ಕೊರೊನಾ ಕಲಿಸಿದ ಪಾಠ: ರಸ್ತೆಯಲ್ಲಿ ಬಿದ್ದಿದ್ದ ಹಣವನ್ನೂ ಮುಟ್ಟಲು ಜನರಿಗೆ ಭಯ!
ಬೆಂಗಳೂರು, ಮೇ 4: ವೇದ ಸುಳ್ಳಾದರೂ ಗಾದೆ ಸುಳ್ಳಗಾದು ಎಂಬ ಮಾತಿದೆ. ಆದರೆ, ಕೊರೊನಾ ಬಂದ ಮೇಲೆ 'ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ' ಎಂಬ ಗಾದೆ ಸುಳ್ಳಾಗುತ್ತಿದೆ. ಯಾಕಂದ್ರೆ, ಬೀದಿಯಲ್ಲಿ ಹಣ ಕಂಡರೂ ಅದನ್ನು ಮುಟ್ಟಲು ಜನ ಹೆದರುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದ ಬೆಚ್ಚಿಬಿದ್ದಿರುವ ಜನತೆ ಬೀದಿಯಲ್ಲಿ ಯಾರೋ ಬೀಳಿಸಿಕೊಂಡ ಹಣದ ನೋಟುಗಳನ್ನೂ ಮುಟ್ಟಲು ಹಿಂದು-ಮುಂದು ನೋಡುತ್ತಿದ್ದಾರೆ. ''ನೋಟಿನಿಂದ ಸೋಂಕು ಹರಡಬಹುದು'' ಎಂಬ ಭೀತಿಯಿಂದ ಹಣದ ಹತ್ತಿರ ಯಾರೂ ಹೋಗುತ್ತಿಲ್ಲ. ಇಂತಹ ಘಟನೆ ಸದ್ಯ ಬೆಂಗಳೂರಿನ ಕುಮಾರಪಾರ್ಕ್ ನಲ್ಲಿ ನಡೆದಿದೆ.
ಕುಮಾರಪಾರ್ಕ್ ನಲ್ಲಿನ ರೈಲ್ವೇ ಸಮಾನಾಂತರ ರಸ್ತೆಯಲ್ಲಿ ಕೆಲ ಜನ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ರಸ್ತೆ ಮೇಲೆ ನೂರು ರೂಪಾಯಿ ಮುಖಬೆಲೆಯ ಕೆಲ ನೋಟುಗಳು ಬಿದ್ದಿದ್ದವು. ಅದನ್ನ ಕಂಡು ಅಲ್ಲಿನ ಜನರಿಗೆ ಗಾಬರಿಯೋ, ಗಾಬರಿ.

ಕೊರೊನಾ ವೈರಸ್ ಸೋಂಕು ಹರಡುವ ಭಯದಿಂದ ಹಣವನ್ನು ಜೇಬಿಗಿಳಿಸದೆ ಅಲ್ಲಿನ ಜನ ಆತಂಕಗೊಂಡಿದ್ದರು. ಹೀಗಿರುವಾಗಲೇ, ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ಹಣ ಕಳೆದುಕೊಂಡಿದ್ದ ದಂಪತಿ ಕೂಡ ಪ್ರತ್ಯಕ್ಷವಾದರು. ಬಳಿಕ ಹಣದ ಕಳೆದುಕೊಂಡಿದ್ದ ದಂಪತಿಗೆ ಪೊಲೀಸರು ನೋಟುಗಳನ್ನು ಹಸ್ತಾಂತರಿಸಿದರು. ಆ ಮೂಲಕ ಕೊರೊನಾ ವೈರಸ್ ಸೋಂಕು ಹರಡುವ ಉದ್ದೇಶದಿಂದ ನೋಟನ್ನು ಬಿಸಾಡಿರಬಹುದು ಎಂಬ ಶಂಕೆ ಹೊಂದಿದ್ದ ಕುಮಾರಪಾರ್ಕ್ ಜನರು ನಿಟ್ಟುಸಿರು ಬಿಟ್ಟರು.
ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ, 'ಲಕ್ಷ್ಮಿ' ಅಂತ್ಹೇಳಿ ಜನ ಜೇಬಿಗೆ ಇಳಿಸುತ್ತಿದ್ದ ಕಾಲವೊಂದಿತ್ತು. ಆದರೀಗ, ಕೊರೊನಾ ಭಯದಿಂದ ರಸ್ತೆ ಮೇಲೆ 'ಲಕ್ಷ್ಮಿ' ಕಂಡರೂ ಜನರಿಗೆ ಭಯವಾಗುತ್ತಿದೆ. ಎಂಥಾ ಕಾಲ ಬಂತು ನೋಡಿ..












Click it and Unblock the Notifications