ಬಡ್ತಿ, ವರ್ಗಾವಣೆಗೆ 500 ಕೋಟಿ ಲಂಚ: ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು
ಬೆಂಗಳೂರು, ಜುಲೈ 11: ಲೋಕೋಪಯೋಗಿ ಇಲಾಖೆಯಲ್ಲಿ ಸೋಮವಾರ ಸಭೆ ನಡೆಸಿ ತರಾತುರಿಯಲ್ಲಿ ಸುಮಾರು 800 ಜನ ಎಂಜಿನಿಯರ್‌ಗಳ ಬಡ್ತಿ ಹಾಗೂ ವರ್ಗಾವಣೆ ಮಾಡಿರುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಇದಕ್ಕಾಗಿ 500 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್. ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಎಚ್ ರೇವಣ್ಣ ಅವರ ಸೂಚನೆಯಂತೆ ಸೋಮವಾರ ಇಲಾಖಾ ಪದೋನ್ನತಿ ಸಮಿತಿ ಸಭೆಯನ್ನು ನಡೆಸಲಾಗಿತ್ತು. ಇದರಲ್ಲಿ 800ಕ್ಕೂ ಹೆಚ್ಚು ಎಂಜಿನಿಯರ್‌ಗಳ ಬಡ್ತಿ ಮತ್ತು ವರ್ಗಾವಣೆಗೆ ಅನುಮತಿ ನೀಡಲಾಗಿತ್ತು. ಈ ವರ್ಗಾವಣೆ ಮತ್ತು ಬಡ್ತಿ ದಂಧೆಗಾಗಿ ರೇವಣ್ಣ ಅವರು 500 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಎಸ್‌ಸಿ ಎಸ್‌ಟಿ ಮತ್ತು ಓಬಿಸಿ ಸಮುದಾಯದ ಎಂಜಿನಿಯರ್‌ಗಳು ವರ್ಗಾವಣೆ ಮಾಡಿಸಿಕೊಳ್ಳಲು ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ ಅವರಿಂದ ಹಣ ಪಡೆದು ಎಂಜಿನಿಯರ್‌ಗಳನ್ನು ಏಕಾಏಕಿ ಮನಬಂದಂತೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ, ಈ ವರ್ಗಾವಣೆಯ ಆದೇಶವನ್ನು ಹಿಂಪಡೆಯಬೇಕು ಎಂದು ಎಸ್. ಲಿಂಗಮೂರ್ತಿ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಲೋಕೋಪಯೋಗಿ ಇಲಾಖೆಯ 34 ಎಇಇ, ಇಬ್ಬರು ಎಸ್‌ಇ, 40 ಇಇ ಮತ್ತು 99 ಮಂದಿ ಜೆಇ/ಎಇಗಳನ್ನು ಕೂಡ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ವರ್ಗಾವಣೆ ಕಡಿತದಲ್ಲಿ ಹಿಂದಿನ ದಿನಾಂಕ ನಮೂದಿಸಿ ಸಹಿ ಹಾಕಲಾಗಿದೆ. ಈ ಮೂಲಕ ಆದೇಶ ಜಾರಿಯಾಗುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications