• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್; ಚಿಂತಾಜನಕ ಸ್ಥಿತಿಯಲ್ಲಿ ನೆಲಮಂಗಲ

By ಮಣ್ಣೆ ಮೋಹನ್
|

ಬೆಂಗಳೂರು, ಮೇ 04; ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಒಂದಿಲ್ಲೊಂದು ಜಿಲ್ಲೆಯಲ್ಲಿ ಅವಾಂತರಗಳು ನಡೆದು ಸಾವು-ನೋವಿನ ಸಂಖ್ಯೆ ಏರುತ್ತಲೇ ಇದೆ. ಕೆಲವೇ ಕೆಲವು ಜನ ಪ್ರತಿನಿಧಿಗಳು, ಮಂತ್ರಿಗಳು ಕೋವಿಡ್ ವಿರುದ್ಧ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ, ಹಲವರು ನಾಪತ್ತೆಯಾಗಿದ್ದಾರೆ.

ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಹತ್ತಿರವಿರುವ ನೆಲಮಂಗಲದ ಪರಿಸ್ಥಿತಿ ದಿನೇದಿನೇ ಬಿಗಡಾಯಿಸುತ್ತಿದೆ. ಸೀಮಿತ ವೈದ್ಯಕೀಯ ವ್ಯವಸ್ಥೆಯಿಂದ, ಸಿಬ್ಬಂದಿಗಳ ಕೊರತೆಯಿಂದ, ಸಕಾಲಕ್ಕೆ ಬೆಡ್, ಆಕ್ಸಿಜನ್, ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ.

ಚಾಮರಾಜನಗರ ಆಸ್ಪತ್ರೆ ದುರಂತ; ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 27 ಬೆಡ್‌ಗಳು ಮತ್ತು 3 ಐಸಿಯು ಬೆಡ್‌ಗಳಿವೆ. ಇನ್ನು ಖಾಸಗಿ ಆಸ್ಪತ್ರೆಗಳ ಕಡೆ ಬಡವರಂತೂ ಕಾಲಿಡಲು ಸಾಧ್ಯವಿಲ್ಲ. ಉಳ್ಳವರು ತಮ್ಮ ಪ್ರಭಾವ ಬಳಸಿ ಖಾಸಗಿ ಆಸ್ಪತ್ರೆಯಲ್ಲಿರುವ ಬೆಡ್‌ಗಳನ್ನು ಬುಕ್ ಮಾಡಿಕೊಂಡು ಸುರಕ್ಷಿತವಾಗುತ್ತಿದ್ದಾರೆ. ಆದರೆ ಬಡವರು ಪರದಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಿಎಂ ಸಭೆ: ಪ್ರಮುಖಾಂಶಗಳು

ನೆಲಮಂಗಲ ತಾಲ್ಲೂಕಿನಲ್ಲಿ ತಾಲೂಕು ಆರೋಗ್ಯ ಕೇಂದ್ರ ನಗರದಲ್ಲಿದ್ದು, ಉಳಿದಂತೆ ಹೋಬಳಿ ಮಟ್ಟದಲ್ಲಿ 4 ಆರೋಗ್ಯ ಕೇಂದ್ರಗಳಿವೆ. ಇದೇ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ರೋಗಿಗಳಿಗೆ ರಾಪಿಡ್ ಪರೀಕ್ಷೆ, ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ, ಐಸೋಲೇಶನ್‌ಗೆ ಚಿಕಿತ್ಸೆ ಮಾತ್ರ ನೀಡುತ್ತಾರೆ. ಅಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಯಾವ ಸೌಲಭ್ಯವೂ ಇಲ್ಲ.

ಕೊರೊನಾ ಹೆಸರಿನಲ್ಲಿ 420 ಕೆಲಸ ಮಾಡಿದ ಅಪೋಲೊ ಆಸ್ಪತ್ರೆ ವಿರುದ್ಧ ಎಫ್ಐಆರ್ !

ಡಾಬಸ್ ಪೇಟೆ ಕೈಗಾರಿಕಾ ಪ್ರದೇಶವಾಗಿ ಗುರುತಿಸಿಕೊಂಡಿದ್ದರೂ ಸಹ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರಿಲ್ಲದೆ ಸಂಜೆ 5ಗಂಟೆಗೆ ಆಸ್ಪತ್ರೆ ಬಾಗಿಲು ಮುಚ್ಚಿದರೆ, ಮರುದಿನ ಬೆಳಗಿನ 10ಕ್ಕೆ ತೆಗೆಯುತ್ತಾರೆ. ಇಂತಹ ಪರಿಸ್ಥಿತಿ ಇರುವಾಗ ಅಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಸಬಾ ಹೋಬಳಿ, ಸೋಲೂರು ಹೋಬಳಿಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಮೇ 2ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ 20, ದೇವನಹಳ್ಳಿ 76, ದೊಡ್ಡಬಳ್ಳಾಪುರ 76 ನೆಲಮಂಗಲ 113 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನೆಲಮಂಗಲ ಪರಿಸ್ಥಿತಿ ಇಷ್ಟೆಲ್ಲಾ ಚಿಂತಾಜನಕವಾಗಿದ್ದರೂ ಜನಪ್ರತಿನಿಧಿಗಳ ಸುಳಿವೇ ಇಲ್ಲವಾಗಿದೆ. ಸ್ಥಳೀಯ ವಿಧಾನಸಭಾ ಕ್ಷೇತ್ರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಬಚ್ಚೇಗೌಡರು ಚುನಾವಣೆಯಲ್ಲಿ ಗೆದ್ದು ಹೋದನಂತರ ಇಲ್ಲಿಯವರೆಗೂ ಇತ್ತ ತಲೆ ಹಾಕಿಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್ .ಅಶೋಕ ಇಲ್ಲಿಯವರೆಗೂ ನೆಲಮಂಗಲಕ್ಕೆ ಸೌಜನ್ಯದ ಭೇಟಿಯನ್ನೂ ನೀಡಿಲ್ಲ. ದೇವನಹಳ್ಳಿಗೆ ಅನೇಕ ಬಾರಿ ಭೇಟಿ ಕೊಟ್ಟಿದ್ದಾರೆ, ಪತ್ರಿಕೆಗಳಲ್ಲಿ ಸುದ್ದಿಯಾದ ನಂತರ 2 ದಿನಗಳ ಹಿಂದೆ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ ಕೋವಿಡ್ ಕೇಸ್ ಹೆಚ್ಚಿರುವ ನೆಲಮಂಗಲಕ್ಕೆ ಇಲ್ಲಿಯವರೆಗೂ ಭೇಟಿಯನ್ನು ಕೊಟ್ಟಿಲ್ಲ.

ಸ್ಥಳೀಯ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕರಾದ ಎಂ.ವಿ. ನಾಗರಾಜು ತಮ್ಮ ಸರ್ಕಾರವಿದ್ದರೂ ಆಸ್ಪತ್ರೆಗಳಿಗೆ ಅಗತ್ಯವಾದ ಸೌಲಭ್ಯ ದೊರಕಿಸಿಕೊಟ್ಟಿಲ್ಲ. ಕ್ಷೇತ್ರದಲ್ಲಿ ಕೊರೊನಾ ರೋಗ ಕಾಣಿಸಿಕೊಂಡ ನಂತರ ಇಲ್ಲಿನ ಜನತೆಯ ಜೊತೆ ಬೆರೆತಿಲ್ಲ.

ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಾಗೂ ಸಚಿವರಾದ ಅಂಜನಮೂರ್ತಿಯವರ ಸುಳಿವೇ ಇಲ್ಲದಾಗಿದೆ. ವಿರೋಧ ಪಕ್ಷವಾಗಿರುವುದರಿಂದ ತಮ್ಮ ನಾಯಕರನ್ನು ಹಿಡಿದು ಸರ್ಕಾರದ ಮೇಲೆ ಒತ್ತಡ ಹೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ಗೊಡವೆಗೆ ಹೋಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

   IPL 2021 ಮತ್ತೆ ಆರಂಭ ಆಗೋದು ಯಾವಾಗ ಗೊತ್ತಾ?? | Oneindia Kannada

   ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಸಕಾಲಕ್ಕೆ ಸೂಕ್ತ ಚಿಕಿತ್ಸೆ, ಬೆಡ್, ಆಕ್ಸಿಜನ್ ವ್ಯವಸ್ಥೆ ಸಿಗದೆ ಹಲವರು ಅಲೆದು ಅಲೆದು ಸಾಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿ. ಆ ಆಕ್ರೋಶ ಜ್ವಾಲಾಮುಖಿಯಾಗಿ ಹೊರಹೊಮ್ಮುವ ಮುನ್ನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡರೆ ಒಳಿತು. ಅದರಲ್ಲೂ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಈ ಕೂಡಲೇ ಇಲ್ಲಿಗೆ ಭೇಟಿಕೊಟ್ಟು ವ್ಯವಸ್ಥೆ ಸರಿಪಡಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

   English summary
   COVID 19 cases continue to rise in Nelamangala, Bengaluru Rural. No bed and treatment available for people.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X