ಸರಗಳ್ಳನ ಬಳಿ ಚಿನ್ನಾಭರಣ ಲೂಟಿ, ಪೇದೆ ಜೈಲಿಗೆ!

ಕುಮಾರಸ್ವಾಮಿ ಲೇಔಟ್ ಠಾಣೆ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಯ್ಯ ಬಂಧನಕ್ಕೆ ಒಳಗಾದವರು. ಜೆ.ಪಿ.ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಯ್ಯ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ವರ್ಗಾವಣೆಯಾಗಿದ್ದರು. ಸಿದ್ದಯ್ಯ ಬಂಧನದ ಸಂಗತಿಯನ್ನು ದಕ್ಷಿಣ ವಿಭಾಗದ ಡಿಸಿಪಿ ರೇವಣ್ಣ ಖಚಿತ ಪಡಿಸಿದ್ದಾರೆ.
ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ವರ್ಷದ ಹಿಂದೆ ಮೂರು ಪ್ರತ್ಯೇಕ ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಸರ ದೋಚಿದ್ದ ಆರೋಪಿ ಮಹೇಶ ಎಂಬಾತನನ್ನು ಭೇಟಿ ಮಾಡಿದ್ದ ಸಿದ್ಧಯ್ಯ ಕದ್ದ ಸರಗಳನ್ನು ಪಡೆದಿದ್ದರು. ಯಾರಿಗೂ ಈ ವಿಷಯದ ಕುರಿತು ಮಾಹಿತಿ ನೀಡದಂತೆ ಬೆದರಿಸಿ, ಆಭರಣಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬುದು ಸಿದ್ಧಯ್ಯ ಅವರ ಮೇಲಿರುವ ಆರೋಪ.
ಬೆಳಕಿಗೆ ಬಂದಿದ್ದು ಹೇಗೆ : ಸಿದ್ದಯ್ಯ ಜೆ.ಪಿ.ನಗರ ಠಾಣೆಯಿಂದ ವರ್ಗಾವಣೆಯಾಗಿ ಬಂದರೂ, ಸರ ಅಪಹರಣ ಕುರಿತು ಜೆ.ಪಿ.ನಗರ ಪೊಲೀಸರು ತನಿಖೆ ಮುಂದುವರೆಸಿದ್ದರು. ಎರಡು ದಿನದ ಹಿಂದ ಮಹೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಮುಯದಲ್ಲಿ ದೋಚಿದ್ದ ಸರಗಳನ್ನು ಪೇದೆ ಸಿದ್ದಯ್ಯನಿಗೆ ನೀಡಿದ್ದಾಗಿ ಮಹೇಶ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.'
ಈ ಕುರಿತು ಪೇದೆ ಸಿದ್ದಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಚಿನ್ನಾಭರಣ ಪಡೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ. ಸಿದ್ದಯ್ಯನ ಬಳಿಯಿದ್ದ ಸರಗಳನ್ನು ವಶಪಡಿಸಿಕೊಂಡು ಕದ್ದ ಮಾಲನ್ನು ಅಕ್ರಮವಾಗಿ ಸ್ವೀಕರಿಸಿದ ಆರೋಪ ಹೊರಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸರಗಳನ್ನು ದೋಚಿದ್ದ ಮಹೇಶ್, ಪುರುಷೋತ್ತಮ್, ಶಿವಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಜೆ.ಪಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕಳೆದ ವಾರ ಸಿದ್ಧಾಪುರದ ಪಿಎಸ್‌ಐ ಸೇರಿದಂತೆ ಮೂವರು ಕದ್ದ ಮಾಲನ್ನು ದುರುಪಯೋಗ ಪಡಿಸಿಕೊಂಡ ಆರೋಪದಡಿ ಬಂಧನಕ್ಕೆ ಒಳಗಾಗಿದ್ದರು. ಇನ್ನೊಂದು ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ತನಿಖೆ ನಡೆಯುತ್ತಿದೆ. ಸದ್ಯ ಸಿದ್ದಯ್ಯ ಪ್ರಕರಣ ಪೊಲೀಸರೇ ಕಳ್ಳನನ್ನು ದೋಚಿದ ಮೂರನೇ ಪ್ರಕರಣವಾಗಿದೆ. (ಇನ್ಸ್‌ಪೆಕ್ಟರ್ ಮೇಲೆ ಕಳ್ಳನನ್ನೇ ದೋಚಿದ ದೂರು!)












Click it and Unblock the Notifications