COTPA Violation: 13 ವ್ಯಾಪಾರಿ ಸಂಸ್ಥೆಗಳಿಗೆ ಬೀಗ ಜಡಿದ ಬಿಬಿಎಂಪಿ, 50 ನೋಟಿಸ್ ಜಾರಿ
ಬೆಂಗಳೂರು, ಅಕ್ಟೊಬರ್ 20: ಸಿಗರೇಟ್ ಮತ್ತು ಇನ್ನಿತರ ತಂಬಾಕು ಉತ್ಪನ್ನಗಳ ನಿಯಮ ಉಲ್ಲಂಘನೆ ಕುರಿತು ವಿವಿಧ ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಹಲವು ಮಳಿಗೆಗಳನ್ನು ಬಂದ್ ಮಾಡಿಸಿದ್ದಾರೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರೀ ದಂಡ ಸಹ ವಿಧಿಸಿದ್ದಾರೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಅಡಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ನಗರದ ಎಲ್ಲ ಎಂಟು ವಲಯಗಳಲ್ಲಿನ 13 ವ್ಯಾಪಾರ ಸಂಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅಷ್ಟೇ ಅಲ್ಲದೇ ಕಾಯಿದೆ ಉಲ್ಲಂಘನೆ ಮಾಡಿದ್ದಕ್ಕಾಗಿ ಒಟ್ಟು 50 ಸಂಸ್ಥೆಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ತಪ್ಪಿತಸ್ಥರಿಂದ ಸುಮಾರು 50,000 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. ಕಾಯಿದೆ ಉಲ್ಲಂಘನೆ ಪತ್ತೆಗೆ ಸಿಒಟಿಪಿಎ ಉಲ್ಲಂಘನೆ ವಿರುದ್ಧ ನಗರ ಪೊಲೀಸರ ವಿಶೇಷ ಅಭಿಯಾನ ನಡೆಸಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ಕೆ.ವಿ.ತ್ರಿಲೋಕ್ ಚಂದ್ರ ಅವರು ತಿಳಿಸಿದರು.
ಬಿಬಿಎಂಪಿಯಿಂದ 50 ವ್ಯಾಪಾರಿ ಸಂಸ್ಥೆಗಳಿಗೆ ನೋಟಿಸ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ 'ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA)' ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಮೊದಲ ಬಾರಿಗೆ 50 ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದರು.

ಬೆಂಗಳೂರಿನಲ್ಲಿ ವಾರಾಂತ್ಯ ಬಂತೆಂದರೆ ಸಾಕು ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಜನಸಂದಣಿ ಹೆಚ್ಚಿಸುತ್ತದೆ. ಈ ಕುರಿತು ದೀಢಿರ್ ತಪಾಸಣೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಕಾಯ್ದೆ ನಿಯಮಗಳ ಅನುಸರಣೆ ಆಗಿದೆಯೋ ಇಲ್ಲವೆ ಎಂದು ಅಧಿಕಾರಿಗಳು ಪರಿಶೀಲಿಸಿದರು.
ನಿಯಮ ಉಲ್ಲಂಘನೆ ಸಂಬಂಧ ಪೊಲೀಸರಿಗೆ ದೂರುಗಳು
ಇತ್ತೀಚೆಗೆ ಈ ಕಾಯಿದೆ ಉಲ್ಲಂಘನೆ ಮಾಡುತ್ತಿವೆ ಎಂದು ಕೆಲವು ರೆಸ್ಟೋರೆಂಟ್‌ಗಳು, ಪಬ್‌ಗಳು ಮತ್ತು ಕೆಫೆಗಳ ವಿರುದ್ಧ ಸಾಕಷ್ಟು ದೂರುಗಳ ಬಂದಿದ್ದವು. ಅದರ ಆಧಾರದಲ್ಲಿ ನಗರ ಪೊಲೀಸರು ನೂರಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.ಮತ್ತು ನಿಯಮ ಅನುಸರಿಸದ ಹಾಗೂ 'ಧೂಮಪಾನ ನಿಷೇಧ ವಲಯ' ಎಂಬ ಫಲಕಗಳನ್ನು ಹಾಕಿದ್ದಕ್ಕಾಗಿ ಐದು ಸಂಸ್ಥೆಗಳನ್ನು ಮುಚ್ಚಲಾಯಿತು. ಜೊತೆಗೆ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳು ಮಾರ್ಗಸೂಚಿಗಳಿಗೆ ಬದ್ಧವಾಗಿದೆಯೇ ಎಂದು ಪೊಲೀಸರು ಖದ್ದು ಪರಿಶೀಲಿಸಿದ್ದಾರೆ. ಈ ಮೂಲಕ ಪಾಲಿಕೆ ಮತ್ತು ಪೊಲೀಸರು ಇಬ್ಬರು ಸೂಕ್ತ ಕ್ರಮ ಜರುಗಿಸಿದ್ದಾರೆ.
ಪೊಲೀಸ್ ಆಯುಕ್ತರಿಂದ ಜಾಗೃತಿ-ಎಚ್ಚರಿಕೆ
ಇತ್ತೀಚೆಗೆ ಬೆಂಗಳುರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದರು. ಧೂಮಪಾನದ ದುಷ್ಪರಿಣಾಮಗಳ ಕುರಿತು ಕೈಪಿಡಿ ಬಿಡುಗಡೆ ಮಾಡಿ ಕಾಯಿದೆ (COTPA) ನಿಯಮಗಳ ಕುರಿತು ಜಾಗೃತಿ ಮೂಡಿಸಿದ್ದರು. ಇದರ ಬೆನ್ನಲ್ಲೆ ಪೊಲೀಸರು ನಗರದಾದ್ಯಂತ 1,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಪೈಕಿ 900ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications