ಬಿಬಿಎಂಪಿಗೆ 49 ಕೋಟಿ ನಾಮ ಹಾಕಿದವರಿಗೆ ಬಂಧನದ ಭೀತಿ
ಬೆಂಗಳೂರು, ಫೆ. 25 : ಬಿಬಿಎಂಪಿಯಲ್ಲಿ ನಡೆದ 49 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಪಾಲಿಕೆಯ ಅಧಿಕಾರಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲೆಕ್ಕಪತ್ರ ವಿಭಾಗದಲ್ಲಿ ನಡೆದಿದ್ದ 49 ಕೋಟಿ ಅವ್ಯವಹಾರ ಪ್ರಕರಣವನ್ನು ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಬಯಲಿಗೆಳೆದಿದ್ದರು. ಇದರಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ 17 ಮಂದಿ ಬಿಬಿಎಂಪಿ ಅಧಿಕಾರಿಗಳು ಮತ್ತು 12 ಗುತ್ತಿಗೆದಾರರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನಗರದ 9ನೇ ತ್ವರಿತ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಕಾರಣ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. [ಅಧಿಕಾರಿಗಳಿಂದಲೇ ಬಿಬಿಎಂಪಿಗೆ 49 ಕೋಟಿ ನಾಮ]
ಏನಿದು ಹಗರಣ : 39 ಲಕ್ಷ ರೂ. ಹಣ ಬಿಡುಗಡೆಯ ಟಿಪ್ಪಣಿಯನ್ನು ದುರ್ಬಳಕೆ ಮಾಡಿಕೊಂಡು 49 ಕೋಟಿ ರೂ. ಬಿಡುಗಡೆ ಮಾಡಿರುವ ಹಗರಣ ಇದಾಗಿದ್ದು, ಪಾಲಿಕೆ ಲೆಕ್ಕಪತ್ರ ವಿಭಾಗದ ಅಧಿಕಾರಿ ಸಂಜೀವಮೂರ್ತಿಯನ್ನು ಬಿಎಂಟಿಎಫ್ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಪಾಲಿಕೆ ಲೆಕ್ಕಪತ್ರ ವಿಭಾಗದ ಕಚೇರಿ ಸಹಾಯಕ ಸಂಜೀವಮೂರ್ತಿ, ಮುಖ್ಯ ಹಣಕಾಸು ಅಧಿಕಾರಿ ವೀರಗೌಡ ಪಾಟೀಲ್ ಹಾಗೂ ಲೆಕ್ಕಪತ್ರ ಅಧಿಕಾರಿ ರಾಜಶೇಖರ್ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಬಿಎಂಪಿ ಆಯುಕ್ತರು 110 ಹಳ್ಳಿಗಳಲ್ಲಿ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ 39 ಲಕ್ಷ ರೂ. ಬಿಲ್ ಪಾವತಿಸುವಂತೆ ಆದೇಶ ನೀಡಿದ್ದರು. ಈ ಟಿಪ್ಪಣಿ ಹಾಳೆಯನ್ನು ತೆಗೆದು 147 ಕಾಮಗಾರಿಗಳ ಕಡತಕ್ಕೆ ಸೇರಿಸಿ 49 ಕೋಟಿ ರೂ. ಬಿಡುಗಡೆ ಮಾಡಿಕೊಂಡು ಅವ್ಯವಹಾರ ಮಾಡಲಾಗಿದೆ ಎಂಬುದು ಆರೋಪ.












Click it and Unblock the Notifications