• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಯೋಗ ಸೃಷ್ಟಿಸಲು 'ಉದ್ಯೋಗ ನೀತಿ' ರೂಪಿಸಲಿರುವ ಕಾಂಗ್ರೆಸ್

|
Google Oneindia Kannada News

ಬೆಂಗಳೂರು ಜು.11: ದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಸಮೂಹಕ್ಕೆ ರಾಜ್ಯ ಕಾಂಗ್ರೆಸ್‌ ಪಕ್ಷ ಉದ್ಯೋಗಗಳನ್ನು ಸೃಷ್ಟಿಗೆ 'ಉದ್ಯೋಗ ನೀತಿ' ರೂಪಿಸಲಿದ್ದು, ನಮಗೆ ಸಲಹೆಗಳ ಅಗತ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಹಮ್ಮಿಕೊಂಡಿದ್ದ 'ರಾಜ್ಯ ಯುವ ಕಾಂಗ್ರೆಸ್‌ನ ಯುವ ಧ್ವನಿ' ಸಮಾರಂಭದಲ್ಲಿ ಯವಕರು, ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಡಿ.ಕೆ. ಶಿವಕುಮಾರ್, "ನಾನು, ಸಿದ್ದರಾಮಯ್ಯನವರು ಸೇರಿದಂತೆ ಇತರೆ ನಾಯಕರೆಲ್ಲರೂ ಹಳಬರಾಗಿದ್ದೇವೆ. ಈಗಿನ ಯುವಕರು ಬಹಳ ಬುದ್ಧಿವಂತರಾಗಿದ್ದು, ಯುವಕರ ಧ್ವನಿ ಪಕ್ಷದ ಅಧ್ಯಕ್ಷರ ಧ್ವನಿಯಾಗಬೇಕು. ಅಧಿಕ ಉದ್ಯೋಗ ಸೃಷ್ಟಿಯಾಬೇಕು. ಇದಕ್ಕೆ ನಿಮ್ಮ ಸಲಹೆ ಸಹಕಾರ ಅಗತ್ಯತೆ ಇದೆ," ಎಂದರು.

ಪ್ರದೇಶವಾರು ಹಾಗೂ ತಾಲೂಕುವಾರು ಉದ್ಯೋಗ ನೀತಿ ರೂಪಿಸಬೇಕು ಎಂಬ ಸಲಹೆಗಳನ್ನು ಕಾಂಗ್ರೆಸ್ ಪರಿಗಣಿಸಲಿದೆ. ಆದರೆ, ಪಂಚಾಯ್ತಿ ಮಟ್ಟದಲ್ಲಿ ಉದ್ಯೋಗ ಮೇಳ ಮಾಡುವುದು ಕಷ್ಟ ಸಾಧ್ಯ. ದೇಶದಲ್ಲಿ 18 ವರ್ಷದಿಂದ 40 ವರ್ಷದ ವಯೋಮಾನದವರು ಶೇ.47 ರಷ್ಟು ಜನ ಇದ್ದಾರೆ. ಈಗ ಜಾಗತೀಕರಣ ಹಾಗೂ ಖಾಸಗಿಕರಣದತ್ತ ಸಮಾಜ ಸಾಗುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದ್ದಂತೆ ಉದ್ಯೋಗಗಳ ಬೇಡಿಕೆಯೂ ಹೆಚ್ಚಾಗಿದೆ ಎಂದು ವಿವರಿಸಿದರು.

ನಾವೆಲ್ಲರು ಇಂದು ಸೇರಿರುವುದು ಪ್ರಚಾರ, ಭಾಷಣ ಮಾಡಲು ಅಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಕಳೆದ 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿ, ಸಾಕಷ್ಟು ಬದಲಾವಣೆ ತಂದಿದ್ದೇವೆ. ಜವಾಹರ್ ಲಾಲ್ ನೆಹರೂ ಅವರ ಕಾಲದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಆರಂಭಿಸಲಾಯಿತು. ಉದ್ಯೋಗ ಸೃಷ್ಟಿ ಹಾಗೂ ದೇಶ ಸ್ವಾವಲಂಬನೆ ಸಾಧಿಸಲು ಹೆಚ್ಎಂಟಿ, ಐಟಿಐ, ಬೆಮೆಲ್, ಇಸ್ರೋ, ಬಿಹೆಚ್ಇಎಲ್ ಸೇರಿದಂತೆ ಹಲವು ಉದ್ದಿಮೆಗಳನ್ನು ಆರಂಭಿಸಲಾಯಿತು. ಇಂದು ಅವುಗಳನ್ನೆಲ್ಲ ಮಾರಾಟ ಮಾಡಲಾಗುತ್ತಿದೆ.

ಉದ್ಯೋಗ ಸೃಷ್ಟಿ ಕಾಂಗ್ರೆಸ್‌ನ ಚಿಂತನೆ

ಉದ್ಯೋಗ ಸೃಷ್ಟಿ ಕಾಂಗ್ರೆಸ್‌ನ ಚಿಂತನೆ

ಹೀಗೆಂದ ಮಾತ್ರಕ್ಕೆ ನಾವು ಇಲ್ಲಿ ಬಿಜೆಪಿ ಟೀಕಿಸಲು ಸೇರಿಲ್ಲ. ನಿರುದ್ಯೋಗದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ. ಕಾಂಗ್ರೆಸ್ ಪಕ್ಷದ ಮುಂದಿನ ಚಿಂತನೆ ಹೇಗಿರಬೇಕು? ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ? ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಯಾರು? ಎಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ? ಎಂಬುದನ್ನು ಅರಿಯಬೇಕು.

ಮುಂದೆ ನಾವು ಚುನಾವಣೆಗೆ ಹೋಗುವಾಗ ಯುವಕರಿಗೆ ಯಾವ ಭರವಸೆ ನೀಡಬೇಕು? ಪ್ರಣಾಳಿಕೆಯಲ್ಲಿ ಏನನ್ನು ಹೇಳಬೇಕು? ಕಳೆದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು 'ನ್ಯಾಯ್ ಯೋಜನೆ' ಕುರಿತು ತಿಳಿಸಿದ್ದರು. ಅದೇ ರೀತಿ ಬೇರೆ ಉತ್ತಮ ಯೋಜನೆ ನೀಡಬಹುದೇ? ಎಂದು ಆಲೋಚನೆ ಮಾಡಲು ನಿಮ್ಮನ್ನೆಲ್ಲಾ ಸಮಾರಂಭಕ್ಕೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.

ನಿರುದ್ಯೋಗ ಸಮಸ್ಯೆ ಸಮೀಕ್ಷೆಗೆ ಮೊಬೈಲ್ ಆಪ್ ಸಿದ್ದ

ನಿರುದ್ಯೋಗ ಸಮಸ್ಯೆ ಸಮೀಕ್ಷೆಗೆ ಮೊಬೈಲ್ ಆಪ್ ಸಿದ್ದ

ನಿರುದ್ಯೋಗ ಕುರಿತು ಸಮೀಕ್ಷೆ ನಡೆಸುವವರಿಗೆ ಕಾಂಗ್ರೆಸ್ ಅಗತ್ಯ ನೆರವು ನೀಡಲಿದೆ. ನೀವು ಮನೆ ಮನೆಗೂ ಹೋಗಿ ಆಫ್ ಲೈನ್ ಆದರೂ ಮಾಡಬಹುದು, ಆನ್ ಲೈನ್ ಆಗಿಯಾದರೂ ಸಮೀಕ್ಷೆ ಮಾಡಬಹುದು. ಆನ್ ಲೈನ್ ನಲ್ಲಿ ಸಮೀಕ್ಷೆ ಮಾಡಲು ಆಪ್ ಕೂಡ ಸಿದ್ಧಪಡಿಸಲಾಗಿದೆ. ಆ ಮೂಲಕ ಯುವಕರು ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ತಿಳಿಯುವುದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೇ ಸಮೀಕ್ಷೆ ವೇಳೆ ಪಕ್ಷಕ್ಕೆ ಯಾರೂ ಸ್ಪಂದಿಸುತ್ತಾರೆ?, ಯಾರು ಸ್ಪಂದಿಸುವುದಿಲ್ಲ? ಎಂದು ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಡಿಜಿಟಲ್ ಯೂಥ್ ನೇಮಕ ಮಾಡಲು, ಬೂತ್ ಮಟ್ಟದ ಸಮತಿ ರಚಿಸಲು ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.

ಬಿಜೆಪಿಯಿಂದ ಸ್ವಾತಂತ್ರ್ಯ ಹೈಜಾಕ್ ಆಗಿದೆ

ಬಿಜೆಪಿಯಿಂದ ಸ್ವಾತಂತ್ರ್ಯ ಹೈಜಾಕ್ ಆಗಿದೆ

ಈ ದೇಶಕ್ಕೆ ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿಯವರು ಹೈಜಾಕ್ ಮಾಡಲು ಹೊರಟಿದ್ದಾರೆ. ಅವರು ಮನೆ, ಮನೆಯಲ್ಲೂ ತಿರಂಗಾ ಹಾರಿಸುವುದಾಗಿ ಹೇಳುತ್ತಾರೆ. ಆದರೆ ಬಿಜೆಪಿಯವರು ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಆದರೂ ಸ್ವಾತಂತ್ರ್ಯ ನಮ್ಮದು ಎನ್ನುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಆಗಸ್ಟ್ ನಲ್ಲಿ ಸ್ವಾತಂತ್ರ್ಯ ನಡಿಗೆ

ಆಗಸ್ಟ್ ನಲ್ಲಿ ಸ್ವಾತಂತ್ರ್ಯ ನಡಿಗೆ

ಸೋನಿಯಾ ಗಾಂಧಿ ಮಾರ್ಗದರ್ಶನ ಮೇರೆಗೆ ದೇಶದ 75ನೇ ಸ್ವಾತಂತ್ರ್ಯ ದಿನಾಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡಲಿದೆ. ಜತೆಗೆ ಬೆಂಗಳೂರಿನಲ್ಲಿ ಆಗಸ್ಟ್ 15ರಂದು ನಡೆಸಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಕನಿಷ್ಠ 1 ಲಕ್ಷ ಮಂದಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಬೇಕು. ಆ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಬೇಕು. ದೂರದ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಿಂದ 500-1000 ಜನ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಪ್ರತಿ ಕ್ಷೇತ್ರದಿಂದ ಕನಿಷ್ಠ 3 ಸಾವಿರ ಜನ ಭಾಗವಹಿಸಬೇಕು. ಈ ಪಾದಯಾತ್ರೆಯಲ್ಲಿ ಎಲ್ಲ ವರ್ಗದವರು ಕೂಡ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


ಈ ಕಾರ್ಯಕ್ರಮಕ್ಕಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಾನು 70-80 ಕ್ಷೇತ್ರಗಳ ಪ್ರವಾಸ ಮಾಡುತ್ತೇನೆ. ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ಇತರೆ ನಾಯಕರು ಕೂಡ ಪ್ರವಾಸ ಮಾಡುವಂತೆ ಮನವಿ ಮಾಡುತ್ತೇನೆ. ಬಿಜೆಪಿಯವರ ಅಪರಾಧಗಳು ಬಹಳಷ್ಟಿದ್ದು, ಅವುಗಳೇ ನಮಗೆ ಅಸ್ತ್ರವಾಗಿವೆ. ಕಾರ್ಯಕರ್ತರನ್ನು ನಾವು ಆನ್‌ಲೈನ್ ಮೂಲಕ ಸಂಪರ್ಕಿಸುತ್ತೇವೆ. ಕಾಂಗ್ರೆಸ್ ನ ಮುಂದಿನ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

Recommended Video

   Narendra Modi ಹೊಸ ಸಂಸತ್ ಭವನದ ಮೇಲೆ ಲಾಂಛನವನ್ನು ಅನಾವರಣಗೊಳಿಸಿದರು | *India | OneIndia Kannada
   English summary
   The Congress Party will be formulate an 'Employment Policy' to create jobs for the youth, and we need suggestions, said KPCC President DK Shivakumar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X