Get Updates
Get notified of breaking news, exclusive insights, and must-see stories!

ಬಿಬಿಎಂಪಿ ಎಲೆಕ್ಷನ್ ಎನ್ಎಂಕೆಆರ್ ವಿ ಹುಡುಗಿಯರ ರಿಯಾಕ್ಷನ್

ಬೆಂಗಳೂರು, ಆಗಸ್ಟ್, 17 : ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲು ಬೇಕಾದಷ್ಟು ಜನರಿದ್ದಾರೆ, ಬಿಬಿಎಂಪಿ ಚುನಾವಣೆಯಲ್ಲಿ ಏನಾಗುತ್ತೋ ಏನೋ ಎಂದೂ ತಲೆಕೆಡಿಸಿಕೊಂಡವರಿದ್ದಾರೆ. ಆದರೆ, ಸ್ನೇಹಿತರೆಲ್ಲ ಸಿಕ್ಕಾಗ ಸಖತ್ ಹರಟೆ ಕೊಚ್ಚುತ್ತ, ಓದಿನ ಜೊತೆಗೆ ಫ್ಯಾಷನ್, ಶಾಪಿಂಗ್ ನಲ್ಲಿ ಕಳೆದುಹೋಗಿರುವ ಕಾಲೇಜು ಹುಡುಗಿಯರು ಈ ಚುನಾವಣೆ ಬಗ್ಗೆ ಏನಂತಾರೆ? ಎಷ್ಟು ಹುಡುಗಿಯರು ಮತ ಹಾಕಲು ಸಿದ್ಧರಾಗಿದ್ದಾರೆ? ಎಷ್ಟು ಜನರಿಗೆ ಇದರ ಬಗ್ಗೆ ಎಳ್ಳಷ್ಟೂ ಕುತೂಹಲವಿಲ್ಲ? ರಿಯಾಲಿಟಿ ಚೆಕ್ ಇಲ್ಲಿದೆ.

ಮತದಾನದ ಇತಿಹಾಸ ಪುಟಗಳನ್ನು ಕೊಂಚ ತಿರುವು ಹಾಕಿ ನೋಡಿ..ಯಾರು ಮತ ಚಲಾಯಿಸಲು ಹೆಚ್ಚು ಆಸಕ್ತಿವಹಿಸಿರುತ್ತಾರೆ ಎಂಬುದು ನಿಮ್ಮ ಜ್ಞಾನಕ್ಕೆ ದಕ್ಕುತ್ತದೆ. ಜೀವನ ಪೂರ್ತಿ ಔಟಿಂಗ್, ಡೇಟಿಂಗ್, ಈಟಿಂಗ್ ನಲ್ಲಿ ಮಗ್ನನಾಗಿರುವ ಯುವಜನಾಂಗವೇ ಮತ ಚಲಾಯಿಸುವುವಿಕೆಯಲ್ಲಿ ಹಿಂದೇಟು ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.[ಬಿಬಿಎಂಪಿ ಅಭ್ಯರ್ಥಿಗಳಿಗೆ ಬಿಪ್ಯಾಕ್ ನಿಂದ ತರಬೇತಿ]

College girls in Bengaluru speak about BBMP election

ಮತ ಚಲಾಯಿಸಲು ಹಿರಿಯರು ತೋರುತ್ತಿರುವ ಉತ್ಸಾಹ, ಯುವಜನಾಂಗದಲ್ಲಿ ಕಡಿಮೆಯಾಗಲು ಕಾರಣವೇನು? ರಾಜಕೀಯ ಕುರಿತಾಗಿರುವ ಅಸಮಾಧಾನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಜಯನಗರದ ಎನ್‌ಎಂಕೆಆರ್ ವಿ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಒನ್ ಇಂಡಿಯಾದೊಂದಿಗೆ ತಮ್ಮ ಒಲವು, ಬೆಂಗಳೂರಿನ ವಿಷನ್, ಬಿಬಿಎಂಪಿ ಕುರಿತಾದ ಬೇಸರ, ಸಿಟ್ಟು ಸೆಡವುಗಳನ್ನು ಹಂಚಿಕೊಂಡಿದ್ದಾರೆ.

ಟ್ರಾಫಿಕ್ ಸಮಸ್ಯೆ ತಪ್ಪಿಸಿ, ಸ್ವಚ್ಛ ಬೆಂಗಳೂರು - ಅಚ್ಛ ಬೆಂಗಳೂರು ಮಾಡಿ :

ಬಿ.ಎ ಕೊನೆ ವರ್ಷದ ವಿದ್ಯಾರ್ಥಿನಿ ಸುಪ್ರಿಯಾ ಅವರು " ಮಳೆ ಬಂದರೆ ರಸ್ತೆಗಳಲ್ಲಿ ಕಾಲಿಡುವುದೇ ಕಷ್ಟ, ಕೊಳಚೆ ನೀರು, ಘನತ್ಯಾಜ್ಯಗಳು ರಸ್ತೆ ಮೇಲೆಯೇ ಬಂದು ಬೀಳುತ್ತದೆ. ಮೊದಲು ರಸ್ತೆ, ಚರಂಡಿ, ಕಸವಿಲೇವಾರಿ ಕುರಿತಾಗಿ ಬಿಬಿಎಂಪಿ ಗಮನ ಹರಿಸಲೇಬೇಕು. ಇನ್ನು ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಸರಿಯಾದ ಸಮಯಕ್ಕೆ ಕಾಲೇಜು ತಲುಪುವುದೇ ದುಸ್ತರ.

ಬಿಬಿಎಂಪಿ ಚುನಾವಣೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಹಣಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಯೋಜನೆಗಳಿಗೆ ಮಂಜೂರಾಗುವ ಹಣವನ್ನು ವೈಯಕ್ತಿಕ ವಿಚಾರಗಳಿಗೆ ಖರ್ಚು ಮಾಡಬಾರದು. ನನಗೆ ಇಪ್ಪತ್ತು ವರ್ಷವಾದರೂ ರಾಜಕಾರಣದಲ್ಲಿ ಯಾರು ಒಳ್ಳೆಯವರು ಎನ್ನುವ ಗೊಂದಲದಲ್ಲಿಯೇ ಇದ್ದೇನೆ. ಇದು ನಮ್ಮ ಚುನಾವಣೆ ವ್ಯವಸ್ಥೆ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ಮುಕ್ತ, ಟ್ರಾಫಿಕ್ ಮುಕ್ತ ಮಾಡುತ್ತಾ ಸ್ವಚ್ಛ ಬೆಂಗಳೂರು, ಅಚ್ಛ ಬೆಂಗಳೂರು ಮಾಡಲು ಬಿಬಿಎಂಪಿ ಅಧಿಕಾರಿಗಳು ಶ್ರಮವಹಿಸಬೇಕು ಎನ್ನುತ್ತಾ ಬಿಬಿಎಂಪಿ ಕುರಿತಾಗಿ ಇರುವ ಅವರ ಬೇಸರವನ್ನು ಹೊರಹಾಕಿದರು.[ಬಿಜೆಪಿ ಪ್ರಣಾಳಿಕೆ: ಸಮಸ್ಯೆ ರಹಿತ,ಬೆಂಗಳೂರು ಅಭಿವೃದ್ಧಿ ಗುರಿ]

ಅಪ್ರಾಮಾಣಿಕ ಆಡಳಿತ ಬದಲು ಪ್ರಾಮಾಣಿಕತೆ ಆಡಳಿತ ನೀಡಿ:

ಚುನಾವಣೆ ಬಂದಾಗ ಮಾತ್ರ ಕೈಮುಗಿದು ನಮ್ಮ ಮುಂದೆ ಬರುವ ಅಭ್ಯರ್ಥಿಗಳು ಕೊನೆಗೆ ನಾವು ಇದ್ದೇವೋ ಇಲ್ಲವೋ ಎಂದು ಕೇಳುವ ಕೊಂಚ ಆಸಕ್ತಿಯೂ ತೋರುವುದಿಲ್ಲ. ಅವರ ಯಶಸ್ಸಿಗೆ ನಮ್ಮ ಮತವನ್ನು ಹಣಕೊಟ್ಟುಕೊಟ್ಟು ಕೊಳ್ಳಲು ಮುಂದಾಗುತ್ತಾರೆ. ಇದರಲ್ಲಿಯೇ ಅಪ್ರಾಮಾಣಿಕತೆ ಮೆರೆಯುವ ಇವರು ಇನ್ನು ಅಧಿಕಾರ ಗದ್ದುಗೆ ಏರಿ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಾರಾ?

ಬಿಬಿಎಂಪಿ ಚುನಾವಣಾ ಅಭ್ಯರ್ಥಿಗಳು ಗೆಲ್ಲಲು ವಹಿಸುವ ಶ್ರಮವನ್ನು ಕೆಲಸ ಅವಧಿಯನ್ನು ಲೆಕ್ಕಿಸದೆ ಬೆಂಗಳೂರನ್ನು ಸದಾ ಸ್ವಚ್ಛವಾಗಿಡಲು ಮೀಸಲಾಗಿಡಲಿ. ನಮಗೆ ಓಟು ರಾಜಕಾರಣ ಬೇಡ. ಬಿಬಿಎಂಪಿ ಸುಪರ್ಧಿನಲ್ಲಿ ನಡೆಯುವ ಎಲ್ಲಾ ಕಾರ್ಯಗಳು ಅಚ್ಚುಕಟ್ಟಾಗಿ ನಡೆದರೆ ಅಷ್ಟೇ ಸಾಕು ಎಂದು ಹೇಳುತ್ತಾರೆ ಪತ್ರಿಕೋದ್ಯಮ ವಿದ್ಯಾರ್ಥಿನಿ ಶ್ರೀದೇವಿ.

ಅಭ್ಯರ್ಥಿಗಳೇ ಹೇಳಿದಂತೆಯೇ ನಡೆದುಕೊಳ್ಳಿ :

ಅನುಷ ಅವರು ಬಿಬಿಎಂಪಿ ಬಗ್ಗೆ ನನಗೆ ಸರಿಯಾದ ಜ್ಞಾನವಿಲ್ಲ ಎಂದು ಹೇಳುತ್ತಲೇ, ಮೊದಲು ಬಿಬಿಎಂಪಿ ಬೆಂಗಳೂರಿನ Infrastructure ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಭ್ಯರ್ಥಿಗಳು ಚುನಾವಣೆ ವೇಳೆ ಮಾತ್ರ ಮುಖ ತೋರಿಸದೆ, ಭರವಸೆ ಮಾತುಗಳಾಡದೆ ನಿತ್ಯವು ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರಿಗೆ ಹೇಳಿದ ಎಲ್ಲಾ ಭರವಸೆಗಳನ್ನು ಈಡೇರಿಸಬೇಕು, ಹೇಳಿದಂತೆ ನಡೆದುಕೊಳ್ಳಬೇಕು ಎಂದು ಹೇಳುತ್ತಾರೆ.[500 ರೂ. ಕೊಟ್ಟವರನ್ನು ಆರಿಸಿ ಐದು ವರ್ಷ ಕೂರಿಸಬೇಡಿ]

ವಿದ್ಯಾರ್ಥಿಗಳ ಸಮಸ್ಯೆಯ ಕಡೆಗೂ ಕೊಂಚ ನೋಡಿ :

ಸೌಮ್ಯ ಅವರು ಒನ್ ಇಂಡಿಯಾದೊಂದಿಗೆ ಮಾತಿಗಿಳಿದಾಗ ಜಯಶಾಲಿಯಾಗುವ ಪ್ರತಿಯೊಬ್ಬ ಅಭ್ಯರ್ಥಿಗಳು ವಿದ್ಯಾರ್ಥಿಗಳು ಎದುರಿಸುವ ತೊಂದರೆಗಳಿಗೆ ಮೊದಲು ಗಮನ ಹರಿಸಬೇಕು. ದಿನಗಳೆದಂತೆ ರಸ್ತೆಯ ಆಕಾರಗಳೇ ಬದಲಾಗುತ್ತಿದೆ, ರಸ್ತೆಗಿಂತ ಹೊಂಡ ಗುಂಡಿಗಳೇ ಹೆಚ್ಚು ಕಾಣುತ್ತಿದೆ.

ಒಂದೆಡೆ ಮರಬಿದ್ದು 3 ದಿನಗಳಾದರೂ ಬಿಬಿಎಂಪಿ ಅದನ್ನು ತೆರವುಗೊಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಸಾರ್ವಜನಿಕರು ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆಯಬೇಕಾಗಿತ್ತು ಎನ್ನುತ್ತಾ ಕೆಲಸದಲ್ಲಿ ನಿರ್ಲಕ್ಷತೆ ವಹಿಸದೆ ಜನರ ಅಹವಾಲುಗಳಿಗೆ ತಕ್ಕಂತೆ ಬಿಬಿಎಂಪಿ ಕಾರ್ಯ ನಿರ್ವಹಿಸಬೇಕು ಎಂದು ಕೊಂಚ ಖಾರವಾಗಿಯೇ ನುಡಿದರು.

ಸಂಪೂರ್ಣವಾಗಿ ಬೆಂಗಳೂರೇ ಬದಲಾಗಲಿ :

ನಂದಿನಿ ಮಾತನಾಡಿ ಪೂರ್ತಿಯಾಗಿ ಬೆಂಗಳೂರೇ ಬದಲಾಗಬೇಕು. ಬೆಂಗಳೂರಿನಲ್ಲಿ ಸಾವಿರಾರು ಸಮಸ್ಯೆಗಳಿವೆ. ಸರಗಳ್ಳತನ, ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ರೀತಿ ಯೋಜನೆಗಳನ್ನು ರೂಪಿಸುವತ್ತಾ ಗಮನ ಕೇಂದ್ರಿಕರಿಸಬೇಕು. ಎಂದು ಮಾತು ಮುಗಿಸಿದರು.

ಈ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದಲೇ ಬಿಬಿಎಂಪಿ ಬಗೆಗೆ ತಮ್ಮ ಒಲವನ್ನು ವ್ಯಕ್ತ ಪಡಿಸಿದರೆ, ಇನ್ನು ಕೆಲವು ವಿದ್ಯಾರ್ಥಿಗಳು ನಾವು ಚುನಾವಣಾ ಗುರುತಿನ ಚೀಟಿಯನ್ನೇ ಮಾಡಿಸಿಲ್ಲ ಎಂದು ಉತ್ತರಿಸಿದರೆ, ಇನ್ನು ಕೆಲವರು ತರಗತಿಗಳಿಗೆ ತಡವಾಗುತ್ತಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎನ್ನುತ್ತಲೇ ಯಾವುದೇ ಪ್ರತಿಕ್ರಿಯೆ ನೀಡದೆ ಹೋದರು.

ಹಿಂದಿನಿಂದಲೂ ನಮ್ಮ ಯುವಜನಾಂಗದ ಕುರಿತಾಗಿ ಗಣ್ಯರು ಭರವಸೆಯ ದೀಪ ಹೊತ್ತಿಸಿಕೊಂಡು ಕೂತಿದ್ದಾರೆ. 'ಯುವಶಕ್ತಿ ದೇಶದ ಶಕ್ತಿ', 'ಯುವಶಕ್ತಿ ಉಕ್ಕುಕ್ಕಿ ಕೊಚ್ಚಿಹೋಗುವ ಮುನ್ನ ಕಟ್ಟುವೆವು ನಾಡೊಂದನು, ರಸದ ಬೀಡೊಂದನು' ಎಂದು ಗುನುಗುತ್ತಲೇ ಇದ್ದಾರೆ.

ಆದರೆ ಯುವ ಜನಾಂಗ ಮಾಡುತ್ತಿರುವುದೇನು? ಸಾರ್ವತ್ರಿಕ ರಜೆ ಘೋಷಣೆ ಹಿನ್ನೆಲೆಯಲ್ಲಿ ಎಲ್ಲೆಲ್ಲೆ ಪ್ರವಾಸ, ಮೋಜು, ಮಸ್ತಿ ಮಾಡಲು ಹೊರಡುತ್ತಿದ್ದಾರೋ ಯಾರು ತಿಳಿಯದವರೂ ಇಲ್ಲ? ಕೇಳುವವರೂ ಇಲ್ಲ. ನೈತಿಕತೆ ಸಾರುವ ಇವರೇ ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ. ಮತದಾನವನ್ನು ಅಸಡ್ಡೆಯಿಂದ ಕಾಣುತ್ತಿದ್ದಾರೆ.

ಮತದಾನ ಮಾಡದ ಯುವಜನಾಂಗ ದೇಶ ವ್ಯವಸ್ಥೆ ಸರಿಯಿಲ್ಲವೆಂದೋ, ಶಿಕ್ಷಣದ ಗುಣಮಟ್ಟ ಸರಿಯಿಲ್ಲವೆಂದೋ ವಿದೇಶಕ್ಕೆ ಕಾಲು ಕೀಳುತ್ತಾರೆ. ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸದ ಇವರು ರಾಜಕೀಯ ಹೊಲಸು, ಭ್ರಷ್ಟ ರಾಜಕಾರಣಿಗಳು ಎಂದು ದೂರುತ್ತಲೇ ಕಾಲಹರಣ ಮಾಡುತ್ತಿದ್ದಾರೆ.

ಹಕ್ಕನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಮಾತನಾಡುವುದಕ್ಕಿಂತ, ಹಕ್ಕನ್ನು ನಿರ್ವಹಿಸಿ ಮಾತನಾಡಿದರೆ ಅವರ ಘನತೆ ಗೌರವಗಳು ಹೆಚ್ಚುತ್ತದೆ. ಅವರ ಒಲವುಗಳು, ಅಭಿಲಾಷೆಗಳಿಗೆ ತಕ್ಕಂತೆ ನಾಯಕರುಗಳ ಆಯ್ಕೆಯೂ ನಡೆಯುತ್ತದೆ. ದೇಶವೂ ಸುವ್ಯಸವಸ್ಥೆಯತ್ತ ಸಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+