ಮೇಕೆದಾಟು ಪಾದಯಾತ್ರೆ ಮೇಲೆ ಕೊರೊನಾ ಕರಿನೆರಳು?
ಬೆಂಗಳೂರು, ಜನವರಿ 4: ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಮೇಲೆ ಕೊರೊನಾ ಸೋಂಕಿನ ಕರಿನೆರಳು ಬೀಳಲಿದೆಯಾ ಎಂಬ ಆತಂಕ ಇದೀಗ ಶುರುವಾಗಿದೆ.
ರಾಜ್ಯದಲ್ಲಿ ಸ್ಫೋಟವಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪ್ರಕರಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದೇ ವೇಳೆ ಪಾದಯಾತ್ರೆ ನಡೆಸಿದರೆ ಕೊರೊನಾ ಹರಡಲು ರಹದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ನಾವು ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿಯೇ ಮಾಡುವುದಾಗಿ ಹೇಳುತ್ತಲೇ ಬರುತ್ತಿದ್ದಾರೆ.

ಜನ ಸೇರಿಸಿ ಪಾದಯಾತ್ರೆ ಮಾಡುವುದೆಷ್ಟು ಸರಿ?
ಪಾದಯಾತ್ರೆ ಹಮ್ಮಿಕೊಂಡಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ಬೆದರಿದ್ದು, ಹೀಗಾಗಿ ಪಾದಯಾತ್ರೆಯನ್ನು ತಡೆಯಲು ಸರ್ವ ಪ್ರಯತ್ನ ಮಾಡುತ್ತಿವೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅದು ರಾಜಕೀಯವಾಗಿ ನೋಡಿದಾಗ ನಿಜವೇ ಆಗಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಜನರನ್ನು ಸೇರಿಸಿ ಪಾದಯಾತ್ರೆ ಮಾಡುವುದೆಷ್ಟು ಸರಿ? ಎಂಬ ಪ್ರಶ್ನೆಯನ್ನು ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ.
ಮೇಕೆದಾಟು ಯೋಜನೆ ರಾಜ್ಯದ ಜನತೆಗೆ ಅದರಲ್ಲೂ ಕಾವೇರಿ ಕಣಿವೆಯ ಮಂದಿಗೆ ಅಗತ್ಯವೇ. ಈ ಯೋಜನೆ ಅನುಷ್ಠಾನಗೊಂಡರೆ ಅದರಿಂದ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಯೋಜನೆ ಅನುಷ್ಠಾನಗೊಳಿಸಬೇಕಾದರೆ ರಾಜ್ಯದ ಕಡೆಯಿಂದ ಸರ್ವ ಪಕ್ಷಗಳು ರಾಜಕೀಯ ಮರೆತು ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಚಿಂತನೆ ನಡೆಸಬಹುದು. ಅದು ಕಷ್ಟವೇನಲ್ಲ, ಆದರೆ ಆಗುತ್ತಿರುವುದೇ ಬೇರೆ.

ಪಾದಯಾತ್ರೆ ಕಾಂಗ್ರೆಸ್‌ಗೆ ಲಾಭವಾಗುತ್ತಾ?
ಮುಂದಿನ 2023ರ ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್‌ಗೆ ಹಳೇ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಲಾಭ ತಂದುಕೊಡಬಹುದು ಎಂಬ ಭ್ರಮೆಯಿದ್ದು, ಹೀಗಾಗಿ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಹೋರಾಟಕ್ಕಿಳಿದಿದೆ. ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರದಲ್ಲಿ ಮಾಡುವ ಮೂಲಕ ಪಕ್ಷದ ಸಂಘಟನೆಗೂ ಒತ್ತು ನೀಡಲಾಗಿದೆ.
ಆದರೆ ಜೆಡಿಎಸ್ ಈ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ಮತ್ತು ಸಂಬಂಧಿಸಿದ ಕೆಲವು ದಾಖಲೆಗಳನ್ನು ಹೊರಹಾಕುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೇಕೆದಾಟು ವಿಚಾರ ಮುಂದಿನ ದಿನಗಳಲ್ಲಿ ಭಾರೀ ಆರೋಪ ಪ್ರತ್ಯಾರೋಪಗಳಿಗೆ ದಾರಿ ಮಾಡಿಕೊಟ್ಟರೂ ಅಚ್ಚರಿಪಡಬೇಕಾಗಿಲ್ಲ.

ಡಿಕೆಶಿ ಬ್ರದರ್ಸ್ ಮತ್ತು ಎಚ್‌ಡಿಕೆಗೆ ಪ್ರತಿಷ್ಠೆ
ಹಳೇ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಅದರಲ್ಲೂ ರಾಮನಗರದಲ್ಲಿ ಪ್ರಾಬಲ್ಯ ಸಾಧಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಹಠಕ್ಕೆ ಬಿದ್ದಿದೆ ಎನ್ನುವುದಕ್ಕಿಂತಲೂ ಡಿಕೆಶಿ ಬ್ರದರ್ಸ್ ಮತ್ತು ಎಚ್‌ಡಿಕೆ ನಡುವೆ ಪ್ರತಿಷ್ಠೆ ಶುರುವಾಗಿದ್ದು, ಒಕ್ಕಲಿಗ ಮತವನ್ನು ಹಿಡಿದಿಟ್ಟುಕೊಳ್ಳಲು ಹೋರಾಟ ಆರಂಭವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜೆಡಿಎಸ್ ಪ್ರಬಲವಾದಷ್ಟು ತೊಂದರೆ ತಪ್ಪಿದ್ದಲ್ಲ ಎಂಬ ಅರಿವು ಇರುವುದರಿಂದಲೇ ಕಾಂಗ್ರೆಸ್ ಇದೀಗ ಜೆಡಿಎಸ್‌ನ್ನು ಕಟ್ಟಿಹಾಕುವ ತಂತ್ರಕ್ಕೆ ಮುಂದಾಗಿದ್ದು, ಮೇಕೆದಾಟು ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿದೆ. ಆ ಮೂಲಕ ಜೆಡಿಎಸ್ ಮತ್ತು ಬಿಜೆಪಿಗೆ ಟಾಂಗ್ ಕೊಡುವ ಮೊದಲ ಪ್ರಯತ್ನ ಇದಾಗಿದೆ. ಹೀಗಾಗಿ ಈ ಪಾದಯಾತ್ರೆಯನ್ನು ಯಾವುದೇ ಅಡೆತಡೆಯಾದರೂ ಎಲ್ಲವನ್ನು ನಿಭಾಯಿಸಿ ಮಾಡುತ್ತೇವೆ ಎಂಬ ಹಠಕ್ಕೆ ಕಾಂಗ್ರೆಸ್ ನಾಯಕರು ಬಿದ್ದಿದ್ದಾರೆ.

ಕೊರೊನಾ ಹೆಚ್ಚುತ್ತಿರುವ ಈ ಕಾಲದಲ್ಲಿ ಕಾಂಗ್ರೆಸ್ ಪಾದಯಾತ್ರೆ
ಇದೆಲ್ಲದರ ನಡುವೆಯೂ ಮೇಕೆದಾಟು ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆಗೆ ಯಾವುದೇ ರೀತಿಯ ವಿಘ್ನ ಬಾರದೆಂದು ಪ್ರಾರ್ಥಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೆಂಪಲ್ ರನ್ ಮಾಡುತ್ತಲೇ ಇದ್ದಾರೆ. ಈಗಾಗಲೇ ಕೊಡಗಿನ ತಲಕಾವೇರಿ, ಭಾಗಮಂಡಲ, ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ಆದಿಚುಂಚನಗಿರಿ ಕ್ಷೇತ್ರ ಸೇರಿದಂತೆ ಹಲವು ದೇಗುಲಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳಿತಾಗಲೆಂದು ಜತೆಗೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಪಾದಯಾತ್ರೆಗೆ ಎಲ್ಲಿ ವಿಘ್ನ ಎದುರಾಗುತ್ತದೆಯೋ ಎಂಬ ಭಯ ಕಾಡುತ್ತಿರುವುದಂತು ಸತ್ಯ. ಮುಂದೆ ಏನಾಗಲಿದೆ? ಕೊರೊನಾ ಹೆಚ್ಚುತ್ತಿರುವ ಈ ಕಾಲದಲ್ಲಿ ಕಾಂಗ್ರೆಸ್ ಪಾದಯಾತ್ರೆಯನ್ನು ಯಾವ ರೀತಿ ನಡೆಸುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ.












Click it and Unblock the Notifications