ಮಸಾಜ್ ಹೆಸರಿನಲ್ಲಿ ವೃದ್ಧೆಗೆ ದೋಖಾ: ಕ್ರಿಪ್ಟೋ ಕರೆನ್ಸಿ ಲಾಭದ ಹೆಸರಲ್ಲೂ ನಾಮ
ಬೆಂಗಳೂರು, ಮಾ. 28: ರಾಜಧಾನಿ ಬೆಂಗಳೂರಿನಲ್ಲಿ ಸ್ಮಾರ್ಟ್ ವಂಚಕರು ಹುಟ್ಟುಕೊಂಡಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ. 60 ಪರ್ಸೆಂಟ್ ಲಾಭ ಮಾಡಿಕೊಡುವುದಾಗಿ ನಂಬಿಸಿ ಸೈಬರ್ ವಂಚಕರು ಸಿಕ್ಕ ಸಿಕ್ಕವರಿಗೆ ಬ್ಲೇಡ್ ಹಾಕುತ್ತಿದ್ದಾರೆ. ಇನ್ನೊಂದೆಡೆ ಮಸಾಜ್ ಮಾಡುವುದಾಗಿ ನಂಬಿಸಿ ವೃದ್ಧರ ಬಳಿ ಚಿನ್ನಾಭರಣ ತೆಗೆದುಕೊಂಡು ಎಸ್ಕೇಪ್ ಅಗುತ್ತಿರುವ ಚೋರರು ಹುಟ್ಟು ಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಎರಡು ವಿಚಿತ್ರ ಪ್ರಕರಣಗಳ ವಿವರ ಇಲ್ಲಿದೆ.
ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ದೋಖಾ:
ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ. 60 ರಷ್ಟು ಲಾಭಾಂಶ ಮಾಡಿಕೊಡುವುದಾಗಿ ನಂಬಿಸಿ ಸೈಬರ್ ವಂಚಕನೊಬ್ಬ ಸಾಮಾಜಿಕ ಜಾಲತಾಣ ಬಳಿಸಿಕೊಂಡು ಮುಗ್ಧರಿಗೆ ವಂಚನೆ ಮಾಡುತ್ತಿದ್ದಾನೆ. ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲ ತಾಣದಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಸಂಬಂಧ ಅಭಿಷೇಕ್ ಆಕ್ವಾನ್ ಎಂಬುವ ಪೋಸ್ಟ್ ಹಾಕಿದ್ದ. ಯಂಗೆಸ್ಟ್ ಕ್ರಿಪ್ಟೋ ಟ್ರೇಡರ್ ಹೆಸರಿನಲ್ಲಿ ಹಾಕಿದ್ದ ಪೋಸ್ಟ್ ನಂಬಿ ವ್ಯಕ್ತಿಯೊಬ್ಬ 26 ಸಾವಿರ ರೂ. ವಂಚನೆ ಮಾಡಿದ್ದಾನೆ.
ಇದೇ ರೀತಿ ಹಲವರನ್ನು ಮರಳು ಮಾಡಿ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ. ಈ ಕುರಿತು ದಾಖಲಾದ ದೂರನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಈಶಾನ್ಯ ವಿಭಾಗದ ಸೈಬರ್ ಠಾಣೆ ಪೊಲೀಸರು ಕಿರಣ್ ಭರತೇಶ್, ಆರ್ಶದ್ ಮೊಯಿದ್ದೀನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಅರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಅನೇಕರು ಮೋಸ ಹೋಗಿದ್ದು ಈಶಾನ್ಯ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಸಾಜ್ ಹೆಸರಿಲ್ಲಿ ಅಜ್ಜಿಗೆ ನಾಮ!:
ಅಂಗಡಿಗೆ ಹೋಗಿ ಬರುತ್ತಿದ್ದ ವಯೋವೃದ್ಧ ಅಜ್ಜಿಯೊಬ್ಬರಿಗೆ ಗಾಳ ಹಾಕಿದ ಮಹಿಳೆಯೊಬ್ಬಳು ಕಾಲು ನೋವು ಶಮನ ಮಾಡುವ ಹೆಸರಿನಲ್ಲಿ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ. 19 ರಂದು ವಿಜಯನಗರದ ನಾಗರಭಾವಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿಗೆ ಹೋಗಿ ವಾಪಸು ಕುಂಟುತ್ತಾ ಬರುತ್ತಿದ್ದ ವೃದ್ಧೆಯನ್ನು ಗಮನಿಸಿದ ಮಹಿಳೆ ಪರಿಚಯ ಮಾಡಿಕೊಂಡಿದ್ದಾಳೆ. ಕಾಲು ನೋವಿಗೆ ಮಸಾಜ್ ಮಾಡುವುದಾಗಿ ನಂಬಿಸಿದ್ದಾಳೆ. ಈ ಮಾತನ್ನು ನಂಬಿದ ಅಜ್ಜಿ, ಅಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕಾಲಿಗೆ ಮಸಾಜ್ ಮಾಡಲು ಕತ್ತಿನಲ್ಲಿದ್ದ ಚಿನ್ನದ ಸರ ತೆಗೆದಿಡುವಂತೆ ಮಹಿಳೆ ಸೂಚಿಸಿದ್ದಾಳೆ. ಇದನ್ನು ನಂಬಿ ಚಿನ್ನದ ಸರ ಹೊರ ತೆಗೆದ ಕೂಡಲೇ ಅದನ್ನು ತೆಗೆದುಕೊಂಡು ಮಹಿಳೆ ಪರಾರಿಯಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications