Bengaluru: ಬಿಎಂಟಿಸಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು
ಬೆಂಗಳೂರು, ಫೆಬ್ರವರಿ 02: ಬಿಎಂಟಿಸಿ ಚಾಲಕರ ನಿರ್ಲಕ್ಷ್ಯದಿಂದ ಸಂಭವಿಸುತ್ತಿದ್ದ ಅವಘಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕೂಡ ಅಂತಹದ್ದೇ ಅನಾಹುತ ನಡೆದಿದೆ. ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಗಾಯಿತ್ರಿ ನಗರದ ದೇವಯ್ಯ ಪಾರ್ಕ್ ಬಳಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕುಸುಮಿತಾ(21) ಅಪಘಾತಕ್ಕೆ ಬಲಿಯಾದ ಯುವತಿ ಎಂದು ಗುರುತಿಸಲಾಗಿದೆ. ಕುಸುಮಿತಾ ಎಂದಿನಂತೆ ಇಂದು ಕೂಡ ಬೆಳಗ್ಗೆ ಕಾಲೇಜಿಗೆ ಹೊರಟಿದ್ದು, ಈ ವೇಳೆ ಏಕಾಏಕಿ ಬಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದು, ಯುವತಿ ಬಸ್‌ನ ಹಿಂದಿನ ಚಕ್ರಕ್ಕೆ ಸಿಲುಕಿದ್ದಾಳೆ.

ಕೂಡಲೇ ಸ್ಥಳದಲ್ಲಿದ್ದವರು ಕುಸುಮಿತಾ ರಕ್ಷಣೆಗೆ ಬಂದಿದ್ದು, ದುರಾದೃಷ್ಟವಶಾತ್ ಬಿಎಂಟಿಸಿ ಬಸ್‌ನ ಚಕ್ರ ಹರಿದು ವಿದ್ಯಾರ್ಥಿನಿ ಕುಸುಮಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಪಘಾತ ಸಂಬಂಧ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಎಂಟಿಸಿ ಬಸ್‌ನಿಂದ ಸಂಭವಿಸುತ್ತಿರುವ ಅಪಘಾತಗಳಿಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡರೂ ಕೂಡ ಅಪಘಾತಗಳ ಸಂಖ್ಯೆ ತಗ್ಗುತ್ತಿಲ್ಲ. ಕಳೆದ ವರ್ಷ 2023ರಲ್ಲಿ ಬಿಎಂಟಿಸಿ ಬಸ್ ಅಪಘಾತದಲ್ಲಿ ಒಟ್ಟು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ರಸ್ತೆ ದಾಟುತ್ತಿದ್ದ ಮಹಿಳೆ ಬಿಎಂಟಿಸಿಗೆ ಬಲಿ
ಬೆಂಗಳೂರು ನಗರದ ಸುಬ್ಬಯ್ಯ ಸರ್ಕಲ್ ಬಳಿ ಇತ್ತೀಚಿಗೆ ಅಪಘಾತ ಸಂಭವಿಸಿದ್ದು, ಪುಷ್ಪ (51) ಎನ್ನುವ ಮಹಿಳೆ ಬಿಎಂಟಿಸಿ ಚಾಲಕನ ಅಜಾಗರುಕತೆಗೆ ಬಲಿಯಾಗಿದ್ದರು.

ಪುಷ್ಪ ನಗರದ ಕಬ್ಬನ್ ಪೇಟೆ ನಿವಾಸಿಯಾಗಿದ್ದು, ಮನೆಯಿಂದ ಬೇಕರಿಗೆ ತೆರಳುತಿದ್ದ ವೇಳೆ ಘಟನೆ ನಡೆದಿತ್ತು. ಮಹಿಳೆ ರಸ್ತೆ ದಾಟುವಾಗ ಎದುರಿಗೆ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಏಕಾಏಕಿ ಡಿಕ್ಕಿಯಾಗಿತ್ತು ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಡಿಸೆಂಬರ್ 28ರಂದು ಸಾವನ್ನಪ್ಪಿದ್ದರು. ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿಎಂಟಿಸಿಗೆ ಬೈಕ್ ಸವಾರ ಬಲಿ
ಬೈಕ್ಗೆ ಬಿಎಂಟಿಸಿ ವೋಲ್ವೋ ಬಸ್ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಜನವರಿ 05ರಂದು ಮಾರತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ನಡೆದಿತ್ತು. ಎಳಂಗೋವನ್ ಸೆಂಕತ್ತವಲ್ (43) ಮೃತ ಅಪಘಾತದಲ್ಲಿ ಮೃತಪಟ್ಟಿದ್ದರು.
ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಮೃತ ಬೈಕ್ ಸವಾರ ಎಳಂಗೋವನ್ ಸೆಂಕತ್ತವಲ್ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ರಭಸಕ್ಕೆ ಬೈಕ್ ಸವಾರ ಕೆಳಗೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಭೀಕರತೆಗೆ ಎಳಂಗೋವನ್ ಸೆಂಕತ್ತವಲ್ ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದರು. ಘಟನೆ ಸಂಬಂಧ ಹೆಚ್ಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications