Shiggaon Congress Ticket: ಸಿಎಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅದಲು-ಬದಲು ಆಟ!
ಹಾವೇರಿ: ಅಭ್ಯರ್ಥಿ ಘೋಷಣೆ ಮಾಡಿ ನಂತರ ಬದಲಾವಣೆ ಮಾಡುವ ಸಂಪ್ರದಾಯವನ್ನು ಕಾಂಗ್ರೆಸ್ ನಾಯಕರು ಕೂಡ ರೂಢಿಸಿಕೊಂಡಂತೆ ಕಾಣುತ್ತಿದೆ. ಇಡೀ ರಾಜ್ಯದ ಗಮನ ಸೆಳೆದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಹಾವೇರಿಯ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬೇರೆಯವರ ಪಾಲಾಗಿದೆ. ನಿನ್ನೆ ಘೋಷಿಸಿದ್ದ ಪಟ್ಟಿಯನ್ನೇ ಬದಲಾಯಿಸಿದೆ 'ಕೈ' ಪಡೆ.
4ನೇ ಪಟ್ಟಿಯಲ್ಲಿ ಮೊಹಮ್ಮದ್ ಯೂಸುಫ್‌ಗೆ ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ನೀಡಿತ್ತು ಕಾಂಗ್ರೆಸ್. ಆದರೆ ಇಂದು ರಿಲೀಸ್ ಮಾಡಿರುವ 5ನೇ ಪಟ್ಟಿಯಲ್ಲಿ ಹೆಸರು ಬದಲಾಯಿಸಿ, ಯಾಸಿರ್ ಅಹ್ಮದ್ ಖಾನ್ ಪಠಾಣ್‌ಗೆ ಟಿಕೆಟ್ ನೀಡಿರುವುದಾಗಿ ಘೋಷಿಸಿದೆ ಕಾಂಗ್ರೆಸ್ ಹೈಕಮಾಂಡ್. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಿದ ದಿನವೇ ಕಾಂಗ್ರೆಸ್ ಇಂತಹ ಅಚ್ಚರಿಯ ಆಯ್ಕೆ ಪ್ರಕಟಿಸಿದ್ದು, ಶಿಗ್ಗಾಂವಿ ಗೆಲುವಿಗೆ ಕಾಂಗ್ರೆಸ್ ರಣತಂತ್ರವೇನು ಎಂಬ ಪ್ರಶ್ನೆ ಮೂಡಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಬಾರಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಇದೇ ನಿಟ್ಟಿನಲ್ಲಿ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತಿದೆ. ಇದೀಗ ಕಾಂಗ್ರೆಸ್ ತನ್ನ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೆ ಕುತೂಹಲ ಕೆರಳಿಸಿದ್ದರು ಕಾಂಗ್ರೆಸ್ ನಾಯಕರು. ಆದರೆ ನಿನ್ನೆ 4ನೇ ಪಟ್ಟಿಯಲ್ಲಿ ಘೋಷಣೆ ಮಾಡಿದ್ದ ಅಭ್ಯರ್ಥಿಯನ್ನೇ ಬದಲಾಯಿಸಿದ್ದಾರೆ 'ಕೈ' ಮುಖಂಡರು.
ಕಾಂಗ್ರೆಸ್ ಲೆಕ್ಕಾಚಾರ ಬದಲಾಯ್ತಾ?
2 ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದ ಕಾಂಗ್ರೆಸ್, ಶಿಗ್ಗಾಂವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸುವ ಯೋಜಿಸಿತ್ತು. ಆ ಪ್ರಕಾರ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಬಲ ಸವಾಲು ಹಾಕಬಲ್ಲ ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಹುಡುಕಾಟ ನಡೆದಿತ್ತು. ಈ ಸಂದರ್ಭ ವಿನಯ್ ಕುಲಕರ್ಣಿ ಹೆಸರು ಬಹುತೇಕ ಫೈನಲ್ ಆಗಿತ್ತು ಎನ್ನುಷ್ಟರಲ್ಲೇ ಅಭ್ಯರ್ಥಿ ಆಯ್ಕೆ ಬದಲಾಗಿ ಮೊಹಮ್ಮದ್ ಯೂಸುಫ್‌ಗೆ ಟಿಕೆಟ್ ಸಿಕ್ಕಿತ್ತು. ಆದರೆ ಈಗ ಮೊಹಮ್ಮದ್ ಯೂಸುಫ್ ಹೆಸರು ಕೂಡ ಮಾಯವಾಗಿದೆ.
ಹೇಗಿತ್ತು ಶಿಗ್ಗಾಂವಿ ರಣತಂತ್ರ?
ಶಿಗ್ಗಾಂವಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಲಿಂಗಾಯತರು, ಮುಸ್ಲಿಮರು ಸೇರಿದಂತೆ ಕುರುಬರು ಇದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ನೀಡಬಹುದು ಎಂಬ ಲೆಕ್ಕಾಚಾರ ಶುರುವಾಗಿತ್ತು. ಇದೆಲ್ಲದರ ಜೊತೆಗೆ ಶಿಗ್ಗಾಂವಿಯ ಮಾಜಿ ಕಾಂಗ್ರೆಸ್ ಶಾಸಕ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಗೆ ವಿನಯ್ ಕುಲಕರ್ಣಿಗೆ ಟಿಕೆಟ್ ದೊರೆತರೆ, ಬೆಂಬಲ ನೀಡುವುದಾಗಿ ಅಜ್ಜಂಪೀರ್ ಖಾದ್ರಿ ಭರವಸೆ ನೀಡಿದ ನಂತರ ಕುತೂಹಲ ದುಪ್ಪಟ್ಟಾಗಿತ್ತು.

ಧಾರವಾಡ ಅಭ್ಯರ್ಥಿಯಾಗಿ ಸ್ಪರ್ಧೆ
ಇತ್ತ ವಿನಯ್ ಕುಲಕರ್ಣಿ ಶಿಗ್ಗಾಂವಿ ಅಭ್ಯರ್ಥಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಲೆಕ್ಕಚಾರ ಇದ್ದಾಗಲೇ ಕಾಂಗ್ರೆಸ್ ಬೇರೆಯದ್ದೇ ನಿರ್ಧಾರ ತೆಗೆದುಕೊಂಡಿತ್ತು. ಧಾರವಾಡದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿಗೆ ಟಿಕೆಟ್ ಫೈನಲ್ ಮಾಡಿತ್ತು ಕಾಂಗ್ರೆಸ್. ಅಂತಿಮವಾಗಿ ಮೊಹಮ್ಮದ್ ಯೂಸುಫ್‌ಗೆ ಶಿಗ್ಗಾಂವಿ ಟಿಕೆಟ್ ನಿಡಿದ್ದ ಕಾಂಗ್ರೆಸ್ ಹೆಸರು ಬದಲಿಸಿ ಯಾಸಿರ್ ಅಹ್ಮದ್ ಖಾನ್ ಪಠಾಣ್‌ಗೆ ಟಿಕೆಟ್ ನೀಡಿದೆ.
ಒಟ್ಟಾರೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ವಿಭಿನ್ನ ನಿಲುವನ್ನ ಕಾಂಗ್ರೆಸ್ ತೆಗೆದುಕೊಳ್ಳುತ್ತಿದೆ. ಸಿಎಂ ಕ್ಷೇತ್ರದಲ್ಲಿ ಮೊದಲು ಪ್ರಬಲ ಅಭ್ಯರ್ಥಿ ಹಾಕಲು ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ಆ ಯೋಜನೆಯೇ ಬದಲಾಗಿ ಹೋಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಅಧಿಸೂಚನೆ ಏಪ್ರಿಲ್ 13ರ ಗುರುವಾರ ಪ್ರಕಟವಾಗಿದ್ದು, ಸರ್ಕಾರಿ ರಜೆ ದಿನ ಹೊರತುಪಡಿಸಿ ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಬಹುದು.












Click it and Unblock the Notifications