ನಟಿ ಸಂಯುಕ್ತಾ ಹೆಗ್ಡೆ ಜತೆ ಕಿರಿಕ್: ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಬಂಧನ
ಬೆಂಗಳೂರು, ಸೆಪ್ಟೆಂಬರ್ 8: ಸರ್ಜಾಪುರ ರಸ್ತೆಯ ಅಗರ ಕೆರೆಯ ಉದ್ಯಾನದಲ್ಲಿ ಶುಕ್ರವಾರ ನಡೆದ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅವರನ್ನು ಬಂಧಿಸಲಾಗಿದೆ. ನಟಿ ಸಂಯುಕ್ತಾ ಹೆಗ್ಡೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ಉಡುಪು ಧರಿಸಿ ವರ್ಕೌಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಆಕ್ಷೇಪಿಸಿದ್ದರು. ಇದು ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಸಂಯುಕ್ತಾ ಸ್ನೇಹಿತೆಯ ಹಲ್ಲೆ ನಡೆಸಲೂ ಕವಿತಾ ಮುಂದಾಗಿದ್ದರು.
Recommended Video
ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಸಂಯುಕ್ತಾ ಹೆಗ್ಡೆ ದೂರು ಸಲ್ಲಿಸಿದ್ದರು. ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಕವಿತಾ ರೆಡ್ಡಿ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಲಾಗಿತ್ತು. ಮಂಗಳವಾರ ಅವರನ್ನು ಬಂಧಿಸಲಾಗಿದೆ.
ಎರಡನೆಯ ಆರೋಪಿ ಅನಿಲ್ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಸಂಯುಕ್ತಾ ಹೆಗ್ಡೆ ಮನವಿ ಮಾಡಿದ್ದರು. ಆರೋಪಿ ಅನಿಲ್ ರೆಡ್ಡಿ ನಾಪತ್ತೆಯಾಗಿದ್ದಾರೆ.

ಸಂಯುಕ್ತಾ ಹೆಗ್ಡೆ ಮತ್ತು ಸ್ನೇಹಿತೆಯ ವಿರುದ್ಧದ ನೈತಿಕ ಪೊಲೀಸ್ ಗಿರಿ ತೀವ್ರ ವಿವಾದ ಸೃಷ್ಟಿಸಿತ್ತು. ಆರಂಭದಲ್ಲಿ ಅದನ್ನು ಸಮರ್ಥಿಸಿಕೊಂಡಿದ್ದ ಕವಿತಾ ರೆಡ್ಡಿ, ಬಳಿಕ ಸಂಯುಕ್ತಾ ಹೆಗ್ಡೆ ಬಳಿ ಬಹಿರಂಗ ಕ್ಷಮೆ ಕೋರಿದ್ದರು. ಇಬ್ಬರ ನಡುವೆ ರಾಜಿ ಸಂಧಾನ ಮಾಡಲಾಗಿತ್ತು. ಆದರೆ ರಾಜಿಗೆ ತಮ್ಮ ಒಪ್ಪಿಗೆ ಇಲ್ಲ. ಒತ್ತಾಯಪೂರ್ವಕವಾಗಿ ಸಹಿ ಹಾಕುತ್ತಿದ್ದೇನೆ ಎಂದು ಸಂಯುಕ್ತಾ ಹೆಗ್ಡೆ ಹೇಳಿದ್ದರು. ಹೀಗಾಗಿ ಕವಿತಾ ರೆಡ್ಡಿ ಅವರನ್ನು ಬಂಧಿಸಲಾಗಿದೆ.
ಕವಿತಾ ರೆಡ್ಡಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 264 B, 323, 224, 504, 509, 506ರ ಅಡಿ ಎಫ್‌ಐಆರ್ ದಾಖಲು ಮಾಡಿದ್ದರು.












Click it and Unblock the Notifications