ಹೈಕೋರ್ಟ್ ನಿರ್ದೇಶನ ಮೇರೆಗೆ ಹಳೇ ಛಾಪಾ ಕಾಗದ ಮಾರಾಟ ಜಾಲದ ಮೇಲೆ ದಾಳಿ
ಬೆಂಗಳೂರು, ನ. 13: ನಕಲಿ ಛಾಪಾ ಕಾಗದ ಬಳಸಿ ವಿವಾದಿತ ನಿವೇಶನ ಕಬ್ಜಾ ಮಾಡುವ ಹೊಸ ದಂಧೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಕಲಿ ಛಾಪಾ ಕಾಗದ ಅಡ್ಡೆ ಮೇಲೆ ಪೊಲೀಸರ ದಾಳಿ. ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ದೋಚಿದ್ದ ಕಳ್ಳರು 24 ತಾಸಿನಲ್ಲಿ ಸೆರೆ. ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ವಂಚನೆ ಮಾಡಿದ ಆರೋಪ ಸಂಬಂಧ ಮಗಳ ಮೇಲೆ ತಾಯಿಯಿಂದಲೇ ದೂರು. ಇವಿಷ್ಟು ಬೆಂಗಳೂರು ಅಪರಾಧ ಲೋಕದ ಮಹತ್ವದ ಸುದ್ದಿಗಳು.
ಹಳೇ ದಿನಾಂಕಕ್ಕೆ ಛಾಪಾ ಕಾಗದ ಪಡೆದುಕೊಂಡು ಅವುಗಳಿಂದ ವಿವಾದಿತ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಕಬ್ಜಾ ಮಾಡುವ ದೊಡ್ಡ ಜಾಲ ಬೆಂಗಳೂರಿನಲ್ಲಿ ತಲೆಯೆತ್ತಿದೆ. ಅನೇಕ ಮುಗ್ಧರು ಈ ಜಾಲಕ್ಕೆ ಸಿಲುಕಿ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಳೇ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಹೈಕೋರ್ಟ್, ಹಳೇ ಛಾಪಾ ಕಾಗದ ಮಾರಾಟ ಜಾಲ ಮಟ್ಟ ಹಾಕುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪೊಲೀಸರು ಹಳೇ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಎಸಿಪಿ ಸಕ್ರಿ ಮತ್ತು ತಂಡ ದಾಳಿ ಮಾಡಿ ಸಾವಿರಾರು ನಕಲಿ ಛಾಪಾ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದೆ. ಬ್ಯಾಟರಾಯನಪುರ, ಕೋರಮಂಗಲ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಕಂತೆ ಕಂತೆ ಹಳೇ ಛಾಪಾ ಕಾಗದ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಳೇ ಛಾಪಾ ಕಾಗದ ಪತ್ರಗಳನ್ನು ಬಳಸಿಕೊಂಡು ಕೆಲವರು ಅಪರಾಧ ಕೃತ್ಯ ನಡೆಸುತ್ತಿದ್ದರು. ವಿವಾದಿತ ಜಮೀನುಗಳನ್ನು ಕಬ್ಜಾ ಮಾಡಲಿಕ್ಕೆ ಈ ಕಾಗದ ಪತ್ರಗಳನ್ನು ಬಳಸಿಕೊಳ್ಳುತ್ತಿದ್ದರು. ಹಳೇ ಛಾಪಾ ಕಾಗದ ಪತ್ರ ಬಳಕೆ ಮಾಡಿ ವಂಚನೆಗೆ ಯತ್ನಿಸಿದ ಪ್ರಕರಣವೊಂದು ಹೈಕೋರ್ಟ್ ಗಮನಕ್ಕೆ ಬಂದಿತ್ತು. ವಂಚಕರ ಜಾಲವನ್ನು ಪತ್ತೆ ಮಾಡಲು ಪೊಲೀಸರಿಗೆ ನಿರ್ದೇಶನ ನೀಡಿದ್ದು, ಅದರಂತೆ ನಾಲ್ಕು ಕಡೆ ದಾಳಿ ಮಾಡಿ ಐವರನ್ನು ಬಂಧಿಸಿದ್ದಾರೆ. ಬಂಧಿತರ ವಿವರ ಇನ್ನೂ ತಿಳಿದು ಬಂದಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ಹಳೇ ಛಾಪಾ ಕಾಗದ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಮಗಳಿಂದಲೇ ತಾಯಿಗೆ ಮಹಾ ಮೋಸ:
ನಾಲ್ಕು ಕೋಟಿ ರೂ. ಮೌಲ್ಯದ ಏಳೂವರೆ ಕೆಜಿ ತೂಕದ ವಜ್ರ ಮತ್ತು ಚಿನ್ನಾಭರಣ ಪಡೆದು ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ತಾಯಿಯೇ ಮಗಳ ವಿರುದ್ಧ ದೂರು ನೀಡಿದ್ದಾಳೆ. ವಿಜಯಲಕ್ಷ್ಮೀ ಎಂಬಾಕೆ ತನ್ನ ಮಗಳು ತೇಜವಂತಿ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ವಿಜಯಲಕ್ಷ್ಮೀ ಮನೆಗೆ ತೇಜವಂತಿ ಬಂದಿದ್ದಳು. ಲಾಕರ್‌ನಲ್ಲಿ ಒಡವೆ ಇಡುವುದಾಗಿ ನಂಬಿಸಿ ಮನೆಯಲ್ಲಿದ್ದ ನಾಲ್ಕು ಕೋಟಿ ರೂ. ಮೌಲ್ಯದ ಆಭರಣ ತೆಗೆದುಕೊಂಡು ಹೋಗಿದ್ದಾಳೆ ಎಂದು ವಿಜಯಲಕ್ಷ್ಮೀ ದೂರು ಸಲ್ಲಿಸಿದ್ದಾರೆ.
ಒಂಟಿ ಮಹಿಳೆ ಕಟ್ಟಿ ಹಾಕಿ ಕಳ್ಳತನ ಮಾಡಿದ್ದ ಆರೋಪಿಗಳು ಅಂದರ್:
ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಕೈಕಾಲು ಕಟ್ಟಿ ಹಾಕಿ ಕಳ್ಳತನ ಮಾಡಿದ್ದ ಅರೋಪಿಗಳನ್ನು ಘಟನೆ ನಡೆದ 24 ತಾಸಿನಲ್ಲಿ ಬಂಧಿಸಿದ್ದಾರೆ. ರಾಕೇಶ್ ಮತ್ತು ಆತನ ಸ್ನೇಹಿತ ಬಂಧಿತ ಆರೋಪಿ. ಇತ್ತೀಚೆಗೆ ದೊಡ್ಡಜಾಲದ ಮಹಿಳೆಯೊಬ್ಬರ ಮನೆಗೆ ರಾತ್ರಿ ವೇಳೆ ನುಗ್ಗಿದ್ದ ರಾಕೇಶ್, ಮಹಿಳೆ ಕೈಕಾಲು ಕಟ್ಟಿ ಹಾಕಿ ಕಳ್ಳತನ ಮಾಡಿದ್ದರು. ಕೂಗಾಡಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಘಟನೆ ನಡೆದ 24 ತಾಸಿನಲ್ಲಿ ಇಬ್ಬರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕದ್ದಿದ್ದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












Click it and Unblock the Notifications