗಳೂರು ಮಂದಿಗೆ ಸಿಹಿಸುದ್ದಿ, ಈ ಭಾಗದ ಜನರಿಗೆ ಕುಡಿಯುವ ನೀರಿಗೆ ನೋ ಟೆನ್ಷನ್
ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಮನೆಮನೆಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ನಗರ ಪುಲಕೇಶಿನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಬರೋಬ್ಬರಿ ಎಂಎಲ್‌ಡಿ ಸಾಮರ್ಥ್ಯದ ಜಲಾಗಾರಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದಾರೆ. ಈ ಯೋಜನೆಯ ಬಗ್ಗೆ ಅವರು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪುಲಕೇಶಿನಗರದ ಪಿಳ್ಳಣ್ಣ ಗಾರ್ಡನ್‌ನಲ್ಲಿ 4 ಎಂಎಲ್‌ಡಿ ಸಾಮರ್ಥ್ಯದ ಜಲಾಗಾರಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದೇನೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬುದನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಮನೆ ಮನೆಗೆ ಕಾವೇರಿ ನೀರು ಒದಗಿಸುವ ಈ ಜಲಾಗಾರ ಯೋಜನೆ ಈ ಪುಲಕೇಶಿನಗರ ಕ್ಷೇತ್ರದ ಇತಿಹಾಸ ಎಂದು ಶ್ಲಾಘಿಸಿದ್ದಾರೆ.

ಸುಮಾರು 30,000 ಮನೆಗಳ 2.50 ಲಕ್ಷ ಜನರಿಗೆ ಈ ಜಲಾಗಾರ ಯೋಜನೆಯಿಂದ ಕುಡಿಯುವ ನೀರು ಲಭ್ಯವಾಗಲಿದೆ. ಈಗಾಗಲೇ ಈ ಪುಲಕೇಶಿನಗರ ಕ್ಷೇತ್ರಕ್ಕೆ 1,055 ಕೋಟಿ ರೂಪಾಯಿಗಳ ಅನುದಾನಗಳ ಕಾಮಗಾರಿಗೆ ಮಂಜೂರಾತಿ ನೀಡಿದ್ದೇವೆ. ಕ್ಷೇತ್ರದ ಶಾಸಕರಾದ ಎ.ಸಿ.ಶ್ರೀನಿವಾಸ್ ಅವರ ಕೋರಿಕೆಯಂತೆಯೇ ಪುಲಕೇಶಿನಗರದಲ್ಲಿ ನೂತನ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟಲ್ಲಿ, ಅದನ್ನು ಕಟ್ಟಿಸಿಕೊಡಲು ನಾನು ಸಿದ್ಧ. ಬಿಬಿಎಂಪಿ ವತಿಯಿಂದ ಈ ಕ್ಷೇತ್ರದಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಕೂಡ ಈಗಾಗಲೇ ಯೋಜನೆ ತಯಾರಾಗಿದೆ ಎಂದು ಸಿಹಿಸುದ್ದಿ ನೀಡಿದ್ದಾರೆ.
ಮನೆ ಕಟ್ಟುವವರು ಯಾರಿಗೂ ಲಂಚ ಕೊಡಬೇಡಿ
ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸುತ್ತಿದ್ದೇವೆ. ಮನೆ ಕಟ್ಟುವವರು ಯಾರಿಗೂ ಲಂಚ ಕೊಡುವಂತಿಲ್ಲ. "ನಂಬಿಕೆ ನಕ್ಷೆ"ಯ ಮೂಲಕ ನಿಮ್ಮ ಮನೆಯಲ್ಲೇ ಕುಳಿತು ನಕ್ಷೆಗಳಿಗೆ ಅನುಮೋದನೆ ಪಡೆಯುವಂತಹ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಇಡೀ ಬೆಂಗಳೂರಿನ ತ್ಯಾಜ್ಯ (ಕಸ) ನಿರ್ವಹಣೆಗೆ ಒಂದು ವ್ಯವಸ್ಥಿತ "ಸ್ವಚ್ಛ ಬೆಂಗಳೂರು" ಎನ್ನುವ ಸಹಾಯವಾಣಿ ಸಂಖ್ಯೆಯನ್ನು ಕೂಡ ಆರಂಭಿಸುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಇಂದು ಬೆಂಗಳೂರು ನಗರದಾದ್ಯಂತ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಅದಕ್ಕೂ ಮೊದಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ನಮಿಸಿ ಇಂದಿನ ದಿನವನ್ನು ಆರಂಭಿಸೋಣ ಎಂದು ಟ್ಯಾನರಿ ರಸ್ತೆಯ ಪೆರಿಯಾರ್ ಸರ್ಕಲ್‌ನಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದೆ ಎಂದಿದ್ದಾರೆ.
ಕಾಂಗ್ರೆಸ್‌ನಿಂದ ಪೋಸ್ಟರ್ ಎಡವಟ್ಟು
ಕರ್ನಾಟಕ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದ್ದು ಎನ್ನುವ ರೀತಿ ನಕ್ಷೆ ಇರುವ ಫೋಟೋ ಹಂಚಿಕೊಂಡು ಎಡವಟ್ಟು ಮಾಡಿಕೊಂಡಿತ್ತು. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆ ತಕ್ಷಣವೇ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್, ಪಕ್ಷದ ರಾಷ್ಟ್ರೀಯ ನಾಯಕರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಕರ್ನಾಟಕ ಕಾಂಗ್ರೆಸ್‌ನ ಇತ್ತೀಚಿನ ಟ್ವೀಟ್‌ಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದ್ದಾರೆ.
ಜಲಮಂಡಳಿ ಯಾವುದೇ ಹೊಸ ಟ್ಯಾಂಕರ್ ಖರೀದಿಸಿಲ್ಲ
ಕಾಂಗ್ರೆಸ್ ಸರ್ಕಾರವು ಜಲಮಂಡಳಿ ಮೂಲಕ ಜನರ ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುವ ʼಕಾವೇರಿ ಆನ್ ವ್ಹೀಲ್ಸ್ʼ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆ ಬಗ್ಗೆ ಗಂಭೀರ ಆರೋಪ ಮಾಡಿದ್ದ ಬಿಜೆಪಿ, ಸಂಚಾರಿ ಕಾವೇರಿ ಯೋಜನೆಯಲ್ಲಿ ಕರ್ನಾಟಕ ಸರ್ಕಾರ ಭಾರೀ ಗೋಲ್ಮಾಲ್ ಮಾಡಿದೆ ಎಂದು ದೂರಿತ್ತು.
ತುಕ್ಕು ಹಿಡಿದ ಹಳೆ ಟ್ಯಾಂಕರ್ ಗಳಿಗೆ ಸುಣ್ಣ-ಬಣ್ಣ ಬಳಿದು ಅಶುದ್ಧ ನೀರನ್ನು ಜನಸಾಮಾನ್ಯರಿಗೆ ಪೂರೈಕೆ ಮಾಡಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ. ತುಕ್ಕು ಹಿಡಿದ ಟ್ಯಾಂಕರ್‌ಗಳ ಮೇಲೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ತಮ್ಮ ಭಾವ ಚಿತ್ರಗಳನ್ನು ಹಾಕಿ ಬಿಟ್ಟಿ ಪ್ರಚಾರ ಪಡೆದಿದ್ದು ಅಲ್ಲದೆ ಭ್ರಷ್ಟಾಚಾರ ನಡೆಸಿರುವುದು ಜಗಜ್ಜಾಹೀರಾಗಿದೆ ಎಂದು ಆರೋಪ ಮಾಡಿತ್ತು.
ಕಾಂಗ್ರೆಸ್ ಸ್ಪಷ್ಟನೆ: ಬಿಜೆಪಿ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಬೆಂಗಳೂರು ಜಲಮಂಡಳಿ ಯಾವುದೇ ಹೊಸ ಟ್ಯಾಂಕರ್‌ಗಳನ್ನು ಖರೀದಿಸಿಲ್ಲ. ಈಗಾಗಲೇ ಜಲಮಂಡಳಿಯಲ್ಲಿ ಇದ್ದಂತಹ 60 ಟ್ಯಾಂಕರ್‌ಗಳನ್ನು ಆರ್ಥಿಕ ಹೊರೆ ಮಾಡಿಕೊಳ್ಳದೇ ಬ್ರಾಂಡಿಂಗ್ ಮಾಡಲಾಗಿದೆ. ಉಳಿದಂತೆ ನೊಂದಣಿಯಾಗಿರುವ 100ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್‌ಗಳ ದುರುಪಯೋಗ ಆಗದೇ ಇರಲು ಬ್ರಾಂಡಿಂಗ್ ಮಾಡಲಾಗಿದೆ ಎಂದು ತಿಳಿಸಿದೆ.
ಇದರಿಂದ ಶುದ್ದ ಕುಡಿಯುವ ನೀರು ಸರಬರಾಜು ಮಾಡುವಂತಹ ಟ್ಯಾಂಕರ್‌ಗಳನ್ನು ಗುರುತಿಸುವುದು ಬಹಳ ಸುಲಭವಾಗಲಿದೆ. ಅಲ್ಲದೇ, ಟ್ಯಾಂಕರ್ ಮಾಲೀಕರು ಅಥವಾ ಚಾಲಕರು ಕಾವೇರಿ ಕನೆಕ್ಟ್ ಸೆಂಟರ್‌ಗಳನ್ನು ಹೊರತುಪಡಿಸಿ, ಬೇರೆ ಕಡೆಗಳಲ್ಲಿ ನೀರು ತುಂಬಿಸುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದು ಹೇಳಿದೆ.
ಟ್ಯಾಂಕರ್‌ಗಳಿಗೆ ಆರ್‌ಎಫ್‌ಐಡಿ ಹಾಗೂ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಟ್ಯಾಂಕರ್ ಜಲಮಂಡಳಿಯ ನಿಗದಿತ ಕಾವೇರಿ ಕನೆಕ್ಟ್ ಸೆಂಟರ್‌ಗಳಲ್ಲೇ ನೀರು ತುಂಬಿಸಿ, ಅವುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದನ್ನು ಖಾತರಿಪಡಿಸಿಕೊಳ್ಳಬಹುದು. ಶುದ್ಧ ನೀರು ಇರುವುದು ಟ್ಯಾಂಕರ್ ಒಳಗಡೆ. ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡಿಸಬೇಕಾದ ಇಪಿಐ ಕೋಟಿಂಗ್ ಕೂಡ ಮಾಡಿಸಲಾಗಿರುತ್ತದೆ. ಪ್ರತಿಯೊಂದು ವಿಷಯದಲ್ಲೂ ಜನರ ಹಿತಾಸಕ್ತಿ ಇಟ್ಟುಕೊಂಡು ಜನಪರ ಯೋಜನೆಗಳನ್ನು ರಾಜ್ಯ ಸರ್ಕಾ ಜಾರಿಗೊಳಿಸುತ್ತಿದೆ. ಹೀಗಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾಡಿರುವ ಟ್ವೀಟ್ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ ಎಂದಿದೆ.
ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಟ್ಯಾಂಕರ್ ನೀರು ಪೂರೈಕೆ ಲಾಬಿಗೆ ಪರಿಹಾರವಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿ ವತಿಯಿಂದ ಸಂಚಾರಿ ಕಾವೇರಿ ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಎಂಬ ವಿನೂತನವಾದ ಯೋಜನೆ ರೂಪಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತೆ, ಈ ಸಂದರ್ಭದಲ್ಲಿ ಖಾಸಗಿ ಟ್ಯಾಂಕರ್‌ಗಳು ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ಜನರ ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುವ ಕಾವೇರಿ ಆನ್ ವ್ಹೀಲ್ಸ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಹೇಳಿದ್ದಾರೆ.












Click it and Unblock the Notifications