'ಕೈ' ಶಾಸಕ ನಾಗೇಂದ್ರ ಇಂದು ಕೂಡ ಸದನಕ್ಕೆ ಗೈರು ಸಾಧ್ಯತೆ
ಬೆಂಗಳೂರು, ಜುಲೈ 22: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾಂಗ್ರೆಸ್ ಶಾಸಕರ ಬಿ. ನಾಗೇಂದ್ರ ಇಂದು ಕೂಡ ಸದನಕ್ಕೆ ಗೈರಾಗುವ ಸಾಧ್ಯತೆ ಇದೆ.
ಶಾಸಕ ವಿಶ್ವಾಸ ಮತದಿಂದ ತಪ್ಪಿಸಿಕೊಳ್ಳಲು ಸದನಕ್ಕೆ ಗೈರಾಗಿದ್ದಾರೆ, ಅವರು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು.
ಬಿ ನಾಗೇಂದ್ರ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಶಸ್ತ್ರ ಚಿಕಿತ್ಸೆ ನಡೆಯುವ ಸಾಧ್ಯತೆ ಇರುವ ಕಾರಣ ಇಂದೂ ಕೂಡ ಸದನಕ್ಕೆ ನಾಗೇಂದ್ರ ಅವರು ಬರುವುದು ಸಂದೇಹ ಎನ್ನಲಾಗಿದೆ.

ನಾಗೇಂದ್ರ ಇರುವ ವಾರ್ಡಿನಲ್ಲಿ ಪೊಲೀಸರು ಭದ್ರತೆ ಹೆಚ್ಚಿದ್ದು ಯಾರಿಗೂ ಅವರನ್ನು ನೋಡಲು ಅವಕಾಶ ಮಾಡಿಕೊಡುತ್ತಿಲ್ಲ. ಹೆಬ್ಬಾಳ ಬಳಿಯ ಆಸ್ಪರ್ ಆಸ್ಪತ್ರೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆ ನೋವಿನ ಕಾರಣ ಆಸ್ಪತ್ರೆಯಲ್ಲಿರುವ ಅವರು ಸೋಮವಾರದ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಜಮಿರ್ ಅಹಮದ್ ಖಾನ್ ಕಳೆದ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ನಾಗೇಂದ್ರ ಆರೋಗ್ಯ ವಿಚಾರಿಸಿದ್ದರು. ವಿಶ್ವಾಸಮತಯಾಚನೆ ಕುರಿತು ಮಾಹಿತಿ ನೀಡಿ ಗುರುವಾರ ಸದನಕ್ಕೆ ಆಗಮಿಸುವಂತೆ ಕೋರಿದ್ದರು.
5 ಅತೃಪ್ತ ಶಾಸಕರು ಈಗಾಗಲೇ ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಯಾವ ತಂತ್ರ ಅನುಸರಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಶುಕ್ರವಾರ ಆಪರೇಷನ್ ಮಾಡಲಾಗುತ್ತದೆ ಎನ್ನಲಾಗಿತ್ತು. ಹಿನ್ನಲೆಯಲ್ಲಿ ಗುರುವಾರ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಾಗೇಂದ್ರ ಅವರು ಸ್ಪಷ್ಟಪಡಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಪಾಲಿನ ಮತ್ತೊಂದು ಮತ ಕಡಿಮೆಯಾಗಲಿದೆ.












Click it and Unblock the Notifications