ಐಪೋನ್ ಧ್ವಂಸ ಪ್ರಕರಣ: ತಪ್ಪಿತಸ್ಥರ ಮೇಲೆ ಈ ಕ್ರಮಕ್ಕೆ ಮುಂದಾದ ಸರ್ಕಾರ!
ಬೆಂಗಳೂರು, ಡಿ. 13: ಐಫೋನ್ ತಯಾರಿಕಾ ಘಟಕದಲ್ಲಿನ ಕಾರ್ಮಿಕರ ದಾಂಧಲೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಮೊದಲೇ ಕೈಗಾರಿಕಾ ಉತ್ಪನ್ನಗಳ ಉತ್ಪಾದನೆ ಕುಂಠಿತಗೊಂಡಿದೆ. ಜೊತೆಗೆ ಇಂತಹ ಘಟನೆಗಳಿಂದ ಬಂಡವಾಳ ಹೂಡಿಕೆದಾರರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಪರಿಗಣಿಸಿರುವ ಸರ್ಕಾರ ಘಟನೆಯ ಕುರಿತು ಗಂಭೀರ ಕ್ರಮಕ್ಕೆ ಮುಂದಾಗಿದೆ.
Recommended Video

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಕಾರ್ಮಿಕರ ಪ್ರತಿಭಟನೆ ಹಾಗೂ ದೊಂಬಿಯನ್ನು ಖಂಡಿಸಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ಆದಷ್ಟು ಬೇಗ ಬಿಕ್ಕಟ್ಟು ಬಗೆಹರಿಯುತ್ತದೆ ಎಂದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಇಂಥ ಘಟನೆ ನಡೆಯಬಾರದಿತ್ತು. ದುರದೃಷ್ಟಕರ ಘಟನೆ. ಯಾರೂ ಇಂಥ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ ಹಾಗೂ ಸಹಿಸುವ ಪ್ರಶ್ನೆಯೂ ಇಲ್ಲ. ಆ ಕಾರ್ಖಾನೆಯ ವಿರುದ್ಧ ದಾಳಿ ನಡೆಸಿ ಅದರ ಆಸ್ತಿ ನಷ್ಟಕ್ಕೆ ಕಾರಣವಾಗಿರುವ ಕಾರ್ಮಿಕರೇ ಇರಲಿ, ಇನ್ನು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತನಿಖೆ ಆರಂಭವಾಗಿದೆ
ಜತೆಗೆ, ಇಡೀ ಘಟನೆಗೆ ಕಾರಣವೇನು? ಕಾರ್ಮಿಕರು ಯಾಕೆ ಆಕ್ರೋಶಕ್ಕೆ ಒಳಗಾದರು? ಬೆಳಗ್ಗೆ ಪಾಳಿ ಬದಲಾವಣೆ ಹೊತ್ತಿನಲ್ಲಿ ಸೃಷ್ಟಿಯಾದ ಪರಿಸ್ಥಿತಿ ಏನು? ಯಾರಾದರೂ ಪ್ರಚೋದನೆ ಮಾಡಿದ್ದರಾ ಎಂಬಿತ್ಯಾದಿ ಸಂಗತಿಗಳ ಬಗ್ಗೆಯೂ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಸಹಿಸಲಸಾಧ್ಯವಾದ ಘಟನೆ
ಕಾರ್ಮಿಕರಿಗೆ ವೇತನ ನೀಡಿಲ್ಲ ಅಥವಾ ವೇತನ ಕಡಿತ ಮಾಡಿ ನೀಡಲಾಗುತ್ತಿತ್ತು ಎಂಬ ಅಂಶಗಳ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಕಾರ್ಮಿಕರಿಗೆ ಅಂಥ ಸಮಸ್ಯೆ ಇದ್ದರೆ ಕಾರ್ಮಿಕ ಆಯುಕ್ತರಿಗೆ ದೂರು ನೀಡಬಹುದಿತ್ತು ಅಥವಾ ಜಿಲ್ಲಾಧಿಕಾ ಅವರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಇಂಥ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಡಾ. ಅಶ್ವಥ್ ನಾರಾಯಣ ಅವರು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳಿಂದ ಅವಲೋಕನ
ಐಟಿ, ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಪರಿಸ್ಥಿತಿಯನ್ನು ಖುದ್ದು ಅವಲೋಕಿಸುತ್ತಿದ್ದಾರೆ. ವಿಸ್ಟ್ರಾನ್ ಸಂಸ್ಥೆಯ ಪ್ರತಿನಿಧಿಗಳ ಜತೆಗೂ ಮಾತುಕತೆ ನಡೆಸಿ, ಬಿಕ್ಕಟ್ಟು ಶಮನ ಮಾಡಲಾಗುವುದು. ಘಟನೆಯಲ್ಲಿ ಏಕಾಏಕಿ ದಾಳಿ ಮಾಡಿರುವುದು ಸರಿಯಲ್ಲ. ಕೈಗಾರಿಕೆ ಅಭಿವೃದ್ಧಿಗೆ ನಾವು ಗಮನ ಕೊಡಬೇಕಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ಘಟನೆಯ ವಿವರ
ಕೋಲಾರ ಜಿಲ್ಲೆ ನರಸಾಪುರದ ಸಮೀಪದ ಐಫೋನ್ ತಯಾರಿಕಾ ಕಾರ್ಖಾನೆ, ವಿಸ್ಟ್ರಾನ್ ಕಂಪನಿ ವಿರುದ್ಧ ತಿರುಗಿಬಿದ್ದಿರುವ ಕಾರ್ಮಿಕರು 21 ಸಾವಿರ ಐಪೋನ್ ಹಾಗೂ ಕೋಟ್ಯಂತರ ಮೌಲ್ಯದ ಉಪಕರಣಗಳನ್ನು ಧ್ವಂಸ ಮಾಡಿದ್ದರು. ಸಾವಿರಾರು ನೌಕರರು ಕಂಪನಿ ವಾಹನ ಮತ್ತು ಕಟ್ಟಡಗಳಿಗೂ ಕಲ್ಲು ಬೀಸಿ ಛಿದ್ರ ಮಾಡಿದ್ದು, ಸಿಕ್ಕ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆಗಮಿಸುತ್ತಿದ್ದಂತೆ ಎಲ್ಲಾ ಕಾರ್ಮಿಕರು ಪರಾರಿಯಾಗಿದ್ದಾರೆ.
ಬೆಳಗ್ಗೆ ಐದು ಗಂಟೆಗೆ ರಾತ್ರಿ ಪಾಳಿಯಲ್ಲಿದ್ದ ಐದು ಸಾವಿರ ಕಾರ್ಮಿಕರು ಹಾಗೂ ಬೆಳಗ್ಗೆ ಪಾಳಿಗೆ ಬಂದಿದ್ದ ನಾಲ್ಕು ಸಾವಿರ ನೌಕರರು ಸೇರಿ ಶನಿವಾರ ಏಕಾಏಕಿ ಕಂಪನಿಗೆ ಕಲ್ಲು ಹೊಡೆದು ಜಖಂಗೊಳಿಸಿದ್ದಾರೆ. ಕಂಪನಿಯಲ್ಲಿದ್ದ ಸಾವಿರಾರು ಕೋಟಿ ಮೌಲ್ಯದ ಐಫೋನ್ ಗಳನ್ನು ಜಜ್ಜಿ ನಿರುಪಯುಕ್ತಗೊಳಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ನೌಕರರು ಪರಾರಿಯಾಗಿದ್ದಾರೆ. ರಸ್ತೆ ಬದಿ ಸಿಕ್ಕಿದ್ದ ಸುಮಾರು ನೂರು ಕಾರ್ಮಿಕರನ್ನು ಬಂಧಿಸಿದ್ದಾರೆ. ಘಟನೆಯ ಹಿಂದಿರುವ ಕಾರಣದ ಕುರಿತು ಇದೀಗ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.












Click it and Unblock the Notifications