D Roopa vs Rohini Sindhuri: ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಫೋಟೋ ವಿಚಾರ: ಸರ್ಕಾರದ ಗಮನಕ್ಕೆ ತಂದಿರುವೆ: ಡಿ.ರೂಪಾ ಮೌದ್ಗಿಲ್
ಶಾಸಕ ಸಾರಾ ಮಹೇಶ್ ಜೊತೆಗಿನ ಜಟಾಪಟಿ, ಐಶಾರಾಮಿ ಬದುಕು ಸೇರಿದಂತೆ ಕೆಲವು ಆರೋಪಗಳಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮುನ್ನೆಲೆಗೆ ಬರುತ್ತಿದ್ದರು. ಇದೀಗ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ಸುದ್ದಿಯಾಗಿದ್ದಾರೆ.
ಬೆಂಗಳೂರು, ಫೆಬ್ರವರಿ 19: ಐಪಿಎಸ್ ಅಧಿಕಾರಿ (ಐಜಿಪಿ) ರೂಪಾ ಡಿ. ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೆ. 19ರಂದು ಭಾನುವಾರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಫೋಟೊಗಳ ಸ್ಕೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಂಚಲನವೊಂದು ಸೃಷ್ಟಿಯಾಗಿದೆ.
ಶಾಸಕ ಸಾರಾ ಮಹೇಶ್ ಜೊತೆಗಿನ ಜಟಾಪಟಿ, ಐಶಾರಾಮಿ ಬದುಕು ಸೇರಿದಂತೆ ಕೆಲವು ಆರೋಪಗಳಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮುನ್ನೆಲೆಗೆ ಬರುತ್ತಿದ್ದರು. ಇದೀಗ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ಮತ್ತೆ ರೋಹಿಣಿ ಸಿಂಧೂರಿಯವರು ಸುದ್ದಿಯಾಗಿದ್ದಾರೆ. ಇದರಿಂದ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿ ಮಧ್ಯೆ ಜಟಾಪಟಿ ಶುರುವಾಗಿದೆ.
'ಒಬ್ಬ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಪುರುಷ ಹಿರಿಯ ಅಧಿಕಾರಿಗಳಿಗೆ ಆಗಾಗ ತಮ್ಮ ಖಾಸಗಿ ಪೋಟೊಗಳನ್ನು ಕಳುಹಿಸುತ್ತಾರೆ. ಒಟ್ಟು ಮೂರು ಪುರುಷ ಅಧಿಕಾರಿಗಳಿಗೆ ಒನ್ ಟು ಒನ್ ಈ ರೀತಿಯ ಫೋಟೋ ಕಳುಹಿಸಿದರೆ ಏನರ್ಥ?. ಇದು ಅವರ ವೈಯಕ್ತಿಕ ಮ್ಯಾಟರ್ ಆಗುವುದಿಲ್ಲ. ಐಎಎಸ್ ಸರ್ವೀಸ್ ಕಂಡಕ್ಟ್ ರೂಲ್ಸ ಪ್ರಕಾರ, ಅಪರಾಧವಾಗುತ್ತದೆ. ಯಾವುದೇ ತನಿಖೆ ಸಂಸ್ಥೆ ತನಿಖೆ ಮಾಡಬಹುದು' ಎಂದು ಅಧಿಕಾರಿ ಡಿ. ರೂಪಾ ಅವರು ಪೋಸ್ಟ್ ಮೂಲಕ ಆಗ್ರಹಿಸಿದ್ದಾರೆ.

ಸರ್ಕಾರದ ಗಮನಕ್ಕೆ ತಂದಿದ್ದೇನೆ: ಡಿ. ರೂಪಾ
ಡಿ.ರೂಪಾ ಅವರ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೂಪಾ ಅವರು ಪೋಸ್ಟ್ ಮಾಡಿರುವ ರೋಹಿಣಿ ಸಿಂಧೂರಿಯವರ ವೈಯಕ್ತಿಕ ಫೋಟೊಗಳು ಹರಿದಾಡುತ್ತಿರುವೆ.
ಈ ಬಗ್ಗೆ ಟ್ವೀಟ್‌ನಲ್ಲಿ ನೆಟ್ಟಿಗರೊಬ್ಬರು, 'ನೀವು ರೋಹಿಣಿ ಸಿಂಧೂರಿ ಅವರ ಮೇಲೆ ಆರೋಪ ಮಾಡುವ ಹಾಗಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಶಿಷ್ಟಾಚಾರ ಪಾಲಿಸಿ. ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೇಜೋವಧೆ ಮಾಡುವ ಹಕ್ಕು ನಿಮಗಿಲ್ಲ' ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಈ ಪೋಸ್ಟ್ ಅನ್ನು ಐಪಿಎಸ್ ಅಸೋಸಿಯೇಷನ್‌ಗೆ ಟ್ಯಾಗ್ ಮಾಡಲಾಗಿದೆ.
ಈ ಟ್ವೀಟ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರೂಪಾ ಮೌದ್ಗಿಲ್ ಅವರು, 'ಸರ್ಕಾರದ ಗಮನಕ್ಕೆ ತಂದಿಲ್ಲ ಅಂತ ನೀವು ಯಾಕೆ ಅಂದುಕೊಳ್ಳು ತ್ತೀರಿ. ಸರ್ಕಾರದ ಗಮನಕ್ಕೆ ತಂದಿದ್ದೇನೆ. ತೇಜೋವಧೆ ಅಲ್ಲ, ಅನೇಕರ ಸಂಸಾರ ಮುರಿದಿರುವ ಬಗ್ಗೆ ನಿಮಗೂ ಸಿಂಪತಿ ಇರಲಿ' ಎನ್ನುವ ಮೂಲಕ ತಾವು ಶಿಷ್ಟಾಚಾರ ಪಾಲಿಸಿರುವುದಾಗಿ ತಿಳಿಸಿದ್ದಾರೆ.

ಮಾನಸಿಕ ಸ್ಥಿಮಿತ ಯಾರು ಕಳೆದುಕೊಂಡಿದ್ದಾರೆ
ಸಲೂನ್ ನಲ್ಲಿ ಹೇರ್ ಕಟ್ ಮಾಡಿಸುವ, ತಲೆದಿಂಬು ಇಟ್ಟು ಮಲಗಿ ತೆಗೆದಿರುವ ತಮ್ಮ ಚಿತ್ರಗಳನ್ನು ರೋಹಿಣಿ ಸಿಂಧೂರಿಯವರು ಮೂರು ಪುರುಷ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ತೆಗೆದಿರುವ ಚಿತ್ರ ನಾರ್ಮಲ್ ಅನ್ನಿಸಬಹುದು, ಆದರೆ ಕೆಲವರಿಗೆ ಕಳುಹಿಸಿರುವ ಸನ್ನಿವೇಶ ಬೇರೆ ಮಾತು ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಬರೆದುಕೊಂಡಿದ್ದಾರೆ.
ಮಾನಸಿಕ ಸ್ಥಿಮಿತ ಯಾರು ಕಳೆದುಕೊಂಡಿರುವುದು?. ನಿಮ್ಮ ಬಣ್ಣ ಬಯಲಾಯಿತು ಎಂದು ಹತಾಶೆಯ ಮಾತೇ? ಒಂದು ಕಡೆ ಹೇಳಿದ್ದೀರಿ, ಡಿಕೆ ರವಿ ಗೆ mental illness ಇದ್ದದ್ದರಿಂದ ಸತ್ತದ್ದು ಎಂದು.ಇಲ್ಲಿ, ನಿಮ್ಮನ್ನು expose ಮಾಡಿದ್ದಕ್ಕೆ ನನ್ನ ಮೇಲೆ ಈ ಆರೋಪ ಮಾಡುತ್ತಿದ್ದೀರಿ. ನಿಮ್ಮ ಭ್ರಷ್ಟಾಚಾರ (corruption)ದ ಚಾಟ್ ಗಳೂ ನನ್ನ ಬಳಿ ಇವೆ. ನನಗೆ ಕ್ಷಮೆ ಕೇಳದೆ ಇದ್ದರೆ ಇದೆ ನೀವು ಹೇಳಿದ ಮಾತಿಗೆ ನಿಮ್ಮ ಮೇಲೆ ಮಾನಹಾನಿ (defamation) ಪ್ರಕರಣ ಹಾಕುತ್ತೇನೆ. ಅಲ್ಲದೆ, ನೀವು ಸೇವಾ ನಿಯಮ ಉಲ್ಲಂಘಿಸಿದ ಬಗ್ಗೆ ಕಾನೂನು ಕ್ರಮ ನಡೆಬೇಕು. ನಿಮ್ಮ ಮೋಜಿನ ಸ್ವಿಮ್ಮಿಂಗ್ ಪೂಲ್ ಡಿಸಿ ಮನೆಯಲ್ಲಿ ಸಾರ್ವಜನಿಕ ಹಣದಿಂದ ಕಟ್ಟಿದ್ದು, ಅದೂ ಕೊರೊನಾ ಕಾಲದಲ್ಲಿ ಅಲ್ಲಿ ಹಾಗೂ ಹೆರಿಟೇಜ್ ಕಟ್ಟಡ (building) ಕಾಯ್ದೆ ಉಲ್ಲಂಘನೆ ಇವುಗಳ ಬಗ್ಗೆ ಶಿಸ್ತು ಕ್ರಮ ಕುರಿತು ನಾನೂ ಫಾಲೋ ಅಪ್ ಮಾಡುತ್ತೇನೆ, ನೆನಪಿಡಿ ಎಂದು ರೂಪಾ ಮೌದ್ಗಿಲ್ ಅವರು ಎಚ್ಚರಿಕೆ ನೀಡಿದ್ದಾರೆ.

ಸ್ಟೇಟಸ್ ಹಾಕಿದ್ದ ಫೋಟೋ ಬಳಸಿ ನಿಂದನೆ:ರೋಹಿಣಿ ಸ್ಪಷ್ಟನೆ
ಡಿ.ರೂಪಾ ಮೌದ್ಗಿಲ್ ಅವರು ಆರೋಪಗಳ ಬೆನ್ನಲ್ಲೆ ರೋಹಿಣಿ ಸಿಂಧೂರಿ ಅವರು ಸಹ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿದ್ದ ಫೋಟೋಗಳನ್ನು ಬಳಸಿ ನಿಂದನೆ ಮಾಡಲಾಗಿದೆ. ಯಾವ ಅಧಿಕಾರಿಗಳಿಗೆ ನಾಣು ಫೋಟೋ ಕಳುಹಿಸಿದ್ದೇನೆ ಎಂದು ರೂಪಾ ಅವರು ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಎಂದರು. ಈ ಮೂಲಕ ತಮ್ಮ ಫೋಟೋಗಳಿಗೆ ಸ್ಪಷ್ಟನೆ ನೀಡಿರುವ ಅವರು ರೂಪಾ ಮೌದ್ಗಿಲ್ ಅವರ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.

ಕರ್ಮ ಮರಳಿ ಬಂದೇ ಬರುತ್ತದೆ: ಕುಸುಮಾ
ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ಅವರ ಜಟಾಪಟಿ ಮುಂದುವರಿದ ಬೆನ್ನಲ್ಲೆ ಪೋಸ್ಟ್‌ಗಳಲ್ಲಿ ಪ್ರಸ್ತಾಪವಾದ ಮೃತ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತಪ್ಪ ಅವರು 'ಕರ್ಮವು ನಿಮ್ಮ ಬಳಿ ಮರಳುತ್ತದೆ- ಅದು ಬೇಗ ಅಥವಾ ನಂತರ ಒಟ್ಟಿನಲ್ಲಿ ಮರಳುತ್ತದೆ' ಎಂದು ಟ್ವೀಟ್ ಮಾಡಿ ಪರೋಕ್ಷವಾಗಿ ರೋಹಿಣಿ ಸಿಂಧೂರಿ ಅವರಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications