ಕೊರೊನಾ, ಕಂಟೇನ್ಮೆಂಟ್ ಪದ್ದತಿಗೆ ಇತಿಶ್ರೀ: ಸದ್ಯದಲ್ಲೇ ಹೊಸ ಪದ್ದತಿ
ಬೆಂಗಳೂರು,ಆ 15: ಕೊರೊನಾ ಸೋಂಕಿತರ ಮನೆ, ವಠಾರ, ಲೇನ್ ಅನ್ನು ಕಂಟೇನ್ಮೆಂಟ್ ಮಾಡುವ ಪದ್ದತಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಇತಿಶ್ರೀ ಹಾಡಲಿದ್ದು, ಹೊಸ ಪದ್ದತಿ ಸದ್ಯದಲ್ಲೇ ಜಾರಿಯಾಗಲಿದೆ.
Recommended Video
"ಹೊಸ ನಿಯಮವನ್ನು ಸರಕಾರದ ಅನುಮೋದನೆಗೆ ಕಳುಹಿಸಲಾಗಿದ್ದು, ಇನ್ನೇನು ಕೆಲವು ದಿನಗಳಲ್ಲಿ ಹೊಸ ಆದೇಶ ಹೊರಡಿಸುವುದಾಗಿ" ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಇನ್ನು ಮುಂದೆ ಕೊರೊನಾ ಸೋಂಕಿತರ ಮನೆಗೆ ಕರಪತ್ರವನ್ನು ಮಾತ್ರ ಅಂಟಿಸಲು ನಿರ್ಧರಿಸಲಾಗಿದ್ದು, ಅಕ್ಕಪಕ್ಕದ ಮನೆಯವರಿಗೆ ಜಾಗೃತಿ ಮೂಡಿಸುವ ಹೊಸ ಪದ್ದತಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಹೊಸ ನಿಯಮ, ಲೇನ್ ನಲ್ಲಿ ಒಂದು ಕೇಸ್ ಪತ್ತೆಯಾದರೆ ಮಾತ್ರ ಅನ್ವಯವಾಗಲಿದೆ.

ಸದ್ಯ, ಸೋಂಕು ಪೀಡಿತರ ಮನೆ ಮತ್ತು ನೂರು ಮೀಟರ್ ಆಸುಪಾಸಿನಲ್ಲಿ ತಗಡಿನ ಶೀಟ್, ಬ್ಯಾರಿಕೇಡ್ ಹಾಕಿ, ಕಂಟೇನ್ಮೆಂಟ್ ವಲಯ ಎಂದು ಬ್ಯಾನರ್ ಹಾಕಲಾಗುತ್ತಿತ್ತು. ಇದರಿಂದ, ಸೋಂಕು ಪೀಡಿತರು ಮತ್ತು ಅಕ್ಕಪಕ್ಕದವರು ಮುಜುಗರಕ್ಕೀಡಾಗುತ್ತಿದ್ದರು.
ಈಗಿರುವ ಪದ್ದತಿಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದರಿಂದ ಬಿಬಿಎಂಪಿ ಈ ಹೊಸ ಪದ್ದತಿ ಜಾರಿಗೆ ತರಲು ಮುಂದಾಗಿದೆ. ಹೊಸ ಪದ್ದತಿ, ಆಗಸ್ಟ್ 20ರೊಳಗೆ ಜಾರಿಯಾಗುವ ಸಾಧ್ಯತೆಯಿದೆ.
"ಈ ನಡುವೆ, ವಾರಾಂತ್ಯದಲ್ಲಿ ಹೊಸದಾಗಿ ಎರಡು ಸಾವಿರಕ್ಕೂ ಹೆಚ್ಚು ವೈದ್ಯರು ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ಅವರನ್ನು ಸೋಂಕಿತರ ಚಿಕಿತ್ಸೆಗೆ ನಿಯೋಜಿಸಲಾಗುವುದು"ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.












Click it and Unblock the Notifications