ಒಕ್ಕಲಿಗ ಸಂಘದ ಚುನಾವಣೆಯಲ್ಲೂ ಎಚ್‌ಡಿಕೆಗೆ ಶಾಕ್, ಡಿಕೆಶಿ ಬಣಕ್ಕೆ ಜಯ
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಕೆಂಚಪ್ಪ ಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಇತ್ತೀಚೆಗೆ ನಡೆದ ಮಂಡ್ಯ ಉಪಚುನಾವಣೆಯಲ್ಲೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಿತ್ತು. ಇದೀಗ ಒಕ್ಕಲಿಗ ಸಂಘದಲ್ಲೂ ಅವರ ಹಿಡಿತ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.
ಒಕ್ಕಲಿಗರ ಸಂಘದ ಅಧ್ಯಕ್ಷೀಯ ಚುನಾವಣೆಯಲ್ಲಿ ಕುಮಾರಸ್ವಾಮಿ ಬಣಕ್ಕೆ ಹಿನ್ನಡೆಯಾಗಿದೆ. ಇದರಿಂದ ಕುಮಾರಸ್ವಾಮಿಗೆ ಮತ್ತೆ ಮುಗಭಂಗವಾಗಿದೆ. ಕುಮಾರಸ್ವಾಮಿ ಅವರ ಬಣದ ಡಾ.ಆಂಜಿನಪ್ಪ ಅವರು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಸಿದ್ದರು. ಎದುರಾಳಿಯಾಗಿ ಡಿಕೆ ಶಿವಕುಮಾರ್ ಬಣದ ಕೆಂಚಪ್ಪ ಗೌಡ ಅವರು ಕೂಡ ತೀವ್ರ ಪೈಪೋಟಿ ನೀಡಿ ಗೆದ್ದಿದ್ದಾರೆ.

ಡಾ.ಆಂಜಿನಪ್ಪ ಅವರಿಗೆ 14 ಮತಗಳು ಬಂದಿದ್ದರೆ, ಡಿಕೆ ಶಿವಕುಮಾರ್ ಬಣದ ಕೆಂಚಪ್ಪ ಗೌಡ ಅವರಿಗೆ 21 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಲ್ಲದೆ, ಒಕ್ಕಲಿಗ ಸಂಘದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಮತ್ತು ಇತರ ಹಲವು ಹುದ್ದೆಗಳಿಗೆ ನಿನ್ನೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಒಕ್ಕಲಿಗ ಸಂಘದ ಉಪಾಧ್ಯಕ್ಷರಾಗಿ ಎಲ್.ಶ್ರೀನಿವಾಸ್ ಮತ್ತು ರೇಣುಕಾ ಪ್ರಸಾದ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೋನಪ್ಪ ರೆಡ್ಡಿ, ಸಹಾಯಕ ಕಾರ್ಯದರ್ಶಿಯಾಗಿ ಆರ್.ಹನುಮಂತರಾಯಪ್ಪ, ಖಜಾಂಚಿಯಾಗಿ ಎನ್.ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದಿನಿಂದಲೂ ಒಕ್ಕಲಿಗರ ಸಂಘದಲ್ಲಿ ಕುಮಾರಸ್ವಾಮಿ ಅವರು ತಮ್ಮದೇ ಆದ ಹಿಡಿತ ಸಾಧಿಸಿದ್ದರು. ಆದರೆ, ಈ ಬಾರಿ ಅಲ್ಲಿಯೂ ಅವರಿಗೆ ಮುಖಭಂಗವಾಗಿದ್ದು, ಡಿ.ಕೆ.ಶಿವಕುಮಾರ್ ಅವರ ಬಣವು ಬಲಗೊಂಡಿದೆ. ಸದ್ಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೀನಾಯ ಸೋಲಿಗೆ ಕಾರಣವಾಗಿರುವ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರು ತೀವ್ರ ರಣತಂತ್ರ ರೂಪಿಸಿದ್ದರು.

ಈ ಮೂಲಕ ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಸ್ಥಾನ ಇಲ್ಲದಂತೆ ಮಾಡಿರುವ ಡಿ.ಕೆ.ಶಿವಕುಮಾರ್ ಅವರು ಇದೀಗ ಒಕ್ಕಲಿಗ ಸಂಘದಲ್ಲೂ ತಮ್ಮ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಭದ್ರಕೋಟೆ ಎಂದೇ ಕರೆದಿದ್ದ ಚನ್ನಪಟ್ಟಣವು ಇದೀಗ ಕಾಂಗ್ರೆಸ್ ಹಿಡಿತಕ್ಕೆ ಬಂದಿದೆ. ಅದೇ ರೀತಿ ಒಕ್ಕಲಿಗ ಸಂಘ ಕೂಡ ಗೌಡರ ಕುಟುಂಬದ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. ಇಲ್ಲಿಯೂ ಸದ್ಯ ಕಾಂಗ್ರೆಸ್ ಜಯಭೇರಿ ಬಾರಿಸಿ, ಜೆಡಿಎಸ್‌ಗೆ ಟಕ್ಕರ್ ನೀಡಿದೆ.
ಇತ್ತೀಚೆಗೆ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಸಮಾಜದ ಶ್ರೇಯೋಭಿವೃದ್ಧಿಗಾಗಿ ಜನ್ಮತಾಳಿರುವ ರಾಜ್ಯ ಒಕ್ಕಲಿಗರ ಸಂಘವು ಇಂದು ಗುಂಪುಗಾರಿಕೆಯಿಂದ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಒಕ್ಕಲಿಗರ ಸಂಘದ ಗುಂಪುಗಾರಿಕೆ ವಿಚಾರವಾಗಿ ಹೊರಗಡೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ, ಸಂಘದ ಗತಿ ಏನಾಗಬೇಕು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು? ಎಂದು ಕಳವಳ ವ್ಯಕ್ತಪಡಿಸಿದ್ದರು. ಇದೀಗ ಅಧ್ಯಕ್ಷ ಸ್ಥಾನ ಕೂಡ ಡಿ.ಕೆ.ಶಿವಕುಮಾರ್ ಬಣದ ಪಾಲಾಗಿರುವುದು ಅವರ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.












Click it and Unblock the Notifications