Breaking: ಸಚಿವ ಜಿ.ಪರಮೇಶ್ವರಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್!
ಬೆಂಗಳೂರು ಫೆಬ್ರವರಿ 18: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ವಿಚಾರ ಮುನ್ನಲೆಯಲ್ಲೇ ಇದೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತುಗಳು ಕೇಳಿ ಬಂದ ಬೆನ್ನಲ್ಲೆ ರಾಜ್ಯ ಗೃಹ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ. ದೆಹಲಿಗೆ ಬಂದು ಭೇಟಿ ಮಾಡುವಂತೆ ಕಾಂಗ್ರೆಸ್ ವರಿಷ್ಠರು ಡಾ.ಜಿ.ಪರಮೇಶ್ವರ ಅವರಿಗೆ ಕರೆ ನೀಡಿದ್ದಾರೆ. ಈ ಕರೆ ಮೇರೆಗೆ ಸಚಿವರು ಮಂಗಳವಾರ ಬೆಳಗ್ಗೆ ವಿಮಾನ ಮೂಲಕ ದೆಹಲಿಗೆ ತೆರಳಲಿದ್ದಾರೆ. ಎಲ್ಲರ ಚಿತ್ತ ಇದೀಗ ದೆಹಲಿ ಅಂಗಳದತ್ತ ನೆಟ್ಟಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ದಿಂದ ವಿಮಾನ ಮೂಲಕ ದೆಹಲಿಗೆ ಬೆಳಗ್ಗೆ 10.20ಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1.15ರ ಹೊತ್ತಿಗೆ ಅವರು ದೆಹಲಿ ತಲುಪಲಿದ್ದಾರೆ. ಅಲ್ಲಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿಗಳು ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಬಣ ರಾಜಕೀಯ ಜೋರಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಮಾತನಾಡದಂತೆ ಎಚ್ಚರಿಕೆ ನೀಡಿದ್ದರೂ ಸಹ ಸಿಎಂ ಹೆಸರು ಬಳಕೆ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಬೇಕು ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷದ ಬಲಾವಣೆಗಾಗಿ ಲಾಭಿ ನಡೆಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಸಿಎಂ ಕೆ.ಎನ್ ರಾಜಣ್ಣ, ಎಂಬಿ ಪಾಟೀಲ್ ಮುಂತಾದವರು ಮಾತನಾಡಿದ್ದರು. ಸಿಎಂ ಹೆಸರು ಬಳಸಿದವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ವಿಚಾರಗಳು ಬೂದಿ ಮುಚ್ಚಿದ ಕೆಂಡದಂತಿವೆ.
ಇತ್ತೀಚೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿಗೆ ಬಂದು ನಿರಂತರ ಸಭೆ ನಡೆಸಿದ್ದರು. ಒಂದಷ್ಟು ವಿಷಯಗಳನ್ನು ಚರ್ಚಿಸಿ, ಪಕ್ಷದ ನಾಯಕರಿಗೆ, ಹಿರಿಯರಿಗೆ, ಸಚಿವರಿಗೆ ಸೂಕ್ತ ಸಲಹೆ ನೀಡಿದ್ದರು. ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕಿದ್ದರು. ಅದಾದ ಬಳಿಕವು ಬಣ ರಾಜಕೀಯ ಮುಂದುವರಿದಿತ್ತು. ಈ ಮಧ್ಯೆ ದಲಿತ ಸಮಾವೇಶ ಕುರಿತು ಪೂರ್ವಭಾವಿ ಸಭೆ ಎಂದು ಜಿ.ಪರಮೇಶ್ವರ ಅವರು ಶಾಸಕರು, ಸಚಿವರ ಸಭೆ ಆಯೋಜಿಸಿದ್ದರು. ಆದರೆ ಅದನ್ನು ಮೊಟಕುಗೊಳಿಸಲಾಯಿತು.
ಇದೀಗ ಗೃಹ ಸಚಿವ ಜಿ.ಪರಮೇಶ್ವರ ಅವರೊಬ್ಬರನೇ ದೆಹಲಿಗೆ ಆಹ್ವಾನಿಸಿರುವುದು ರಾಜ್ಯದ ಹಲವು ನಾಯಕರ ಕುತೂಹಲಗಳಿಗೆ ಕಾರಣವಾಗಿದೆ.












Click it and Unblock the Notifications