ಬೆಂಗಳೂರಿಗರಿಗೆ ಮತ್ತೊಂದು ಬಿಗ್ ಶಾಕ್! ನೀರಿನ ದರ ಏರಿಕೆ ಸುಳಿವು ಕೊಟ್ಟ ಡಿಸಿಎಂ
ಬೆಂಗಳೂರು, ಆಗಸ್ಟ್ 22: ದುಬಾರಿ ದುನಿಯಾದಿಂದ ಈಗಾಗಲೇ ಬೇಸತ್ತಿರುವ ಸಿಲಿಕಾನ್ ಸಿಟಿ ಜನರಿಗೆ ಇದೀಗ ಮತ್ತೊಂದು ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರಿನಾದ್ಯಂತ ಶೀಘ್ರದಲ್ಲೇ ನೀರಿನ ದರ ಹೆಚ್ಚಳ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು ವಿಧಾನಸೌಧದ ಬಳಿ ನಡೆದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.
ಸಾರ್ವಜನಿಕರು ಹಾಗೂ ಮಾಧ್ಯಮದವರೂ ಎಷ್ಟೇ ಬೈದರೂ ನಾವು ನೀರಿನ ದರ ಏರಿಕೆ ಮಾಡೇ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ನೇರವಾಗಿ ಹೇಳಿದ್ದಾರೆ. ಹಲವು ವರ್ಷಗಳಿಂದ ನೀರಿನ ದರವನ್ನು ನಾವು ಹೆಚ್ಚಳ ಮಾಡಿಲ್ಲ. ನೀರಿನ ದರ ಏರಿಸುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ನೀರಿಗೆ ಎಷ್ಟು ಖರ್ಚಾಗುತ್ತಿದೆ? ಹಾಗೂ ಎಷ್ಟು ಜನ ನೀರಿನ ಬಿಲ್ ಕಟ್ಟಿಲ್ಲ? ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ ಎನ್ನುವ ಸಂಪೂರ್ಣ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಜಲಮಂಡಳಿ (BWSSB) ನಷ್ಟದಲ್ಲಿ ನಡೆಯುತ್ತಿದೆ. ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಆಗುತ್ತಿಲ್ಲ. ಜಲಮಂಡಳಿಯು ವಿದ್ಯುತ್ ದರ ಪಾವತಿಸಲೂ ಪರದಾಡುವಂತಾಗಿದೆ. ಸದ್ಯಕ್ಕೆ ನೀರಿನ ದರ ಎಷ್ಟು ಏರಿಕೆ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಶೀಘ್ರವೇ ಕಮಿಟಿ ಸಭೆ ನಡೆಸಿ ಹಾಗೂ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಮೇಕೆದಾಟು ಯೋಜನೆ ಮೇಲೆ ನನಗೆ ಭರವಸೆ ಇದೆ. ಆದಷ್ಟು ಬೇಗ ಅದು ಕಾರ್ಯರೂಪಕ್ಕೆ ಬರಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯೂ ನಮ್ಮ ಮುಂದಿದೆ. ಅದಕ್ಕೆ ಆ ಭಾಗದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಎತ್ತಿನ ಹೊಳೆ ಯೋಜನೆಯು ಒಂದು ಹಂತದಲ್ಲಿ ಇದೆ ಎಂದು ತಿಳಿಸಿದ್ದಾರೆ.
ನೀರು ಮತ್ತು ವಿದ್ಯುತ್ ಎರಡೂ ಪ್ರಮುಖವಾಗಿದ್ದು, ಈ ಹಿಂದೆ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜನ್ನು ಖಾಸಗೀಕರಣ ಮಾಡಬೇಕೆನ್ನುವ ಬಗ್ಗೆ ಚರ್ಚೆ ನಡೆದಿತ್ತು. ಆಗ ಇದು ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗಲಿದೆ ಎಂದು ಹೇಳಿದ್ದೆ. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಹಾಗಾಗಿ ಈ ಚಿಂತನೆಯಿಂದ ನಾವೆಲ್ಲ ಹಿಂದೆ ಸರಿದಿದ್ದೆವು. ಈಗ ನಾನು ಸಚಿವನಾದ ಮೇಲೆ ಮತ್ತೆ ನೀರು ಸರಬರಾಜು ಹಾಗೂ ವಿದ್ಯುತ್ ಖಾಸಗೀಕರಣದ ಬಗ್ಗೆ ಬಂದು ಮಾತನಾಡಿದ್ದರು. ಅದು ಸಾಧ್ಯವಿಲ್ಲ ಎಂದೇ ನಾನು ಹೇಳಿದ್ದೇನೆ ಎಂದಿದ್ದಾರೆ.

ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಯಾರೂ ಬೋರ್‌ವೆಲ್ ಕೊರೆಸುವಂತಿಲ್ಲ. ಅದೇ ರೀತಿ ಕಾಲುವೆಗಳಿಂದ ನೇರವಾಗಿ ನೀರು ತೆಗೆದುಕೊಳ್ಳುವಂತಿಲ್ಲ. ಈ ಕಾನೂನಿಗೆ ರಾಜ್ಯಪಾಲರು ಸಹಿ ಕೂಡ ಹಾಕಿದ್ದಾರೆ. ಹೊಸ ಕಾನೂನು ಜಾರಿಗೆ ಬಂದಿದ್ದು, ಜನ ಈ ಬಗ್ಗೆ ತಿಳಿದುಕೊಂಡಿರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications