ಬೆಂಗಳೂರಲ್ಲಿ ಕೊರೊನಾ ಸೋಂಕು ಶಂಕೆ: ಭಯದಿಂದ ರಜೆ ಘೋಷಿಸಿದ ಶಾಲೆ!
ಬೆಂಗಳೂರು, ಮಾರ್ಚ್ 09: ವಿಶ್ವದಾದ್ಯಂತ ಭಯ ಹುಟ್ಟಿಸಿರುವ ಕೊರೊನಾ ವೈರಸ್ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಕೊರೊನಾ ವೈರಸ್ ನಿಂದಾಗಿ ಕರುನಾಡಿನ ಜನರು ಕೂಡ ಬೆಚ್ಚಿಬಿದ್ದಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದಾಗಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಪೂರ್ವ ಪ್ರಾಥಮಿಕ ಶಾಲೆ (ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ) ಗಳಿಗೆ ಇಂದಿನಿಂದ ಮುಂದಿನ ಆದೇಶದವರೆಗೆ ರಜೆ ಘೋಷಿಸಿ ಸರ್ಕಾರ ಆದೇಶಿಸಿದೆ.
ಈ ನಡುವೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಮತ್ತೊಂದು ಶಾಲೆ ಕೊರೊನಾ ವೈರಸ್ ಭೀತಿಯಿಂದ ರಜೆ ಘೋಷಿಸಿದೆ. ಅದಕ್ಕೆ ಕಾರಣ ಓರ್ವ ವಿದ್ಯಾರ್ಥಿನಿ ತಾಯಿ ಬರೆದ ಪತ್ರ.! ಆ ಪತ್ರದಲ್ಲಿ ಏನಿತ್ತು ಅಂತೀರಾ.? ನೀವೇ ಓದಿರಿ..

ವಿದ್ಯಾರ್ಥಿನಿ ತಾಯಿ ಬರೆದ ಪತ್ರ
''ನನ್ನ ಪತಿಗೆ ಕೊರೊನಾ ಸೋಂಕಿನ ಶಂಕೆ ಇದೆ. ಹೀಗಾಗಿ ನಾನು ನನ್ನ ಮಗಳನ್ನು ಶಾಲೆಗೆ ಕಳುಹಿಸುವುದಿಲ್ಲ. ನಾವು ಪ್ರತ್ಯೇಕ ಜಾಗಕ್ಕೆ ತೆರಳುತ್ತಿದ್ದೇವೆ'' ಎಂದು ವಿದ್ಯಾರ್ಥಿನಿಯ ತಾಯಿ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಅದನ್ನ ನೋಡಿ ಶಾಲೆಯ ಆಡಳಿತ ಮಂಡಳಿ ಬೆಚ್ಚಿ ಬಿದ್ದಿದೆ.

ಶಾಲೆಗೆ ರಜೆ ಘೋಷಣೆ
ವಿದ್ಯಾರ್ಥಿನಿಯ ತಾಯಿಯಿಂದ ರವಾನೆಯಾದ ಸಂದೇಶ ನೋಡಿ ಭಯಗೊಂಡ ಶಾಲೆಯ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ. ಜೊತೆಗೆ ಗಾಬರಿಗೊಳ್ಳದೆ, ಕೊರೊನಾ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೂಚಿಸಿದೆ.

ಕೊರೊನಾ ಸೋಂಕು ಶಂಕಿತ ವ್ಯಕ್ತಿ ಪರಾರಿ
ಅತ್ತ ಮಂಗಳೂರಿನಲ್ಲಿ ದುಬೈನಿಂದ ಬಂದಿದ್ದ ಕೊರೊನಾ ಸೋಂಕು ಶಂಕಿತ ವ್ಯಕ್ತಿ ವೈದ್ಯರ ಸಲಹೆಯನ್ನು ನಿರ್ಲಕ್ಷ್ಯಿಸಿ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಕರ್ನಾಟಕದಲ್ಲಿ ಈವರೆಗೂ 87,066 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕರ್ನಾಟಕದಲ್ಲಿ ಈವರೆಗೂ ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆ ಆಗಿಲ್ಲ.

ಕೊರೊನಾದಿಂದ ಹಲವರು ಚೇತರಿಸಿಕೊಂಡಿದ್ದಾರೆ
ಇಲ್ಲಿಯವರೆಗೂ ಚೀನಾದಲ್ಲಿ 80,735 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿವೆ. ಅದರಲ್ಲಿ 58,600 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ 62,278 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.












Click it and Unblock the Notifications