ವರ್ಗಾವಣೆಯಿಂದ ಹಣ ಮಾಡಿಕೊಳ್ಳಲು ಶಾಸಕರಿಗೆ ಸೂಚನೆ, ಕಾಂಗ್ರೆಸ್‌ನಿಂದ ರಾಜಭವನ ದುರುಪಯೋಗ: ಮಾಜಿ ಸಿಎಂ
ಬೆಂಗಳೂರು, ಆಗಸ್ಟ್ 04: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ರಾಜ್ಯಪಾಲರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇದೀಗ ಸರ್ಕಾರ ವರ್ಸಸ್ ರಾಜ್ಯಪಾಲರು ಎಂಬಂತಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ.
ಇದೀಗ ಈ ಬಗ್ಗೆ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಫ ಮಾಡಿದ್ದಾರೆ. ರಾಜಭವನವನ್ನು ಅತಿ ಹೆಚ್ಚುಬಾರಿ ದುರಪಯೋಗ ಪಡೆಸಿಕೊಂಡಿರುವ ಶ್ರೇಯಸ್ಸು ಕಾಂಗ್ರೆಸ್‌ಗೆ ಇದೆ.

ದೇಶದಲ್ಲಿ ಸುಮಾರು 56ಕ್ಕಿಂತಲೂ ಹೆಚ್ಚುಬಾರಿ ರಾಜಭವನವನ್ನು ದುರುಪಯೋಗ ಪಡೆಸಿಕೊಂಡು ಸರ್ಕಾರಗಳನ್ನು ಉರುಳಿಸಿದ್ದು ಕಾಂಗ್ರೆಸ್ ಎಂದು ಅವರು ಆಪಾದಿಸಿದರು.
ಕಾಂಗ್ರೆಸ್ ಕ್ಷಮೆ ಕೇಳುತ್ತದೆಯೇ?
ಕರ್ನಾಟಕ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ರಾಜ್ಯಭವನವನ್ನು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದರು. ಅತಿ ಹೆಚ್ಚು ವಿವಾದಾತ್ಮಕ ಹಾಗೂ ಪ್ರಶ್ನಾರ್ಹ ರಾಜ್ಯಪಾಲರಾಗಿದ್ದ ಗ್ರೇಟ್ ಹಂಸರಾಜ ಭಾರದ್ವಾಜ್ ಅವರು ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಏನೂ ಪ್ರಕರಣ ಇಲ್ಲದೇ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ಈಗ ಆ ಪ್ರಕರಣ ಬಿದ್ದುಹೋಗಿದೆ. ಕಾಂಗ್ರೆಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ರಾಜಭವನವನ್ನು ಅತಿ ಹೆಚ್ಚು ದುರುಪಯೋಗ ಮಾಡಿಕೊಂಡಿದೆ. ರಾಜಭವನ ದುರುಪಯೋಗ ಮಾಡಿಕೊಂಡು ಕೇರಳ ಸೇರಿದಂತೆ ಅನೇಕ ಸರ್ಕಾರಗಳನ್ನು ಉರುಳಿಸಿರುವ ಕಾಂಗ್ರೆಸ್ ನಮಗೆ ಪಾಠ ಹೇಳುವುದು ಬೇಕಾಗಿಲ್ಲ ಎಂದರು.

ಯಾವುದೇ ತನಿಖೆ ಬೇಕಾದರೂ ನಡೆಸಲಿ
ಇನ್ನು ಹಿಂದಿನ ಸರ್ಕಾರದಲ್ಲಿ ನಡೆದ ಹಗರಣಗಳನ್ನು ಬಹಿರಂಗ ಪಡೆಸುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಸದ್ಯ ಅವರದ್ದೇ ಸರ್ಕಾರ ಇದ್ದು, ಯಾವುದೇ ತನಿಖೆ ಬೇಕಾದರೂ ನಡೆಸಲಿ ಎಂದು ಅವರು ಸವಾಲು ಹಾಕಿದರು.
ಪಿಎಸ್‌ಐ ಸಾವಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ವರ್ಗಾವಣೆ ದಂಧೆ ಆರಂಭವಾಗಿದೆ. ಅಭಿವೃದ್ಧಿಯಲ್ಲಿ ನಯಾಪೈಸೆ ಕೊಡುತ್ತಿಲ್ಲ. ಶಾಸಕರೆಲ್ಲ ಗಂಟು ಬಿದ್ದಿದ್ದಾರೆ.
ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರೆಲ್ಲ ವರ್ಗಾವಣೆಯಲ್ಲಿಯೇ ದುಡ್ಡು ಮಾಡುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ನೀಡಿದ್ದಾರೆ. ಆ ಅಡಿಯಲ್ಲಿಯೇ ವರ್ಗಾವಣೆಗಳು ನಡೆಯುತ್ತಿವೆ. ವಿಪರೀತ ಹಣ ಕೇಳುವುದರಿಂದ ಇಡೀ ನೌಕರರ ಸಮೂಹ ಒತ್ತಡದಲ್ಲಿದೆ. ಸಾವಿಗೀಡಾದವರಷ್ಟೇ ಅಲ್ಲ. ಬಹಳ ಜನ ತೀವ್ರ ಒತ್ತಡದಲ್ಲಿದ್ದಾರೆ ಎಂದು ಅವರು ವಿವರಿಸಿದರು.
ನೌಕರರು ಹಣ ಕೊಡಲು ಆಗುವುದಿಲ್ಲ. ಹಣ ಕೊಟ್ಟವರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಭ್ರಷ್ಟಾಚಾರವನ್ನು ಮೇಲಿನಿಂದ ಕೆಳಗೆ ವ್ಯವಸ್ಥಿತವಾಗಿ ಮಾಡಿರುವುದರಿಂದ ಈ ರೀತಿಯ ಸಾವುಗಳು ನಡೆಯುತ್ತವೆ ಎಂದು ಅವರು ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಹೊರಿಸಿದರು.












Click it and Unblock the Notifications