ಬೆಂಗಳೂರು ಅಭಿವೃದ್ಧಿ & ಟ್ರಾಫಿಕ್ ಜಾಮ್ ಕಂಟ್ರೋಲ್‌ಗೆ 6 ಸಲಹೆ ಕೊಟ್ಟ ಸಂಸದ ತೇಜಸ್ವಿ ಸೂರ್ಯ!
ಬೆಂಗಳೂರಿನ ಅಭಿವೃದ್ಧಿಗೆ ಹಾಗೂ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಗೆ ಕಡಿವಾಣ ಹಾಕುವುದು ಸೇರಿದಂತೆ ಕೆಲವೊಂದು ಪ್ರಮುಖ ಸಲಹೆಗಳನ್ನು ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ. ಆದರೆ ಅದರಲ್ಲಿ ಒಂದು ಸಲಹೆ ಮಾತ್ರ ಗಂಭೀರವಾದ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟಿರುವ ಸಲಹೆಗಳೇನು ಗಂಭೀರವಾಗಿ ಚರ್ಚೆ ಆಗುತ್ತಿರುವ ವಿಷಯವೇನು ಎನ್ನುವ ವಿವರ ಇಲ್ಲಿದೆ.
ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುರಂಗ ಮಾರ್ಗ ಯೋಜನೆಗೆ (Tunnel Road Project) ಪರ್ಯಾಯಗಳ ಬಗ್ಗೆ ಚರ್ಚಿಸಿರುವುದಾಗಿ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. ಈ ಯೋಜನೆಯು ಸಮರ್ಥನೀಯ ಪರಿಹಾರವಲ್ಲ ಮತ್ತು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಿಲ್ಲ ಎಂಬುದನ್ನು ವಿವರಿಸಿರುವುದಾಗಿ ಅವರು ಹೇಳಿದ್ದಾರೆ. ಮುಂದುವರಿದು 18 ಕಿ.ಮೀ. ಕಾರು-ಕೇಂದ್ರಿತ ರಸ್ತೆಯು ಬೆಂಗಳೂರಿನ ಸಂಚಾರ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ವಾದವು ಅಪ್ರಾಯೋಗಿಕ ಮತ್ತು ಅಸಾಧ್ಯ. ವಾಸ್ತವವಾಗಿ, ಇದು ನಗರದಲ್ಲಿ ದಟ್ಟಣೆ ಮತ್ತು ಪರಿಸರ ಸವಾಲುಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಅಷ್ಟೇ ಅಂತ ಅವರು ಹೇಳಿದ್ದಾರೆ.

ಬೆಂಗಳೂರನ್ನು ನಿಜವಾಗಿಯೂ ದಟ್ಟಣೆ ಮುಕ್ತಗೊಳಿಸಲು, ರೈಲು ಆಧಾರಿತ ಸಾರ್ವಜನಿಕ ಸಾರಿಗೆ ಪರಿಹಾರಗಳ ಕಡೆಗೆ ಗಮನ ಹರಿಸಬೇಕು. ಬೆಂಗಳೂರಿನ ಸಾರ್ವಜನಿಕ ಸಾರಿಗೆ ಜಾಲವನ್ನು ಅಭಿವೃದ್ಧಿಪಡಿಸಲು ಸಮಗ್ರ ದೃಷ್ಟಿಕೋನವನ್ನು ಹೊಂದಿರಬೇಕು. 3 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸಂಚಾರವಿರುವ 300 ಕಿ.ಮೀ. ಮೆಟ್ರೋ ರೈಲು ಜಾಲ, 314 ಕಿ.ಮೀ. ಉಪನಗರ ರೈಲು (Suburban Rail) ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವುದು ಹಾಗೂ ನೆರೆ ಹೊರೆಯೊಳಗೆ ಅಲ್ಪ-ದೂರ ಪ್ರಯಾಣಕ್ಕಾಗಿ ಆಧುನಿಕ ಟ್ರ್ಯಾಮ್‌ಗಳ ಅಳವಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ರೈಲು ಆಧಾರಿತ ಸಾರ್ವಜನಿಕ ಸಾರಿಗೆ ಬೆನ್ನೆಲುಬು ಶೇ. 70ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ರಸ್ತೆ ಸಾರಿಗೆಯಿಂದ ರೈಲು ಸಾರಿಗೆಗೆ ಸ್ಥಳಾಂತರಿಸಲು ಸಹಾಯ ಮಾಡುತ್ತದೆ.
ನಾವು ಹೆಚ್ಚುವರಿಯಾಗಿ 5,000 ಹೊಸ ಬಸ್‌ಗಳನ್ನು ಸೇರಿಸುವ ಮೂಲಕ ಬಿಎಂಟಿಸಿ (BMTC) ಬಸ್ ನಿಲುಗಡೆಯನ್ನು ಹೆಚ್ಚಿಸಬೇಕು ಮತ್ತು ಹೊರ ವರ್ತುಲ ರಸ್ತೆಯಲ್ಲಿ (ORR) ಬಿಆರ್‌ಟಿಎಸ್ ಕಾರಿಡಾರ್ (BRTS corridor) ಅನ್ನು ಪರಿಚಯಿಸಬೇಕು. ಸಂಚಾರ ಯೋಜನೆಗಳ ಪರಿಣಾಮಕಾರಿ ಸಮನ್ವಯ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಬಿಎಂಎಲ್‌ಟಿಎ (BMLTA) ಯನ್ನು ಬಲಪಡಿಸಬೇಕು ಮತ್ತು ಪೂರ್ಣಾವಧಿಯ ಅಧ್ಯಕ್ಷರೊಂದಿಗೆ ಸಶಕ್ತಗೊಳಿಸಬೇಕು ಎಂದಿದ್ದಾರೆ.
ಅಲ್ಲದೇ ಸಕ್ರಿಯ ಸಂಚಾರ ಮತ್ತು ವಾಕಿಂಗ್ ಸ್ನೇಹಿ ಬೆಂಗಳೂರನ್ನು ಉತ್ತೇಜಿಸಲು ಕಾಲುದಾರಿಗಳು (footpaths) ಮತ್ತು ರಸ್ತೆಗಳ ಗುಣಮಟ್ಟ ನಿರ್ವಹಣೆ ಮತ್ತು ರಿಪೇರಿಗಾಗಿ ಮಿಷನ್-ಮೋಡ್ ಕಾರ್ಯಕ್ರಮ ಹಾಗೂ ಪಾದಚಾರಿ-ಸ್ನೇಹಿ ಮೂಲಸೌಕರ್ಯವು ಅತ್ಯಗತ್ಯವಾಗಿದೆ. ಮೆಟ್ರೋ ಮಾರ್ಗಗಳ ಸಕಾಲಿಕ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ವಾರ್ ರೂಮ್ (Special War Room) ಅನ್ನು ಸ್ಥಾಪಿಸಲು ಸಹ ಶಿಫಾರಸು ಮಾಡಲಾಗಿದೆ.
ಈ ಅಪ್ರಾಯೋಗಿಕ ಕಾರು-ಮಾತ್ರದ ಸುರಂಗ ಮಾರ್ಗವನ್ನು ವಿರೋಧಿಸುವುದನ್ನು ಮುಂದುವರಿಸುತ್ತೇನೆ. ಬೆಂಗಳೂರಿನ ಸುದೀರ್ಘಾವಧಿಯ ಹಿತಾಸಕ್ತಿಗಳನ್ನು ಎಲ್ಲಕ್ಕಿಂತ ಮೇಲೆ ಇರಿಸಲು, ಅದರ ಸಂಚಾರ ಸವಾಲುಗಳನ್ನು ಎದುರಿಸಲು ದ್ವಿಪಕ್ಷೀಯ ವಿಧಾನವು (bipartisan approach) ನಿರ್ಣಾಯಕವಾಗಿದೆ ಎನ್ನುವುದರ ಬಗ್ಗೆ ವಿವರಿಸಿರುವುದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.












Click it and Unblock the Notifications