ಮೈತ್ರಿ ಮುಂದುವರಿಕೆ, ಕಾಂಗ್ರೆಸ್ ಗೆ ಮೇಯರ್, ಜೆಡಿಎಸ್ ಗೆ ಉಪಮೇಯರ್
ಬೆಂಗಳೂರು, ಸೆಪ್ಟೆಂಬರ್ 23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರಿಯಲಿದೆ.
ತೀವ್ರ ಕುತೂಹಲ ಮೂಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಕೊನೆ ಹಂತಕ್ಕೆ ಬಂದು ತಲುಪಿದ್ದು, ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
'ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಮೇಯರ್ ಕಾಂಗ್ರೆಸ್‌ಗೆ ಹಾಗೂ ಉಪಮೇಯರ್ ಜೆಡಿಎಸ್ ಗೆ ಎಂಬುದು ತೀರ್ಮಾನವಾಗಿದೆ ಎಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಜೆಡಿಎಸ್ ನವರು ಕೇಳಿದ್ದಾರೆ. ಮೇಯರ್ ಸ್ಥಾನಕ್ಕೆ ನಮ್ಮ ಪಕ್ಷದಲ್ಲಿ ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ.
ಯಾರನ್ನು ಆಯ್ಕೆ ಮಾಡಬೇಕು ಹಾಗೂ ಜೆಡಿಎಸ್ ನವರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮಗೊಳಿಸಲಿದ್ದೇವೆ' ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಮೇಯರ್ ಪಟ್ಟಕ್ಕೆ ಪೈಪೋಟಿ
ಕಾಂಗ್ರೆಸ್ ನಲ್ಲಿ ಮೇಯರ್ ಪಟ್ಟಕ್ಕಾಗಿ ಪೈಪೋಟಿ ಆರಂಭವಾಗಿದೆ. ದೇವರಜೀವನಹಳ್ಳಿ ವಾರ್ಡ್‌ನ ಆರ್ ಸಂಪತ್ ಹಾಗೂ ಸುಭಾಷ್ ನಗರ ವಾರ್ಡ್‌ನ ಎಲ್.ಗೋವಿಂದರಾಜು ನಡುವೆ ಪೈಪೋಟಿ ಇದೆ. ಎಚ್.ಬಿ.ಆರ್.ವಾರ್ಡ್‌ನ ಪಿ.ಆನಂದ್, ಬೇಗೂರು ವಾರ್ಡ್‌ನ ಎಂ.ಅಂಜಿನಪ್ಪ, ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿನಗರ ವಾರ್ಡ್‌ನ ಎಂ.ವೇಲು ನಾಯ್ಕರ್ ಮೇಯರ್ ಪಟ್ಟದ ಆಕಾಂಕ್ಷಿಗಳಾಗಿದ್ದಾರೆ.

ಮೇಯರ್ ಹುದ್ದೆಗೇರಲು ಮ್ಯಾಜಿಕ್ ಸಂಖ್ಯೆ
ಮೇಯರ್ ಹುದ್ದೆಗೇರಲು ಮ್ಯಾಜಿಕ್ ಸಂಖ್ಯೆ 134. ಬಿಜೆಪಿ 126 ಮತಗಳನ್ನು ಹೊಂದಿದೆ. ಕಾಂಗ್ರೆಸ್ 116, ಜೆಡಿಎಸ್ 24 ಮತಗಳನ್ನು ಹೊಂದಿದೆ. ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಜೆಡಿಎಸ್
ಮೇಯರ್ ಸ್ಥಾನವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿತ್ತು. ಸಚಿವರಾದ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಬೇಕೆಂದ ಜೆಡಿಎಸ್
ಮೊದಲು ಮೇಯರ್ ಸ್ಥಾನಕ್ಕೆ ಬಿಗಿ ಪಟ್ಟು ಹಿಡಿದಿದ್ದ ಜೆಡಿಎಸ್ ರಾಮಲಿಂಗಾರೆಡ್ಡಿ ಮಾತುಕತೆ ಬಳಿಕ ಕೊಂಚ ಸಡಿಲಿಸಿದೆ. ಆದರೆ, ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಜೆಡಿಎಸ್ ನವರು ಕೇಳಿದ್ದಾರೆ ಎಂದು ಸ್ವತಃ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications