ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಸ್

|
Google Oneindia Kannada News

ಬೆಂಗಳೂರು, ಆ.28 : ಬಿಬಿಎಂಪಿ ಚುನಾವಣೆ ಫಲಿತಾಂಶ ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟು ಹಾಕಿದೆ. ಮೇಯರ್ ಪಟ್ಟವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲಿವೆ. ಗುರುವಾರ ರಾತ್ರಿ ಉಭಯ ಪಕ್ಷಗಳ ನಾಯಕರು ಈ ಕುರಿತು ಮಾತುಕತೆ ನಡೆಸಿ ದೋಸ್ತಿ ರಾಜಕೀಯಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದು ಮೈತ್ರಿಕೂಟ ಸಿದ್ಧವಾದರೆ ಮೇಯರ್ ಸ್ಥಾನ ಕಾಂಗ್ರೆಸ್‌ಗೆ, ಉಪ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಲಿದೆ. ದೋಸ್ತಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ಆರಂಭವಾಗಿದೆ. ದೋಸ್ತಿ ರಾಜಕೀಯದ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ..... [ಗುರುವಾರ ರಾತ್ರೋರಾತ್ರಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ]

parameshwar

ಸಮಯ 6 ಗಂಟೆ : 'ಬಿಜೆಪಿ ದುರಾಡಳಿತ ಪುನರಾವರ್ತನೆ ಯಾಗಬಾರದು ಎಂಬ ಕಾರಣಕ್ಕೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಆದರೆ, ಈ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕಾಂಗ್ರೆಸ್‌ನಿಂದ ಅಧಿಕೃತವಾದ ಪ್ರಸ್ತಾವನೆಯೂ ಬಂದಿಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. [ಮೈತ್ರಿ ಮಾತುಕತೆ : ಯಾರು, ಏನು ಹೇಳಿದರು?]

ಸಮಯ 5.10 : 'ಹಿಂಬಾಗಿಲ ಮೂಲಕ ಕಾಂಗ್ರೆಸ್, ಜೆಡಿಎಸ್ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ತಂತ್ರ ಮಾಡುತ್ತಿವೆ. ದೇವೇಗೌಡರನ್ನು ಬೈಯುವ ಸಿದ್ದರಾಮಯ್ಯ ಅವರು ಜೆಡಿಎಸ್‌ನೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಚಾಪೆ, ರಂಗೋಲಿ ರಾಜಕಾರಣ ಮಾಡಿದರೆ ಇದು ಅವರ ಕೊನೆಯ ರಾಜಕಾರಣವಾಗಲಿದೆ' ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಸಮಯ 4.53 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಸಿ.ಎಂ.ಇಬ್ರಾಹಿಂ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಭೆ ಮುಕ್ತಾಯಗೊಂಡಿದೆ. ಸಿದ್ದರಾಮಯ್ಯ ಅವರು ದೋಸ್ತಿ ಬಗ್ಗೆ ಹೈಕಮಾಂಡ್ ಒಪ್ಪಿಗೆ ಕೇಳಿದ್ದಾರೆ. [ಬಿಜೆಪಿಯಲ್ಲಿ ಮೇಯರ್ ಅಭ್ಯರ್ಥಿಗಳಾರು?]

ಸಮಯ 4.44 : ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಹೊಯ್ಸಳ ನಗರ ವಾರ್ಡ್‌ನ ಆನಂದ ಕುಮಾರ್ ಅವರು 6, 439 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇದೇ ವಿಧಾನಸಭಾ ಕ್ಷೇತ್ರದ ಕೋನೇನ ಅಗ್ರಹಾರ ವಾರ್ಡ್‌ನ ಎಂ.ಚಂದ್ರಪ್ಪ ರೆಡ್ಡಿ ಅವರು 4,893 ಮತಗಳನ್ನು ಪಡೆದು ಜಯಗಳಿಸಿದ್ದಾರೆ. [ಸಂಪುಟ ವಿಸ್ತರಣೆ ಬಿಸಿಯಲ್ಲಿದ್ದ ಸಿದ್ದುಜೀಗೆ ಬಿಬಿಎಂಪಿ ನೆನಪಿಲ್ಲ!]

ಸಮಯ 4.39 : ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿ ವಾರ್ಡ್‌ನ ಎನ್.ರಮೇಶ್ ಅವರು 6,707 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ಧಾಪುರ ವಾರ್ಡ್‌ನ ಮಜಾಹಿದ್ ಪಾಷ ಅವರು 5,536 ಮತಗಳನ್ನು ಪಡೆದು ಜಯಗಳಿಸಿದ್ದಾರೆ. [ಬಿಬಿಎಂಪಿ: ಬೆಂಗಳೂರು ದಕ್ಷಿಣ ಜಿಲ್ಲೆ ಫಲಿತಾಂಶ]

ಸಮಯ 4.30 : ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಸಗಾಯಪುರ ವಾರ್ಡ್‌ನ ವಿ.ಏಳುಮಲೈ ಅವರು 5,345 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ವಾರ್ಡ್‌ನ ಲಕ್ಷ್ಮೀನಾರಾಯಣ್ ಅವರು 5,994 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಸಮಯ 4.15 : ಪಕ್ಷೇತರ ಸದಸ್ಯರು : ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಹಲಸೂರು ವಾರ್ಡ್‌ನ ಮಮತಾ ಶರವಣ ಅವರು 6, 782 ಮತಗಳನ್ನು ಪಡೆದು ಜಯಗಳಿಸಿದ್ದು, ಇಂದು ಬಿಜೆಪಿ ಸೇರಿದ್ದಾರೆ.

ಸಮಯ 4 ಗಂಟೆ : 'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತುಕತೆಯ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿವೆ. ಕುಮಾರಸ್ವಾಮಿ ಅವರಿಗೆ ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದೇನೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ ಹೇಳಿದ್ದಾರೆ.

ಸಮಯ 3.40 : ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಶಾಸಕರಾದ ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ, ಜಮೀರ್ ಅಹಮದ್ ಖಾನ್, ಬಿಬಿಎಂಪಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಯ 3.10 ಗಂಟೆ : ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಸಿದ್ದರಾಮಯ್ಯ ಅವರು ಜಮೀರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ದೇವೇಗೌಡರ ನಿವಾಸದಿಂದ ಜಮೀರ್ ಅಹಮದ್ ಖಾನ್ ವಿಧಾನಸೌಧಕ್ಕೆ ತೆರಳಿದ್ದರು.

ಸಮಯ 2.30 : ಬಿಬಿಎಂಪಿಯಲ್ಲಿ ಮೇಯರ್ ಪಟ್ಟ ಪಡೆಯಲು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲು ಶನಿವಾರ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಬೆಂಗಳೂರಿನ ಶಾಸಕರು, 76 ಬಿಬಿಎಂಪಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಸಮಯ 2.15 : 'ಅಪವಿತ್ರ ಮೈತ್ರಿಗೆ ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ. ಬೆಂಗಳೂರಿನವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಜನರ ತೀರ್ಪನ್ನು ಧಿಕ್ಕರಿಸಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಜನಾದೇಶಕ್ಕೆ ತಲೆ ಬಾಗುವೆ ಎಂದು ಹೇಳಿದ ಮುಖ್ಯಮಂತ್ರಿಗಳು ಈಗ ಏನು ಹೇಳುತ್ತಾರೆ?' ಎಂದು ಮಾಜಿ ಸಚಿವ ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.

ಸಮಯ 1.53 : ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪಾಪುರ ಅಗ್ರಹಾರ ವಾರ್ಡ್‌ನ ಎಂ.ಗಾಯತ್ರಿ. ಮಾರತ್ ಹಳ್ಳಿ ವಾರ್ಡ್‌ನ ರಮೇಶ್‌, ದೊಮ್ಮಲೂರು ವಾರ್ಡ್‌ನ ಲಕ್ಷ್ಮೀ ನಾರಾಯಣ ಅವರನ್ನು ಬಿಜೆಪಿಯತ್ತ ಸೆಳೆಯಲು ಪ್ರಕ್ರಿಯೆ ಆರಂಭಗೊಂಡಿದೆ.

ಸಮಯ 1.15 : ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೂಡಿದ್ದು ಮಾಜಿ ಸಚಿವರಾದ ವಿ.ಸೋಮಣ್ಣ ಮತ್ತು ಅರವಿಂದ ಲಿಂಬಾವಳಿ ಅಖಾಡಕ್ಕೆ ಇಳಿದಿದ್ದಾರೆ. ಮೂವರು ಪಕ್ಷೇತರರನ್ನು ಸೆಳೆಯಲು ಪ್ರಯತ್ನ ಆರಂಭವಾಗಿದೆ.

ಸಮಯ 12.47 : ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಜಮೀರ್ ಅಹಮದ್ ಅವರು, 'ಬೆಂಗಳೂರನ್ನು ಕೋಮುವಾದಿಗಳ ಕೈಗೆ ಕೊಡುವುದು ಬೇಡ ಎಂದು ವರಿಷ್ಠರು ಅಭಿಪ್ರಾಯಪಟ್ಟಿದ್ದಾರೆ' ಎಂದು ಹೇಳಿದರು.

ಸಮಯ 12.46 : 'ಬಿಬಿಎಂಪಿಯಲ್ಲಿ ದೋಸ್ತಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್‌ನಿಂದ ಪ್ರಸ್ತಾವನೆ ಬಂದಿದೆ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಸಂಜೆ 6 ಗಂಟೆಗೆ ಪಕ್ಷದ ನಾಯಕರ ಮತ್ತು ನೂತನ ಸದಸ್ಯರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.

ಸಮಯ 12.30 : ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸುರೇಶ್ ಕುಮಾರ್ ಫೇಸ್‌ ಬುಕ್‌ನಲ್ಲಿ ಬರೆದಿದ್ದಾರೆ.

ಬಿಜೆಪಿಗೆ ಬಿಬಿಎಂಪಿ ಆಡಳಿತ ಚುಕ್ಕಾಣಿಯಂತೆ ತಪ್ಪಿಸಲು ಸಿದ್ದರಾಮಯ್ಯನವರು ಮಾಡುತ್ತಿರುವ ಶತಗತಾಯ ಪ್ರಯತ್ನ "ಕಾಂಗ್ರೆಸ್ ಮುಕ್ತ" ಕರ್ನಾಟಕಕ್ಕೆ ಬಹು ಅಮೂಲ್ಯ ಮುನ್ನುಡಿ.

Posted by Suresh Kumar S onFriday, August 28, 2015

ಸಮಯ 12.09 : ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ 76, ಬಿಜೆಪಿ 100 ಮತ್ತು ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿದೆ. 8 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹಮತ ಪಡೆಯಲು 3 ಸ್ಥಾನಗಳು ಬೇಕು. ಹಲಸೂರು ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಮಮತಾ ಸರವಣ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು.

ಸಮಯ 12 ಗಂಟೆ : 'ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಮೈತ್ರಿ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಮಯ 11.45 : ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಕಾಂಗ್ರೆಸ್ ಹೈಕಮಾಂಡ್‌ ಇನ್ನೂ ಒಪ್ಪಿಗೆ ನೀಡಿಲ್ಲ. ಸಂಜೆ 4 ಗಂಟೆ ಬಳಿಕ ಹೈಕಮಾಂಡ್ ನಾಯಕರು ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

bbmp

ಸಮಯ 11.30 : 'ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದ ಪಕ್ಷೇತರರು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದವರು. ಮುಂದೇನಾಗುತ್ತದೋ ನೋಡೋಣ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ವಾಪಸ್ ಆದ ಬಳಿಕ ಸಚಿವರು ಈ ಕುರಿತು ಹೇಳಿಕೆ ನೀಡಿದ್ದಾರೆ.

ಸಮಯ 11.15 : 'ಬಿಜೆಪಿಗೆ ಬಿಬಿಎಂಪಿ ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. ಆದರೂ ಅವರು ಸರ್ವಾಧಿಕಾರಿಗಳಂತೆ ವರ್ತನೆ ಮಾಡುತ್ತಿದ್ದಾರೆ. ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಪ್ರಜಾತಂತ್ರಕ್ಕೆವಾದದ್ದಲ್ಲ. ನಾವು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿಲ್ಲ' ಎಂದು ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತಾ ಹೇಳಿದ್ದಾರೆ.

ಸಮಯ 11 ಗಂಟೆ : ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಭೇಟಿ ನೀಡಿದ್ದಾರೆ. ಗೌಡರ ನಿವಾಸದಲ್ಲಿರುವ ವೈ.ಎಸ್.ವಿ.ದತ್ತಾ ಮತ್ತು ಇತರ ನಾಯಕರು.

ಸಮಯ 10.55 : ಕಾಂಗ್ರೆಸ್, ಜೆಡಿಎಸ್‌ನ ಬಿಬಿಎಂಪಿ ಸದಸ್ಯರು ಮತ್ತು ಪಕ್ಷೇತರ ಅಭ್ಯರ್ಥಿಗಳು ಹಲಸೂರಿನ ಬಳಿ ಖಾಸಗಿ ಹೋಟೆಲ್‌ ಸಭೆ ಸೇರಿದ್ದು, ಸಮಾಲೋಚನೆ ನಡೆಸುತ್ತಿದ್ದಾರೆ.

ಸಮಯ 10.50 : 'ಕಾಂಗ್ರೆಸ್ ಬಿಬಿಎಂಪಿ ಚುನಾವಣೆ ಮುಂದೂಡಲು ಪ್ರಯತ್ನಿಸಿತ್ತು. ಈಗ ಹೊಸ ನಾಟಕ ಆರಂಭಿಸಿದೆ. ಕಾಂಗ್ರೆಸ್ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ' ಎಂದು ಆರ್.ಅಶೋಕ್ ಹೇಳಿದ್ದಾರೆ. ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ.

ಸಮಯ 10.30 : ಪಕ್ಷೇತರ ಅಭ್ಯರ್ಥಿ ಮಮತಾ ಸರವಣ ಬಿಜೆಪಿಗೆ ಸೇರ್ಪಡೆ. ಹಲಸೂರು ವಾರ್ಡ್‌ನಿಂದ ಮಮತಾ ಸರವಣ ಅವರು 6782 ಮತಗಳನ್ನು ಪಡೆದು ಬಿಬಿಎಂಪಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಸಮಯ 10.08 : ಪಕ್ಷೇತರರು ಬೆಂಬಲ ನೀಡಿದರೆ ಅವರಿಗೆ ಸ್ಥಾಯಿ ಸಮಿತಿಯಲ್ಲಿ ಸ್ಥಾನ ನೀಡುವ ಭರವಸೆ

ಸಮಯ 10 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿಗೆ ಆಗಮಿಸಿದ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ

ಸಮಯ 9.51 : ವೈ.ಎಸ್.ವಿ.ದತ್ತಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10.30ಕ್ಕೆ ಮತ್ತೊಮ್ಮೆ ಸಭೆ ನಡೆಸಲಿದ್ದಾರೆ. ನಂತರ ಸಿ.ಎಂ.ಇಬ್ರಾಹಿಂ ಮತ್ತು ಎಚ್.ಡಿ.ದೇವೇಗೌಡ ಅವರು ಸಭೆ ನಡೆಸಲಿದ್ದಾರೆ.

ಸಮಯ 9.40 : ಬಿಜೆಪಿಗೆ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗೆದ್ದಿದೆ. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿ 24 ಮತಗಳಿವೆ. ಒಟ್ಟು 124 ಮತಗಳಾಗುತ್ತವೆ. ಕಾಂಗ್ರೆಸ್-ಜೆಡಿಎಸ್ ಸೇರಿದರೆ 130 ಮತಗಳಾಗುತ್ತವೆ.

ಸಮಯ 9.33 : ಕಾಂಗ್ರೆಸ್‌ನ 76 ಸದಸ್ಯರು, ಶಾಸಕ, ಸಂಸದ, ಪರಿಷತ್ ಸದಸ್ಯರು ಸೇರಿ 25 ಮತಗಳಿವೆ. ಒಟ್ಟು 101 ಸ್ಥಾನವಾಗುತ್ತದೆ. ಜೆಡಿಎಸ್‌ನ 14 ಸದಸ್ಯರು ಮತ್ತು 7 ಶಾಸಕರು, ವಿಧಾನಪರಿಷತ್ ಸದಸ್ಯರ ಸೇರಿ 21 ಮತವಿದೆ. 101 + 21 ಅಂದರೆ ಒಟ್ಟು 122 ಸದಸ್ಯರಾಗುತ್ತಾರೆ. 8 ಪಕ್ಷೇತರರು ಬೆಂಬಲ ನೀಡಿದರೆ 130 ಸದಸ್ಯ ಬಲವಾಗಲಿದ್ದು, ಮೇಯರ್ ಆಯ್ಕೆಗೆ 128 ಮತಗಳು ಸಾಕು.

ಸಮಯ 9.30 : ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಬಿಬಿಎಂಪಿಯ 198 ಸದಸ್ಯರು. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಒಟ್ಟು 250 ಸದಸ್ಯರು ಮತದಾನ ಮಾಡಲಿದ್ದಾರೆ.

ಸಮಯ 9.15 : 'ಜೆಡಿಎಸ್ ಮೈತ್ರಿ ಪ್ರಸ್ತಾಪವನ್ನು ಮುಂದಿಟ್ಟಿಲ್ಲ. ಕಾಂಗ್ರೆಸ್ ಪ್ರಸ್ತಾಪಿಸಿದರೆ ಬೆಂಬಲ ನೀಡಲು ನಾವು ಸಿದ್ಧ ನಮ್ಮದು ಜಾತ್ಯಾತೀತ ಪಕ್ಷ' ಎಂದು ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತಾ ಹೇಳಿದ್ದಾರೆ.

ಸಮಯ 9 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಜೆಡಿಎಸ್ ನಾಯಕ ವೈ.ಎಸ್‌.ವಿ.ದತ್ತಾ

English summary
Karnataka Congress may join hands with JDS for Bruhat Bengaluru Mahanagara Palike (BBMP) Mayor and Deputy mayor post. Here is latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X