ಕಾಂಗ್ರೆಸ್ ಮತ್ತೊಬ್ಬ ಸಚಿವರಿಂದ ಬುಧವಾರ ಡಿನ್ನರ್ ಪಾರ್ಟಿ: ಡಿಕೆ ಶಿವಕುಮಾರ್ ಭಾರೀ ಬೇಸರ!
ಬೆಂಗಳೂರು, ಜನವರಿ 07: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಔತಣ ಕೂಟಗಳು ಮೇಲಿಂದ ಮೇಲೆ ನಡೆಯುವ ಮುನ್ಸೂಚನೆ ಕಾಣುತ್ತಿದೆ. ಮೊನ್ನೆಯಷ್ಟೆ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದಿದ್ದ ಸಭೆ ಬೆನ್ನಲ್ಲೆ, ಮತ್ತೊಂದು ಡಿನ್ನರ್ ಮೀಟಿಂಗ್ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಇದನ್ನು ಗೃಹ ಸಚಿವ ಜಿ.ಪರಮೇಶ್ವರ ಅವರು ಆಯೋಜಿಸಿದ್ದಾರೆ. ಹಾಗಾದರೆ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದು ಯಾಕೆ?, ಇಲ್ಲಿದೆ ಮಾಹಿತಿ.
ಸಚಿವ ಡಾ.ಜಿ.ಪರಮೇಶ್ವರ ಅವರು ಬುಧವಾರ ಜನವರಿ 8ರಂದು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಬಹುತೇಕ ಶಾಸಕರು, ಸಚಿವರು ಪಾಲ್ಗೊಳ್ಳಲಿದ್ದಾರೆ. ಅದರಲ್ಲೂ ಎಸ್‌ಸಿ, ಎಸ್‌ಟಿ ಶಾಸಕರು, ಸಚಿವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎನ್ನಲಾಗಿದೆ.

ಒಂದು ಕಡೆ ಮುಖ್ಯಮಂತ್ರಿ ಬದಲಾವಣೆ ಗಾಳಿ ಬೀಸಿದರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷಗಿರಿಗೆ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರು ಡಿಕೆ.ಸುರೇಶ್ ಅವರನ್ನು ಕೂರಿಸಲು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣದವರಿಗೆ ಆ ಸ್ಥಾನ ನೀಡಲು ಲಾಭಿ ನಡೆದಿದೆ. ಅದಕ್ಕಾಗಿ ರಾತ್ರಿ ಬೆಳಗಾವಿ ಸಚಿವರ ಮನೆಯಲ್ಲಿ ಸಭೆ ಸೇರಲಾಗಿತ್ತು ಅಂತಲೂ ಮಾತುಗಳು ಕೇಳಿ ಬಂದಿವೆ.
ಸಭೆ ಬಗ್ಗೆ ಸಚಿವ ಜಿ.ಪರಮೇಶ್ವರ ಹೇಳಿದ್ದೇನು?
ಶಾಸಕರು, ಸಚಿವರು ಊಟಕ್ಕೆ ಸೇರಿದರೆ ತಪ್ಪೇನು ಸಿಎಂ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಅವರು ಪ್ರಶ್ನಿಸಿದ್ದರು. ಇದೀಗ ಜಿ. ಪರಮೇಶ್ವರ ಅವರು ಸಹ ಔತಣಕೂಟ ಏರ್ಪಡಿಸಿರುವುದು ಎಸ್‌ಸಿ, ಎಸ್‌ಟಿ ಸಮಾವೇಶ ನಡೆಸುವ ಉದ್ದೇಶದಿಂದ ಎಂದು ಪ್ರತಿಕ್ರಿಯಿಸಿದ್ದಾರೆ. ಇದೊಂದು ಪೂರ್ವ ಭಾವಿ ಸಭೆಯಾಗಿದ್ದು, ಈ ವೇಳೆ ಸುಮಾರು 2 ಗಂಟೆಗಳ ಕಾಲ ಸಭೆ ನಡೆಸಲಿದ್ದೇವೆ. ಅದೇ ವೇಳೆ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸಭೆ ಬಗ್ಗೆ ಡಿಕೆ ಶಿವಕುಮಾರ್ ಬೇಸರ..!
ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವಾಗ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 35 ಶಾಸಕರು ಪಾಲ್ಗೊಂಡು ಸಭೆ ನಡೆಸಿದ್ದಾರೆ. ನಾನು ಇಲ್ಲದಾಗ ಹೀಗೆ ಸಭೆ ಸೇರುವ ಅಗತ್ಯವೇನಿತ್ತು? ಇಸು ಸರಿಯಲ್ಲ ಎಂದು ಅವರು ವರಿಷ್ಠ ಕೆ.ಸಿ.ವೇಣುಗೋಪಾಲ ಅವರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಅವರು ರಾಜ್ಯ ವಿದ್ಯಮಾನಗಳ ಕುರಿತು ಚರ್ಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸಮಯ ಕೇಳಿದ್ದಾರೆ. ಖರ್ಗೆಯವರು ಸಮಯ ಕೊಟ್ಟಲ್ಲಿ ಕೆಪಿಸಿಸ ಅಧ್ಯಕ್ಷ ಸ್ಥಾನ, ಗೌಪ್ಯ ಸಭೆಗಳು ಹಾಗೂ ಇತರ ಮಾಹಿತಿಗಳ ಬಗ್ಗೆ ಚರ್ಚಿಸಿ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ನಾಳೆ ಸಂಜೆ ಹೊತ್ತಿಗೆ ಮರಳಿದರೆ ಅವರು ಸಚಿವ ಜಿ. ಪರಮೇಶ್ವರ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.












Click it and Unblock the Notifications