ಸಮ್ಮಿಶ್ರ ಸರ್ಕಾರಕ್ಕೆ ಭಯ ಶುರುವಾಗಿದೆ: ಯಡಿಯೂರಪ್ಪ
ಬೆಂಗಳೂರು, ಜುಲೈ 03: ಹೊಸ ಸರ್ಕಾರದ ಮೊದಲ ಅಧಿವೇಶನದ ಎರಡನೇ ದಿನವೇ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಂತರ ಸದನದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಸಾಲಮನ್ನಾ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚುನಾವಣೆಗೆ ಮುಂಚೆ ಹೇಳಿದಂತೆ 'ಸಂಪೂರ್ಣ ಸಾಲಮನ್ನಾ' ಮಾಡದೇ ಇದ್ದರೆ ಬಿಜೆಪಿ ಭಾರಿ ಹೋರಾಟ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
ಬಜೆಟ್ ನಂತರ ಸರ್ಕಾರ ಬೀಳುತ್ತದೆ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿದ್ದ ವಿಡಿಯೋ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಶಾಂತಿವನದಲ್ಲಿ ಕೂತು ಹೇಳಿದಂತೆ ಬಜೆಟ್ ನಂತರ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಿದೆ ಎಂದು ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರ ಕಾಲೆಳೆದರು.

ಬಜೆಟ್ ನಂತರ ಸಂಪುಟ ವಿಸ್ತರಣೆ, ಬಜೆಟ್ ನಂತರ ನಿಗಮ ಮಂಡಳಿಗಳಿಗೆ ನೇಮಕ ಎಂದು ಕಾಲಕ್ಷೇಪ ಮಾಡಲಾಗುತ್ತಿದೆ. ಬಜೆಟ್‌ಗೆ ಮುಂಚೆಯೇ ಮಾಡಿದರೆ ಭಿನ್ನಮತ ಸ್ಪೋಟವಾಗಿ ಸರ್ಕಾರ ಬೀಳಬಹುದೆಂಬ ಹೆದರಿಕೆ ಸರ್ಕಾರಕ್ಕೆ ಇದೆ ಎಂದು ಯಡಿಯೂರಪ್ಪ ಅವರು ಹೇಳಿದರು.
ಅಧಿವೇಶನದ ಚರ್ಚೆಯ ಮೊದಲ ದಿನವೇ ಸರ್ಕಾರಕ್ಕೆ ತೀಕ್ಷ್ಣ ಎಚ್ಚರಿಕೆ ರವಾನಿಸಿದ ಯಡಿಯೂರಪ್ಪ ಅವರು ತಾವು ಹಾಗೂ ತಮ್ಮ ಬಳಗ ಸುಮ್ಮನೆ ಕೂರುವರಲ್ಲ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಜುಲೈ 12ರ ವರೆಗೂ ಅಧಿವೇಶನ ನಡೆಯಲಿದ್ದು, ಜುಲೈ 5ರಂದು ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ.












Click it and Unblock the Notifications