ಪ್ಯಾರೀಸ್‌ನಲ್ಲಿ ಏರ್ ಶೋ ರದ್ದು; ಬೆಂಗಳೂರು ಏರ್ ಶೋ?
ಬೆಂಗಳೂರು, ಡಿಸೆಂಬರ್ 09 : ಕೋವಿಡ್ ಪರಿಸ್ಥಿತಿ ನಡುವೆಯೇ ಬೆಂಗಳೂರು ನಗರದಲ್ಲಿ ಏರ್ ಶೋ ನಡೆಸಲು ಸಿದ್ಧತೆ ಆರಂಭವಾಗಿದೆ. ಫೆಬ್ರವರಿ 3 ರಿಂದ 7ರ ತನಕ ನಗರದಲ್ಲಿ 13ನೇ ಆವೃತಿಯ ಏರ್ ಶೋ ನಡೆಯಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಜೂನ್‌ನಲ್ಲಿ ಪ್ಯಾರೀಸ್‌ನಲ್ಲಿ ನಡೆಯಬೇಕಿದ್ದ ಏರ್ ಶೋ ರದ್ದುಗೊಳಿಸಲಾಗಿದೆ. ಇದರಿಂದಾಗಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾದ ಬೆಂಗಳೂರು ಏರ್ ಶೋ ನಡೆಯುವ ಕುರಿತು ಪ್ರಶ್ನೆಗಳು ಎದ್ದಿವೆ.
ಏರ್ ಶೋ ನಡೆಸಲು ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಏರ್ ಶೋನಲ್ಲಿ ಪಾಲ್ಗೊಳ್ಳಲು ಈಗಾಗಲೇ ಹಲವಾರು ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಬೆಂಗಳೂರು ಏರ್ ಶೋ ನಡೆಯುವ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಟ್ಟು ಎರಡು ಹಾಲ್‌ಗಳಲ್ಲಿ ಏರ್ ಶೋಗಳನ್ನು ಆಯೋಜನೆ ಮಾಡಲು ತೀರ್ಮಾನ ಮಾಡಲಾಗಿದೆ. ಹಾಲ್‌ಗಳಲ್ಲಿ ಜನರು ಹೇಗೆ ಬರಬೇಕು?, ಸ್ಯಾನಿಟೈಸ್ ಹೇಗೆ ಮಾಡಬೇಕು? ಎಂದು ಯೋಜನೆಗಳನ್ನು ತಯಾರು ಮಾಡಲಾಗುತ್ತಿದೆ.
ಏರ್ ಶೋನಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದ ಹಲವಾರು ಜನರು ಆಗಮಿಸುತ್ತಾರೆ. ಅವರಿಗೆ ಕ್ವಾರಂಟೈನ್ ಮಾಡುವ ಕುರಿತು ಮಾರ್ಗಸೂಚಿಗಳನ್ನು ಸಹ ರಚನೆ ಮಾಡಲಾಗಿದೆ. ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲು 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಅವರು ನೀಡಬಹುದಾಗಿದೆ.
ವಿದೇಶದಿಂದ ಬರುವ ಜನರು ಕಡ್ಡಾಯವಾಗಿ ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಸಲ್ಲಿಸಬೇಕಾಗುತ್ತದೆ. ಏರ್ ಶೋನಿಂದಾಗಿ ವಾಯುಪಡೆಗೆ ಸಹ ಬಲ ಬರಲಿದೆ. ದೇಶ-ವಿದೇಶಗಳ ಹಲವಾರು ಕಂಪನಿಗಳು ಪಾಲ್ಗೊಳ್ಳುತ್ತವೆ, ಆದ್ದರಿಂದ ವ್ಯಾಪಾರ ವಹಿವಾಟಿಗೆ ಸಹ ಅನುಕೂಲವಾಗಲಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಇರುವುದು ಬೆಂಗಳೂರು ನಗರದಲ್ಲಿ. ಮಂಗಳವಾರ ನಗರದಲ್ಲಿ 638 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3,75,163. ಇದುವರೆಗೂ ನಗರದಲ್ಲಿ 4,197 ಜನರು ಮರಣವನ್ನು ಹೊಂದಿದ್ದಾರೆ.












Click it and Unblock the Notifications