ಬೆಂಗಳೂರು ವ್ಯಾಪ್ತಿಗೆ ಕನಕಪುರ: ಭಾರೀ ವಿವಾದ ಸೃಷ್ಟಿಸಿದ ಡಿಕೆಶಿ- ಬೇನಾಮಿ ವಹಿವಾಟು, ಅಕ್ರಮ ಒತ್ತುವರಿ ಬಗ್ಗೆ ಎಚ್‌ಡಿಕೆ ಪ್ರಶ್ನೆ
ಬೆಂಗಳೂರು, ಅಕ್ಟೋಬರ್ 25: ಬೆಂಗಳೂರು ವ್ಯಾಪ್ತಿಗೆ ಕನಕಪುರ ಸೇರಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.
ಕನಕಪುರ ರಾಮನಗರ ಜಿಲ್ಲೆಯ ಭಾಗವಾಗಿಯೇ ಉಳಿಯಬೇಕೆ? ಅಥವಾ ರಾಜಧಾನಿ ಬೆಂಗಳೂರಿನಲ್ಲಿ ವಿಲೀನಗೊಳ್ಳಬೇಕೆ? ಎಂಬುದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಈ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಡಿಕೆಶಿ, 'ಭವಿಷ್ಯದಲ್ಲಿ ಕನಕಪುರ ಬೆಂಗಳೂರಿನ ಭಾಗವಾಗಲಿದೆ' ಎಂದಿದ್ದಾರೆ.

ಕನಕಪುರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಸಕ್ರಮಗೊಳಿಸಲು ಡಿಕೆಶಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರದೇಶದಲ್ಲಿನ ಆಸ್ತಿಗಳ ಮಾಲೀಕತ್ವ, ಬೇನಾಮಿ ವಹಿವಾಟು, ಅಕ್ರಮ ಒತ್ತುವರಿಗಳ ಬಗ್ಗೆ ಎಚ್‌ಡಿಕೆ ಪ್ರಶ್ನಿಸಿದ್ದಾರೆ.
ಕನಕಪುರ ತಾಲೂಕನ್ನು ರಾಮನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರಿನೊಂದಿಗೆ ವಿಲೀನಗೊಳಿಸುವ ಡಿಕೆ ಶಿವಕುಮಾರ್ ಅವರ ಪ್ರಸ್ತಾವವನ್ನು ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕನಕಪುರದವರು ಬೆಂಗಳೂರು ಜಿಲ್ಲೆಗೆ ಸೇರಿದವರು. ರಾಮನಗರಕ್ಕೆ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಇದು ರಾಮನಗರಕ್ಕೆ ಡಿಕೆಶಿ ಮಾಡುತ್ತಿರುವ ದ್ರೋಹ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕನಕಪುರ ಸಮೀಪದ ಶಿವನಹಳ್ಳಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, ಬೆಂಗಳೂರಿನವರಿಗೆ ಭೂಮಿ ಮಾರಾಟ ಮಾಡದಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
'ನೀವು ರಾಮನಗರ ಜಿಲ್ಲೆಯವರಲ್ಲ. ನೀವು ಬೆಂಗಳೂರಿನವರು. ಇದನ್ನು ನೆನಪಿನಲ್ಲಿಡಿ. ನಿಮ್ಮ ಆಸ್ತಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ ಎಂದು ನಾನು ಶಿವನಹಳ್ಳಿಯ ಜನರನ್ನು ಒತ್ತಾಯಿಸುತ್ತೇನೆ. ನಿಮ್ಮ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ನಾನು ಮನೆ ನೀಡಲು ಸಾಧ್ಯವಿಲ್ಲ. ಆದರೆ ನಿಮ್ಮ ಆಸ್ತಿಯ ಮೌಲ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ' ಎಂದು ಡಿಕೆಶಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಟೀಕಿಸಿರುವ ಕುಮಾರಸ್ವಾಮಿ, ಕನಕಪುರದ ಸುತ್ತಮುತ್ತಲಿನ ಆಸ್ತಿ ಮೌಲ್ಯವನ್ನು ಹೆಚ್ಚಿಸಲು ತಮ್ಮ ವೈಯಕ್ತಿಕ ಖಜಾನೆ ತುಂಬಿಸಿಕೊಳ್ಳಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿವಕುಮಾರ್, ನನ್ನ ಪ್ರಸ್ತಾವನೆಯು ನ್ಯಾಯಸಮ್ಮತವಾಗಿದೆ. ಕುಮಾರಸ್ವಾಮಿ ಅವರ ಆರೋಪಗಳು ನನ್ನ ಹೆಸರಿಗೆ ಮಸಿ ಬಳಿಯುವ ತಂತ್ರವಾಗಿದೆ ಎಂದು ಹೇಳಿದ್ದಾರೆ.
ಇಬ್ಬರೂ ನಾಯಕರ ನಡುವಿನ ಮಾತಿನ ಯುದ್ಧವು ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಿಂದ ಸುಮಾರು 55 ಕಿಮೀ ದೂರದಲ್ಲಿರುವ ಕನಕಪುರವು ಪ್ರಸ್ತುತ ರಾಮನಗರ ಜಿಲ್ಲೆಯ ಅಡಿಯಲ್ಲಿ ಬರುತ್ತದೆ. 2007 ರ ಮೊದಲು ಕನಕಪುರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು.












Click it and Unblock the Notifications